ನವದೆಹಲಿ: ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ ಅವರ ಮೇಲೆ 71 ವರ್ಷದ ರಾಕೇಶ್ ಕಿಶೋರ್ ಎಂಬ ವಕೀಲ ನ್ಯಾಯಾಲಯದ ಸಭಾಂಗಣದಲ್ಲಿ (ಕೋರ್ಟ್ ನಂ.1) ಸೋಮವಾರ ಬೆಳಿಗ್ಗೆ ಶೂ ಎಸೆಯಲು ಯತ್ನಿಸಿದ್ದಾರೆ.
ಇವರನ್ನು ನ್ಯಾಯಾಲಯದ ಭದ್ರತಾ ಸಿಬ್ಬಂದಿ ಸಭಾಂಗಣದಿಂದ ಹೊರಗೆ ಎಳೆದೊಯುತ್ತಿದ್ದಾಗ ‘ಸನಾತನ ಧರ್ಮದ ಮೇಲಿನ ಅವಮಾನವನ್ನು ಹಿಂದೂಸ್ತಾನವು ಸಹಿಸುವುದಿಲ್ಲ’ ಎಂದು ರಾಕೇಶ್ ಕೂಗಾಡಿದರು. ಘಟನೆಯಿಂದ ವಿಚಲಿತರಾಗದ ಗವಾಯಿ ಅವರು ವಾದ–ಪ್ರತಿವಾದಗಳನ್ನು ಮುಂದುವರಿಸುವಂತೆ ವಕೀಲರಿಗೆ ಸೂಚಿಸಿದರು.
ಆಗಿದ್ದೇನು?:
ವಿಚಾರಣೆ ಆರಂಭವಾಗುತ್ತಿದ್ದಂತೆಯೇ ರಾಕೇಶ್ ಅವರು ಸಿಜೆಐ ಗವಾಯಿ ಅವರಿದ್ದ ಪೀಠದ ಬಳಿ ಬಂದರು. ತಕ್ಷಣವೇ ತಮ್ಮ ಸ್ಪೋರ್ಟ್ಸ್ ಶೂ ಅನ್ನು ಬಿಚ್ಚಲು ಮುಂದಾದರು. ಇದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ತಕ್ಷಣವೇ ರಾಕೇಶ್ ಅವರನ್ನು ತಡೆದರು. ಸಿಜೆಐ ಗವಾಯಿ ಅವರೊಂದಿಗೆ ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರೂ ಪೀಠದಲ್ಲಿದ್ದರು.
ಅಮಾನತು:
ದೆಹಲಿಯ ಮಯೂರ್ ವಿಹಾರದ ನಿವಾಸಿಯಾಗಿರುವ ರಾಜೇಶ್ ಅವರು ದೆಹಲಿ ವಕೀಲರ ಪರಿಷತ್ತಿನ ಸದಸ್ಯರಾಗಿದ್ದಾರೆ. ಭಾರತೀಯ ವಕೀಲರ ಪರಿಷತ್ತು ರಾಕೇಶ್ ಅವರನ್ನು ಶೂ ಎಸೆಯಲು ಯತ್ನಿಸಿದ ಬಳಿಕ ವಕೀಲಿಕೆ ನಡೆಸುವುದರಿಂದ ಅಮಾನತು ಮಾಡಿದೆ.
ಖಂಡನೆ:
ಘಟನೆಯನ್ನು ವಿವಿಧ ವಕೀಲರ ಸಂಘಟನೆಗಳು ಖಂಡಿಸಿವೆ. ಸುಪ್ರೀಂ ಕೋರ್ಟ್‌ನ ವಕೀಲರ ಸಂಘವು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ‘ಇದೊಂದು ಆಘಾತಕಾರಿಯಾದ ಖಂಡಿಸಲೇ ಬೇಕಾದ ಕೃತ್ಯವಾಗಿದೆ. ವಕೀಲರೊಬ್ಬರು ಮಾಡುವಂಥ ಕೆಲಸ ಇದಲ್ಲ. ಪೀಠ ಮತ್ತು ವಕೀಲರ ಮಧ್ಯೆ ಇರುವ ಪರಸ್ಪರ ಗೌರವಪೂರ್ಣ ಸಂಬಂಧದ ಮೂಲಾಧಾರದ ಮೇಲೆಯೇ ಈ ಕೃತ್ಯವು ದಾಳಿ ನಡೆಸಿದೆ’ ಎಂದಿದೆ.
ವಿಚಲಿತರಾಗುವುದು ಬೇಡ. ನಾನೂ ವಿಚಲಿತನಾಗಿಲ್ಲ. ಇಂಥ ಘಟನೆಗಳು ನನ್ನ ಮೇಲೆ ಯಾವ ಪರಿಣಾಮವನ್ನೂ ಬೀರುವುದಿಲ್ಲಬಿ.ಆರ್. ಗವಾಯಿ ಸಿಜೆಐ ಸುಪ್ರೀಂ ಕೋರ್ಟ್
‘ನಿಮ್ಮ ದೇವರಲ್ಲಿಯೇ ಪ್ರಾರ್ಥಿಸಿ’
‘ಏನಾದರೂ ಮಾಡುವಂತೆ ಹೋಗಿ ನಿಮ್ಮ ದೇವರಲ್ಲಿಯೇ ಕೇಳಿಕೊಳ್ಳಿ. ನೀವು ವಿಷ್ಣುವಿನ ಪರಮ ಭಕ್ತ ಎಂದು ಹೇಳಿಕೊಂಡಿದ್ದೀರಿ. ಆದ್ದರಿಂದ ನೀವೇ ಹೋಗಿ ದೇವರಲ್ಲಿ ಪ್ರಾರ್ಥಿಸಿ. ಇದು ಪುರಾತತ್ವ ಇಲಾಖೆಗೆ ಸೇರಿದ ಜಾಗ. ಇದಕ್ಕೆ ಇಲಾಖೆ ಅನುಮತಿ ನೀಡಬೇಕು’ ಎಂದು ಸಿಜೆಐ ಗವಾಯಿ ಅವರು ಅರ್ಜಿಯೊಂದರ ವಿಚಾರಣೆ ವೇಳೆ ಇತ್ತೀಚೆಗೆ ಹೇಳಿದ್ದರು. ಈ ಹೇಳಿಕೆಯ ಕಾರಣಕ್ಕೇ ರಾಕೇಶ್ ಅವರು ಸಿಜೆಐ ಅವರ ಮೇಲೆ ಶೂ ಎಸೆಯುವ ಯತ್ನ ಮಾಡಿದ್ದಾರೆ ಎನ್ನಲಾಗಿದೆ. ಗವಾಯಿ ಅವರ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿ ವಿವಾದದ ಸ್ವರೂಪವನ್ನೂ ಪಡೆದುಕೊಂಡಿತ್ತು. ಈ ಹೇಳಿಕೆ ಬಗ್ಗೆ ಭಾರಿ ಆಕ್ರೋಶವೂ ವ್ಯಕ್ತವಾಗಿತ್ತು. ಜಾಲತಾಣಗಳ ಆಕ್ರೋಶಕ್ಕೆ ಪ್ರತಿಕ್ರಿಯಿಸಿದ್ದ ಗವಾಯಿ ಅವರು ‘ನಾನು ಎಲ್ಲ ಧರ್ಮಗಳನ್ನೂ ಗೌರವಿಸುತ್ತೇನೆ. ಇವೆಲ್ಲವೂ ಸಾಮಾಜಿಕ ಜಾಲತಾಣಗಳ ಸೃಷ್ಟಿ’ ಎಂದಿದ್ದರು. ‘ಯಾವುದೇ ಹೇಳಿಕೆಯನ್ನು ಅತಿರಂಜಿತವಾಗಿ ಬಿಂಬಿಸಿ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತದೆ’ ಎಂದು ತುಷಾರ್ ಮೆಹ್ತಾ ಅವರು ಹೇಳಿದ್ದರು. ಯುನೆಸ್ಕೊದ ವಿಶ್ವ ಪಾರಂಪರಿಕ ಪಟ್ಟಿಯಲ್ಲಿರುವ ಮಧ್ಯ ಪ್ರದೇಶದ ಖಜುರಾಹೋದ ಜಾವರಿ ದೇವಾಲಯದಲ್ಲಿನ 7 ಅಡಿ ಎತ್ತರ ವಿಷ್ಣು ಮೂರ್ತಿಯ ತಲೆಯ ಭಾಗವು ನಾಶವಾಗಿತ್ತು. ಈ ಮೂರ್ತಿಯನ್ನು ಮರುನಿರ್ಮಿಸಿ ದೇವಾಲಯದಲ್ಲಿ ಮರುಸ್ಥಾಪಿಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯನ್ನು ಸಿಜೆಐ ಗವಾಯಿ ಅವರು ವಜಾ ಮಾಡಿದ್ದರು.
ಸಿಜೆಐ ಅವರೊಂದಿಗೆ ಮಾತನಾಡಿದೆ. ಅವರ ಮೇಲಿನ ದಾಳಿಯು ಪ್ರತಿಯೊಬ್ಬ ಭಾರತೀಯನಿಗೂ ಸಿಟ್ಟು ತರಿಸಿದೆ. ಇಂಥ ಬೇಜವಾಬ್ದಾರಿ ಕೃತ್ಯಕ್ಕೆ ಸಮಾಜದಲ್ಲಿ ಅವಕಾಶವಿಲ್ಲನರೇಂದ್ರ ಮೋದಿ ಪ್ರಧಾನಿ
ಸಮಾಜದ ಎಲ್ಲ ಅಡೆತಡೆಗಳನ್ನು ದಾಟಿ ಸಂವಿಧಾನವನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತಿರುವ ವ್ಯಕ್ತಿಯನ್ನು ಹೆದರಿಸುವ ಅವಮಾನಿಸುವ ಯತ್ನ ಇದಾಗಿದೆ. ಕಳೆದ ದಶಕದಿಂದ ದ್ವೇಷ ಮತ್ತು ಮತಾಂಧತೆ ನಮ್ಮ ಸಮಾಜದಲ್ಲಿ ಹೇಗೆ ಆವರಿಸಿದೆ ಎಂಬುದನ್ನು ಈ ಕೃತ್ಯ ತೋರಿಸುತ್ತದೆಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಅಧ್ಯಕ್ಷ
ಜಾತಿವಾದಿ ಮನಃಸ್ಥಿತಿಯ ವ್ಯಕ್ತಿಯೊಬ್ಬರ ಪ್ರತಿಕ್ರಿಯೆ ಇದು. ಇದು ಸಿಜೆಐ ಮೇಲಿನ ದಾಳಿ ಅಷ್ಟೇ ಅಲ್ಲ. ಇದು ನ್ಯಾಯಾಂಗ ವ್ಯವಸ್ಥೆ ಮೇಲಿನ ದಾಳಿಇಂದಿರಾ ಜೈಸ್ವಾಲ್ ಹಿರಿಯ ವಕೀಲೆ
ಯಾಕಾಗಿ ಇಂಥ ಕೃತ್ಯ ಎಸಗಿದೆ ಎಂದು ವ್ಯಕ್ತಿಯು ನೀಡಿದ ಕಾರಣವು ನಮ್ಮ ಸಮಾಜದಲ್ಲಿ ಇಷ್ಟು ಶತಮಾನಗಳು ಕಳೆದರೂ ದಬ್ಬಾಳಿಕೆ ಮೇಲು–ಕೀಳಿನ ಮನಃಸ್ಥಿತಿಯು ಎಷ್ಟರ ಮಟ್ಟಿಗೆ ಬೇರೂರಿದೆ ಎಂಬುದನ್ನು ತೋರಿಸುತ್ತದೆಎಂ.ಕೆ. ಸ್ಟಾಲಿನ್ ತಮಿಳುನಾಡು ಮುಖ್ಯಮಂತ್ರಿ
ಸುಪ್ರೀಂ ಕೋರ್ಟ್‌ನ ಯಾವುದೇ ನ್ಯಾಯಮೂರ್ತಿಯ ವಿರುದ್ಧ ಇಂಥ ಕೃತ್ಯ ಎಸಗುವುದು ನ್ಯಾಯಾಂಗದ ಸ್ವಾತಂತ್ರ್ಯದ ಮೇಲೆ ನಡೆಸುವ ನೇರ ದಾಳಿಯಾಗಿದೆ. ಜಾತ್ಯತೀತ ಏಕತೆ ಮತ್ತು ಭ್ರಾತೃತ್ವದ ತತ್ವಗಳನ್ನು ಸಂಘವು ಎತ್ತಿಹಿಡಿಯುತ್ತದೆಸುಪ್ರೀಂ ಕೋರ್ಟ್ ಅಡ್ವೊಕೇಟ್ ಆನ್ ರೆಕಾರ್ಡ್ ಅಸೋಸಿಯೇಷನ್
ಸಿಜೆಐ ಮೇಲಿನ ದಾಳಿಯನ್ನು ಖಂಡಿಸುತ್ತೇನೆ. ಸಂಘ ಪರಿವಾರವು ಹಬ್ಬಿಸುವ ದ್ವೇಷದ ಪರಿಣಾಮವೇ ಈ ಘಟನೆಯಾಗಿದೆ. ಇದು ನಮ್ಮೆಲ್ಲರಿಗೂ ಎಚ್ಚರಿಕೆಯಾಗಬೇಕುಪಿಣರಾಯ್ ವಿಜಯನ್ ಕೇರಳ ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.