
(ಪ್ರಾತಿನಿಧಿಕ ಚಿತ್ರ)
ನವದೆಹಲಿ: ಕಳೆದ ಮೂರು ದಶಕಗಳಲ್ಲಿ ಹವಾಮಾನ ವೈಪರೀತ್ಯ ಘಟನಾವಳಿಗಳಿಂದ ಹೆಚ್ಚು ಭಾದಿತ ದೇಶಗಳ ಪೈಕಿ ಭಾರತ ಜಾಗತಿಕವಾಗಿ ಒಂಬತ್ತನೇ ಸ್ಥಾನದಲ್ಲಿದೆ. ಸುಮಾರು 430 ತೀವ್ರ ಸ್ವರೂಪದ ಘಟನೆಗಳಿಂದಾಗಿ (ಹವಾಮಾನ ವೈಪರೀತ್ಯ ) ಸುಮಾರು 80,000ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ ಇತ್ತೀಚಿನ ವರದಿಯೊಂದು ಹೇಳಿದೆ.
ಪರಿಸರ ಚಿಂತಕರ ಚಾವಡಿ ಜರ್ಮನ್‌ವಾಚ್, ಬ್ರೆಜಿಲ್‌ನ ಬೆಲೆಮ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಕಾನ್ಫರೆನ್ಸ್‌ನಲ್ಲಿ (COP30) ಮಂಗಳವಾರ ಹವಾಮಾನ ಅಪಾಯ ಸೂಚ್ಯಂಕ (CRI) 2026 ಎಂಬ ವರದಿ ಬಿಡುಗಡೆ ಮಾಡಿತು.
ಈ ವರದಿಯ ಪ್ರಕಾರ ಹವಾಮಾನ ವೈಪರೀತ್ಯ ಘಟನೆಗಳು 1.3 ಬಿಲಿಯನ್ ಜನರ ಬದುಕಿನ ಮೇಲೆ ಪರಿಣಾಮ ಬೀರಿವೆ. ಅಲ್ಲದೇ 1995 ರಿಂದ 2024 ರವರೆಗೆ ಸುಮಾರು 170 ಬಿಲಿಯನ್ (ಯುಎಸ್ ಡಾಲರ್) ಮೌಲ್ಯದ ಆರ್ಥಿಕ ನಷ್ಟವನ್ನುಂಟು ಮಾಡಿವೆ ಎಂದು ಹೇಳಿದೆ.
ಜಾಗತಿಕ ತಾಪಮಾನ ಏರಿಕೆಯಿಂದ ಪದೇ ಪದೇ ಉಂಟಾಗುತ್ತಿರುವ ಪ್ರವಾಹಗಳು, ಚಂಡಮಾರುತಗಳು, ಬರಗಾಲ ಮತ್ತು ಶಾಖದ ಅಲೆಗಳಿಂದ ಭಾರತದಲ್ಲಿ ನಷ್ಟದ ಪ್ರಮಾಣ ಹೆಚ್ಚಾಗುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
1998ರ ಗುಜರಾತ್ ಚಂಡಮಾರುತ, 1999ರ ಒಡಿಶಾ ಚಂಡಮಾರುತ, 2013ರ ಉತ್ತರಾಖಂಡ ಪ್ರವಾಹ ಮತ್ತು ಇತ್ತೀಚಿನ ಮಾರಕ ಶಾಖದ ಅಲೆಗಳ ಪರಿಣಾಮ ಭಾರತದಲ್ಲಿ ಸಾವಿನ ಸೂಚ್ಯಂಕದ ಏರಿಕೆಗೆ ಕಾರಣವಾಗಿವೆ ಎಂದು ಅದು ಹೇಳಿದೆ.
ಭಾರತ ಹಲವು ಪಾಕೃತಿಕ ವಿಪತ್ತುಗಳಿಂದ ನಿರಂತರ ಸವಾಲುಗಳನ್ನು ಎದುರಿಸುತ್ತಿದೆ. ಪದೇ ಪದೇ ಘಟಿಸುತ್ತಿರುವ ವಿಪತ್ತುಗಳು (ಹವಾಮಾನ ವೈಪರೀತ್ಯ) ಅಭಿವೃದ್ಧಿಯ ಲಾಭಗಳನ್ನು ನಿರಂತರವಾಗಿ ನಾಶಪಡಿಸಿ, ಜನರ ಜೀವನೋಪಾಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿವೆ ಎಂದು ವರದಿ ತಿಳಿಸಿದೆ.
2024ರಲ್ಲಿ ಭಾರತ ಭಾರಿ ಮಳೆ ಮತ್ತು ಹಠಾತ್ ಪ್ರವಾಹಕ್ಕೆ ತುತ್ತಾಗಿತ್ತು. ಇದು 8 ದಶಲಕ್ಷಕ್ಕೂ ಹೆಚ್ಚು ಜನರ ಮೇಲೆ ಪರಿಣಾಮ ಬೀರಿತ್ತು. ಮುಖ್ಯವಾಗಿ ಗುಜರಾತ್, ಮಹಾರಾಷ್ಟ್ರ ಮತ್ತು ತ್ರಿಪುರಾದಲ್ಲಿ ಹೆಚ್ಚು ಪರಿಣಾಮ ಬೀರಿದೆ.
ಹವಾಮಾನ ವೈಪರೀತ್ಯಗಳಿಂದಾಗಿ ವಿಶ್ವದ ಸುಮಾರು ಅರ್ಧದಷ್ಟು ಜನ ತೊಂದರೆ ಅನುಭವಿಸಿದ್ದಾರೆ. ಜರ್ಮನ್‌ವಾಚ್ ಪ್ರಕಾರ, ಜಾಗತಿಕವಾಗಿ, 1995 ರಿಂದ 2024ರ ನಡುವೆ 9,700ಕ್ಕೂ ಹೆಚ್ಚು ಹವಾಮಾನ ವೈಪರೀತ್ಯಗಳಿಂದಾಗಿ 8.3 ಲಕ್ಷಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಸುಮಾರು 5.7 ಶತಕೋಟಿ ಜನರ ಮೇಲೆ ಪರಿಣಾಮ ಬೀರಿದೆ. ಅಂದಾಜು 4.5 ಟ್ರಿಲಿಯನ್‌ಗಳಷ್ಟು ( ಯುಎಸ್ ಡಾಲರ್) ನೇರ ಆರ್ಥಿಕ ಹಾನಿ ಉಂಟಾಗಿದೆ ಎಂದು ಹೇಳಿದೆ.
ಕಳೆದ ಮೂರು ದಶಕಗಳಲ್ಲಿ ಡೊಮಿನಿಕಾ ಅತಿ ಹೆಚ್ಚು ಬಾಧಿತ (ನಷ್ಟ ಅನುಭವಿಸಿದ) ದೇಶವಾಗಿದೆ. ನಂತರದ ಸ್ಥಾನಗಳಲ್ಲಿ ಮ್ಯಾನ್ಮಾರ್, ಹೊಂಡುರಾಸ್, ಲಿಬಿಯಾ, ಹೈಟಿ, ಗ್ರೆನಡಾ, ಫಿಲಿಪೈನ್ಸ್, ನಿಕರಾಗುವಾ, ಭಾರತ ಮತ್ತು ಬಹಾಮಾಸ್ ದೇಶಗಳು ಇವೆ.
ಕಡಿಮೆ ನಿಭಾಯಿಸುವ ಸಾಮರ್ಥ್ಯ, ಹೊಂದಿಕೊಳ್ಳುವಿಕೆಗೆ ಸೀಮಿತ ಸಂಪನ್ಮೂಲಗಳಿಂದಾಗಿ ಅಭಿವೃದ್ಧಿಶೀಲ ರಾಷ್ಟ್ರಗಳು ಹೆಚ್ಚು ಪರಿಣಾಮಗಳನ್ನು ಅನುಭವಿಸುತ್ತಿವೆ ಎಂದು ಚಿಂತಕರ ಚಾವಡಿ ಹೇಳಿದೆ.
2024 ರಲ್ಲಿ ಎಲ್ ನಿನೊ ಪರಿಸ್ಥಿತಿಗಳು ಪ್ರಭಾವ ಬೀರಿದರೂ, ಮಾನವ ಪ್ರೇರಿತ ಹವಾಮಾನ ಬದಲಾವಣೆಯಿಂದಲೇ ವಿಶ್ವದಾದ್ಯಂತ ಶಾಖದ ಅಲೆಗಳು, ಬಿರುಗಾಳಿ ಮತ್ತು ಪ್ರವಾಹಗಳನ್ನು ತೀವ್ರಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ ಎಂದು ವರದಿ ಒತ್ತಿ ಹೇಳಿದೆ.
ಭಾರತ ಸೇರಿದಂತೆ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಆಗಾಗ್ಗೆ ಸಂಭವಿಸುವ ಇಂತಹ ವಿಪತ್ತುಗಳು ಸಾಮಾನ್ಯ ಸಂಗತಿಯಾಗುತ್ತಿವೆ ಎಂದು ವರದಿಯಲ್ಲಿ ಎಚ್ಚರಿಸಲಾಗಿದೆ. ಇಂತಹ ಪುನರಾವರ್ತಿತ ನಷ್ಟಗಳು ಸಾರ್ವಜನಿಕ ಹಣಕಾಸನ್ನು ಹೊರೆಯಾಗಿಸುತ್ತವೆ ಹಾಗೂ ಸಮುದಾಯಗಳ ಚೇತರಿಸಿಕೊಳ್ಳುವ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತವೆ. ಹೀಗಾಗಿ, ಅನೇಕ ಜನರು ಬಡತನದ ಕೂಪಕ್ಕೆ ತಳ್ಳಲ್ಪಡುತ್ತಿದ್ದಾರೆ ಎಂದೂ ವರದಿಯಲ್ಲಿ ಎಚ್ಚರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.