
ನವದೆಹಲಿ: ‘ನಾಲ್ಕು ದಶಕದ ಕಾನೂನು ವೃತ್ತಿಯ ಪಯಣದ ಕೊನೆಯಲ್ಲಿ ‘ಸಂಪೂರ್ಣ ತೃಪ್ತಿ ಮತ್ತು ಸಂತೃಪ್ತಿ’ಯೊಂದಿಗೆ ‘ಕಾನೂನು ವಿದ್ಯಾರ್ಥಿ’ಯಾಗಿ ನಿರ್ಗಮಿಸುತ್ತಿದ್ದೇನೆ’ ಎಂದು ಸುಪ್ರೀಂ ಕೋರ್ಟ್‌ನ ನಿರ್ಗಮಿತ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ನುಡಿದರು.
ಸುಪ್ರೀಂ ಕೋರ್ಟ್‌ನ ನಿಯೋಜಿತ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಕೆ.ವಿನೋದ್ ಚಂದ್ರನ್ ಅವರನ್ನೊಳಗೊಂಡ ವಿಧ್ಯುಕ್ತವಾದ ಸಮಾರಂಭಿಕ ಪೀಠದಲ್ಲಿ ಅವರು ಭಾವುಕರಾಗಿ ಮಾತನಾಡಿದರು.
ಬಿ.ಆರ್. ಗವಾಯಿ ಅವರು, ಇದೇ ವರ್ಷದ ಮೇ 14ರಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆರು ತಿಂಗಳಿಗೂ ಹೆಚ್ಚು ಕಾಲ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಿರುವ ಗವಾಯಿ ಅವರು ನವೆಂಬರ್ 23ರಂದು ನಿವೃತ್ತಿಯಾಗಲಿದ್ದಾರೆ. ಶುಕ್ರವಾರ (ನ.20) ಅವರ ಕೊನೆಯ ಕೊನೆಯ ಕಲಾಪ.
ನಾಲ್ಕು ದಶಕಗಳ ವೃತ್ತಿ ಬದುಕಿನ ದಿನಗಳನ್ನು ನೆನಪಿಸಿಕೊಂಡ ಗವಾಯಿ ಅವರು, ‘ಈ ದೇಶಕ್ಕಾಗಿ ನಾನು ಏನು ಮಾಡಬಹುದಿತ್ತೋ, ಅದನ್ನು ಮಾಡಿರುವ ಸಂಪೂರ್ಣ ತೃಪ್ತಿಯ ಭಾವನೆಯೊಂದಿಗೆ ನಿರ್ಗಮಿಸುತ್ತಿದ್ದೇನೆ. ಎಲ್ಲರಿಗೂ ಧನ್ಯವಾದಗಳು, ತುಂಬಾ ಧನ್ಯವಾದಗಳು’ ಎಂದು ಹೇಳಿದರು.
‘ನಾನು 1985ರಲ್ಲಿ ವಕೀಲ ವೃತ್ತಿಯ ಮೂಲಕ ಕಾನೂನು ಶಾಲೆಯನ್ನು ಪ್ರವೇಶಿಸಿದೆ. ಈಗಲೂ ನಾನು ಕಾನೂನು ವಿದ್ಯಾರ್ಥಿಯಾಗಿ ನಿರ್ಗಮಿಸುತ್ತಿದ್ದೇನೆ’ ಎಂದರು.
‘ಪ್ರತಿ ವಕೀಲರು, ನ್ಯಾಯಾಧೀಶರು ನಮ್ಮ ಸಂವಿಧಾನ ಪ್ರತಿಪಾದಿಸುವ ನ್ಯಾಯ, ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಎಂಬ ತತ್ವಗಳಿಗೆ ಒಳಪಡುತ್ತಾರೆ ಎಂದು ನಾನು ನಂಬುತ್ತೇನೆ. ನಮ್ಮೆಲ್ಲರಿಗೂ ತುಂಬಾ ಪ್ರಿಯವಾದ ಸಂವಿಧಾನದ ಈ ನಾಲ್ಕು ಅಂಶಗಳ ವ್ಯಾಪ್ತಿಯೊಳಗೆ ನನ್ನ ಕರ್ತವ್ಯಗಳನ್ನು ನಿರ್ವಹಿಸಲು ಪ್ರಯತ್ನಿಸಿದ್ದೇನೆ’ ಎಂದು ಅವರು ಹೇಳಿದರು.
‘ವಕೀಲ ವೃತ್ತಿಯ ನಂತರ ಹೈಕೋರ್ಟ್ ನ್ಯಾಯಮೂರ್ತಿಯಾಗಿ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಮತ್ತು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಸಾಗಿರುವ ಈ ನಲ್ವತ್ತು ವರ್ಷಗಳ ಪಯಣ ನನಗೆ ಬಹಳ ತೃಪ್ತಿ ನೀಡಿದೆ’ ಎಂದು ಬಣ್ಣಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.