ಅಲಿಪುರ್ದೂರ್: ಪಶ್ಚಿಮ ಬಂಗಾಳದ ಅಲಿಪುರ್ದೂರ್ ಮತ್ತು ಕೂಚ್ ಬೆಹಾರ್ ಜಿಲ್ಲೆಗಳಲ್ಲಿ ₹1,010 ಕೋಟಿ ವೆಚ್ಚದ ನಗರ ಅನಿಲ ವಿತರಣೆ (ಸಿಜಿಡಿ) ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ‘ಇಂದು ಭಾರತ ‘ವಿಕಸಿತ ರಾಷ್ಟ್ರ’ವಾಗುವತ್ತ (ಅಭಿವೃದ್ಧಿ ಹೊಂದಿದ ರಾಷ್ಟ್ರ) ಸಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ಪಶ್ಚಿಮ ಬಂಗಾಳದ ಭಾಗವಹಿಸುವಿಕೆಯೂ ಅತ್ಯಗತ್ಯ. ಈ ಉದ್ದೇಶದಿಂದಲೇ ಕೇಂದ್ರ ಸರ್ಕಾರವು ರಾಜ್ಯದಲ್ಲಿ ಮೂಲಸೌಕರ್ಯ, ನಾವೀನ್ಯತೆ ಮತ್ತು ಹೂಡಿಕೆಗೆ ನಿರಂತರವಾಗಿ ಹೊಸ ಉತ್ತೇಜನ ನೀಡುತ್ತಿದೆ’ ಎಂದು ಹೇಳಿದ್ದಾರೆ.
‘ನಗರ ಅನಿಲ ವಿತರಣೆ (ಸಿಜಿಡಿ) ಯೋಜನೆ ಎಂದರೆ ಕೇವಲ ಪೈಪ್‌ಲೈನ್‌ಗಳನ್ನು ಹಾಕುವುದಷ್ಟೆ ಅಲ್ಲ. ಬದಲಾಗಿ ಕಲ್ಯಾಣ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಈ ಯೋಜನೆಯಡಿ ಮನೆಗಳಿಗೆ ಶುದ್ಧ ಮತ್ತು ಕೈಗೆಟುಕುವ ದರದಲ್ಲಿ ಇಂಧನವನ್ನು ಪೂರೈಸುತ್ತೇವೆ’ ಎಂದು ತಿಳಿಸಿದ್ದಾರೆ.
ಅಲಿಪುರ್ದೂರ್‌ನ ಈ ಭೂಮಿ ಗಡಿಗಳಿಂದ ಮಾತ್ರವಲ್ಲದೆ ವಿಶಿಷ್ಟ ಭೌಗೋಳಿಕತೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ ಎಂದ ಮೋದಿ, ನಗರ ಅನಿಲ ವಿತರಣೆ ಯೋಜನೆಯು ಈ ಪ್ರದೇಶದ ಶುದ್ಧ ಇಂಧನ ಮೂಲಸೌಕರ್ಯವನ್ನು ಬಲಪಡಿಸುವ ಕೇಂದ್ರದ ಬದ್ಧತೆಯನ್ನು ಎತ್ತಿ ತೋರಿಸುತ್ತದೆ ಎಂದು ಅವರು ವಿವರಿಸಿದ್ದಾರೆ.
ಉಭಯ ಜಿಲ್ಲೆಗಳಲ್ಲಿ ಈ ಯೋಜನೆಯಡಿ 2.5 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಬಳಕೆದಾರರಿಗೆ ಕೊಳವೆ (ಪೈಪ್) ಮೂಲಕ ನೈಸರ್ಗಿಕ ಅನಿಲ (ಸಿಎನ್‌ಜಿ) ಸಂಪರ್ಕ ಒದಗಿಸುವ ಗುರಿಯನ್ನು ಹೊಂದಿದೆ.
ಯೋಜನೆಯ ಭಾಗವಾಗಿ ಸರ್ಕಾರ ನಿಗದಿಪಡಿಸಿದ ಕನಿಷ್ಠ ಕೆಲಸದ ಕಾರ್ಯಕ್ರಮ (ಎಂಡಬ್ಲ್ಯೂಪಿ) ಗುರಿಗಳಿಗೆ ಅನುಗುಣವಾಗಿ ಸುಮಾರು 19 ಸಿಎನ್‌ಜಿ ಕೇಂದ್ರಗಳನ್ನು ಸಹ ಸ್ಥಾಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಯೋಜನೆಯಡಿ ವಿಶ್ವಾಸಾರ್ಹ, ಪರಿಸರ ಸ್ನೇಹಿ ಮತ್ತು ಪರಿಣಾಮಕಾರಿಯಾಗಿ ಇಂಧನ ಪೂರೈಕೆ ಮಾಡಲಾಗುವುದು. ಜತೆಗೆ, ಈ ಪ್ರದೇಶದಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.