ADVERTISEMENT

ಟಿಎಂಸಿ–ಬಿಜೆಪಿ ನಡುವೆ ಕಚ್ಚಾಟ

ಕೋಲ್ಕತ್ತದಲ್ಲಿ ಅಮಿತ್‌ ಶಾ ರೋಡ್‌ ಷೋ ಸಂದರ್ಭ ಕಲ್ಲು ತೂರಾಟ

​ಪ್ರಜಾವಾಣಿ ವಾರ್ತೆ
Published 14 ಮೇ 2019, 20:15 IST
Last Updated 14 ಮೇ 2019, 20:15 IST
ವಾಹನಗಳಿಗೆ ಹಚ್ಚಿದ ಬೆಂಕಿಯನ್ನು ಪೊಲೀಸರು ನಂದಿಸಿದರು ಪಿಟಿಐ ಚಿತ್ರ
ವಾಹನಗಳಿಗೆ ಹಚ್ಚಿದ ಬೆಂಕಿಯನ್ನು ಪೊಲೀಸರು ನಂದಿಸಿದರು ಪಿಟಿಐ ಚಿತ್ರ   

ಕೋಲ್ಕತ್ತ: ನಗರದಲ್ಲಿ ಮಂಗಳವಾರ ನಡೆದ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರ ರೋಡ್‌ ಷೋ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಟಿಎಂಸಿಯ ವಿದ್ಯಾರ್ಥಿ ಘಟಕವಾಗಿರುವ ‘ತೃಣಮೂಲ ಕಾಂಗ್ರೆಸ್‌ ವಿದ್ಯಾರ್ಥಿ ಪರಿಷತ್‌’ (ಟಿಎಂಸಿಪಿ) ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ.

ಅಮಿತ್‌ ಶಾ ಅವರ ಬೆಂಗಾವಲು ಪಡೆಯ ವಾಹನವೊಂದರ ಮೇಲೆ ಕಲ್ಲು ತೂರಾಟ ನಡೆದದ್ದು ಗಲಭೆಯಮೂಲ. ಶಾ ಅವರ ರೋಡ್‌ ಷೋ ಕಲ್ಕತ್ತ ವಿಶ್ವವಿದ್ಯಾಲಯದ ಸಮೀಪ ಹಾದು ಹೋಗುತ್ತಿದ್ದಾಗ ಟಿಎಂಸಿ ಹಾಗೂ ಎಡಪಂಥೀಯ ಸಂಘಟನೆಗಳ ಕಾರ್ಯಕರ್ತರು ಶಾ ವಿರುದ್ಧ ಘೋಷಣೆ ಕೂಗಿ, ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿದರು. ಕೆಲವು ವಿದ್ಯಾರ್ಥಿಗಳು ‘ಗೋ ಬ್ಯಾಕ್‌ ಅಮಿತ್‌ ಶಾ’ ಎಂಬ ಫಲಕವನ್ನು ಸಹ ಪ್ರದರ್ಶಿಸಿದರು. ಪೊಲೀಸರು ಇವರನ್ನು ಚದುರಿಸಿದರು.

ರೋಡ್‌ ಷೋ ಈಶ್ವರಚಂದ್ರ ವಿದ್ಯಾಸಾಗರ ಕಾಲೇಜು ರಸ್ತೆ ಮತ್ತು ವಿಶ್ವವಿದ್ಯಾಲಯದ ಹಾಸ್ಟೆಲ್‌ ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ ಟಿಎಂಸಿಪಿ ಕಾರ್ಯಕರ್ತರು ಶಾ ಅವರ ಬೆಂಗಾವಲುಪಡೆಯ ವಾಹನದತ್ತ ಕಲ್ಲು ತೂರಾಟ ನಡೆಸಿದರು. ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಕಾಲೇಜನ್ನು ಸುತ್ತುವರಿದು ಗೇಟ್‌ ಮುಚ್ಚಿ, ಅಲ್ಲಿ ನಿಲ್ಲಿಸಲಾಗಿದ್ದ ಸೈಕಲ್‌ ಹಾಗೂ ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿದರು. ಬಳಿಕ ಕಾಲೇಜು ಕಟ್ಟಡದತ್ತ ಕಲ್ಲುಗಳನ್ನು ಎಸೆದರು. ಇದರಿಂದ ಹಾಸ್ಟೆಲ್‌ ಕಟ್ಟಡದ ಆವರಣದಲ್ಲಿ ಸ್ಥಾಪಿಸಲಾಗಿದ್ದ ಸಮಾಜ ಸುಧಾರಕ ಈಶ್ವರಚಂದ್ರ ವಿದ್ಯಾಸಾಗರ ಅವರ ಪ್ರತಿಮೆಗೆ ಹಾನಿಯಾಗಿದೆ. ಈ ಸಂದರ್ಭದಲ್ಲಿ ಪೊಲೀಸರು ಲಾಠಿಗಳನ್ನು ಬೀಸಿ ಗುಂಪುಗಳನ್ನು ಚದುರಿಸಿದರು. ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಬಾಡಿಗೆ ಗೂಂಡಾಗಳ ಕೃತ್ಯ:‘ಅಮಿತ್‌ ಶಾ ಅವರು ತಮ್ಮ ರೋಡ್‌ ಷೋಗಾಗಿ ಹೊರಗಡೆಯಿಂದ ಜನರನ್ನು ಕರೆತಂದಿದ್ದರು. ಅವರೇ ನಗರದಲ್ಲಿ ಗಲಭೆ ನಡೆಸಿದ್ದಾರೆ’ ಎಂದು ಟಿಎಂಸಿ ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.