ಬಿ.ಆರ್.ಗವಾಯಿ
ಮುಂಬೈ(ಮಹಾರಾಷ್ಟ್ರ): ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡ ಬಳಿಕ ಮೊದಲ ಬಾರಿಗೆ ತಮ್ಮ ತವರು ರಾಜ್ಯ ಮಹಾರಾಷ್ಟ್ರಕ್ಕೆ ಭೇಟಿ ನೀಡಿರುವ ಬಿ.ಆರ್.ಗವಾಯಿ ಅವರು ಶಿಷ್ಟಾಚಾರದಲ್ಲಾದ ಲೋಪದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
ಮೇ 14 ರಂದು ಸಿಜೆಐ ಆಗಿ ಪ್ರಮಾಣ ವಚನ ಸ್ವೀಕರಿಸಿರುವ ಗವಾಯಿ ಅವರು, ಮಹಾರಾಷ್ಟ್ರ ಮತ್ತು ಗೋವಾ ಬಾರ್ ಕೌನ್ಸಿಲ್ ಜಂಟಿಯಾಗಿ ಆಯೋಜಿಸಿರುವ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಲು ಭಾನುವಾರ ಮುಂಬೈಗೆ ಬಂದಿದ್ದರು.
ಈ ವೇಳೆ ಅವರನ್ನು ಸ್ವಾಗತಿಸಬೇಕಿದ್ದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕರು(ಡಿಜಿಪಿ)/ನಗರ ಪೊಲೀಸ್ ಆಯುಕ್ತರು ಗೈರಾಗಿದ್ದರು.
‘ಒಂದು ಸಂಸ್ಥೆಯ ಮುಖ್ಯಸ್ಥರು ರಾಜ್ಯಕ್ಕೆ ಬಂದಾಗ, ವಿಶೇಷವಾಗಿ ಅವರು ಅದೇ ರಾಜ್ಯದವರು ಆಗಿದ್ದಾಗ ಅವರನ್ನು ಸ್ವಾಗತಿಸಲು ರಾಜ್ಯದ ಮುಖ್ಯ ಕಾರ್ಯದರ್ಶಿ, ಡಿಜಿಪಿ ಅಥವಾ ನಗರ ಪೊಲೀಸ್ ಆಯುಕ್ತರು ಅಲ್ಲಿಗೆ ಬರಲು ಬಯಸದಿದ್ದರೆ, ಅದರ ಸರಿ ತಪ್ಪು ಯೋಚಿಸುವುದು ಅವರಿಗೆ ಬಿಟ್ಟಿದ್ದು’ ಎಂದು ಸಿಜೆಐ ಅವರು ಸನ್ಮಾನ ಕಾರ್ಯಕ್ರಮದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
‘ಇಂತಹ ಕ್ಲುಲ್ಲಕ ವಿಚಾರಗಳ ಬಗ್ಗೆ ಗಮನ ಸೆಳೆಯಬೇಕು ಎಂದು ನನಗೆ ಅನಿಸುತ್ತಿಲ್ಲ. ಆದರೆ, ಜನರಿಗೆ ಈ ಬಗ್ಗೆ ತಿಳಿಸಬೇಕಾದ ಅಗತ್ಯವಿದೆ’ ಎಂದು ಹೇಳಿದ್ದಾರೆ.
‘ಇದೇ ನನ್ನ ಸ್ಥಾನದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ, ಸಂವಿಧಾನದ 142ನೇ ವಿಧಿಯ ನಿಬಂಧನೆಗಳನ್ನು ಪರಿಗಣಿಸುತ್ತಿದ್ದರು’ ಎಂದೂ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.