ADVERTISEMENT

ದೆಹಲಿ ಪ್ರಾಣಿ ಸಂಗ್ರಹಾಲಯ; ಪ್ರಾಣಿಗಳ ಸಾವಿನ ಪ್ರಮಾಣದಲ್ಲಿ ಇಳಿಕೆ

ವರ್ಷದಿಂದ ಮುಚ್ಚಿದ್ದ ಪ್ರಾಣಿಸಂಗ್ರಹಾಲಯ ಗುರುವಾರದಿಂದ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ

ಪಿಟಿಐ
Published 2 ಏಪ್ರಿಲ್ 2021, 5:50 IST
Last Updated 2 ಏಪ್ರಿಲ್ 2021, 5:50 IST
ಗುರುವಾರದಿಂದ ಸಾರ್ವಜನಿಕ ಪ್ರವೇಶಕ್ಕೆ ಅವಕಾಶಕಲ್ಪಿಸಿದ ನಂತರ ನವದೆಹಲಿ ಪ್ರಾಣಿ ಸಂಗ್ರಹಾಲಯಕ್ಕೆ ಭೇಟಿ ನೀಡಿದ ನಾಗರಿಕರು ಮೃಗಾಲಯದಲ್ಲಿರುವ ಬಿಳಿ ಹುಲಿಯನ್ನು ವೀಕ್ಷಿಸುತ್ತಿರುವುದು
ಗುರುವಾರದಿಂದ ಸಾರ್ವಜನಿಕ ಪ್ರವೇಶಕ್ಕೆ ಅವಕಾಶಕಲ್ಪಿಸಿದ ನಂತರ ನವದೆಹಲಿ ಪ್ರಾಣಿ ಸಂಗ್ರಹಾಲಯಕ್ಕೆ ಭೇಟಿ ನೀಡಿದ ನಾಗರಿಕರು ಮೃಗಾಲಯದಲ್ಲಿರುವ ಬಿಳಿ ಹುಲಿಯನ್ನು ವೀಕ್ಷಿಸುತ್ತಿರುವುದು   

ನವದೆಹಲಿ: ‘ಇಲ್ಲಿನ ಪ್ರಾಣಿ ಸಂಗ್ರಹಾಲಯದಲ್ಲಿ 2020–21 ಸಾಲಿನಲ್ಲಿ 125 ಪ್ರಾಣಿಗಳು ಮೃತಪಟ್ಟಿದ್ದು, ಕಳೆದ ಮೂರು ವರ್ಷಗಳಲ್ಲಿ ಇದು ಅತ್ಯಂತ ಕಡಿಮೆ‘ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

‌ಕೊರೊನಾ ಸಾಂಕ್ರಾಮಿಕ ಮತ್ತು ಹಕ್ಕಿ ಜ್ವರದಿಂದಾಗಿ ವರ್ಷಕ್ಕೂ ಹೆಚ್ಚು ಕಾಲ ಮುಚ್ಚಲಾಗಿದ್ದ ಮೃಗಾಲಯವನ್ನು ಗುರುವಾರದಿಂದ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತಗೊಳಿಸಲಾಯಿತು.

ಈ ಸಂದರ್ಭದಲ್ಲಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಮೃಗಾಲಯದ ನಿರ್ದೇಶಕ ರಮೇಶ್ ಪಾಂಡೆ, ‘ಬುಧವಾರ ಕೊನೆಗೊಂಡ ಕಳೆದ ಆರ್ಥಿಕ ವರ್ಷದ ಅಂಕಿ ಅಂಶಗಳ ಪ್ರಕಾರ, ಮೃಗಾಲಯದಲ್ಲಿನ ಪ್ರಾಣಿಗಳ ಸಾವಿನ ಪ್ರಮಾಣ ಶೇ 10 ರಷ್ಟಿದೆ. ಇದು 2017–18ರ ನಂತರದ ಅತ್ಯಂತ ಕಡಿಮೆ ಸಾವಿನ ಪ್ರಮಾಣವಾಗಿದೆ‘ ಎಂದು ವಿವರಿಸಿದರು.

ADVERTISEMENT

‘ಮೃಗಾಲಯದಲ್ಲಿ ಪ್ರಸ್ತುತ ಸುಮಾರು 1,160 ಪ್ರಾಣಿಗಳಿವೆ. ಏಪ್ರಿಲ್ ಮಧ್ಯಭಾಗದ ಹೊತ್ತಿಗೆ ಮೃಗಾಲಯ ದಲ್ಲಿರುವ ಒಟ್ಟು ಪ್ರಾಣಿಗಳ ಸಂಖ್ಯೆಯ ನಿಖರ ಅಂಕಿ ಅಂಶಗಳು ತಿಳಿಯಲಿದೆ‘ ಎಂದು ಅವರು ತಿಳಿಸಿದರು.

‘ಕಳೆದ ವರ್ಷಕ್ಕೆ ಹೋಲಿಸಿದರೆ 2020-21ರ ಆರ್ಥಿಕ ವರ್ಷದಲ್ಲಿ ಪ್ರಾಣಿಗಳ ಸಾವಿನ ಸಂಖ್ಯೆ ಗಮನಾರ್ಹವಾಗಿ ಕಡಿಮೆಯಾಗಿದೆ. ಮೃಗಾಲಯದ ಸಿಬ್ಬಂದಿಯ ಉತ್ತಮ ಮೇಲ್ವಿಚಾರಣೆ ಮತ್ತು ನಿರಂತರ ಪ್ರಯತ್ನಗಳಿಂದ ಇದು ಸಾಧ್ಯವಾಗಿದೆ‘ ಎಂದು ಪಾಂಡೆ ಹೇಳಿದರು.

‘ಜನವರಿ 15 ರಂದು ಮೃಗಾಲಯದಲ್ಲಿ, ಹಕ್ಕಿ ಜ್ವರಕ್ಕೆ ಸಂಬಂಧಿಸಿದ ಮೊದಲ ಪ್ರಕರಣ ಪತ್ತೆಯಾಗಿತ್ತು.‌ ನಂತರದ ಕೆಲವು ವಾರಗಳಲ್ಲಿ ಮೃಗಾಲಯದ ಆವರಣದಿಂದ ಸಂಗ್ರಹಿಸಿದ ಏಳು ಮಾದರಿಗಳಲ್ಲಿ ಸೋಂಕು ದೃಢಪಟ್ಟಿತ್ತು. ಕಳೆದ ವರ್ಷದಲ್ಲಿ ಮೃಗಾಲಯದಲ್ಲಿ ಎರಡು ಹೆಣ್ಣು ಹುಲಿ, ಒಂದು ಗಂಡು ಹುಲಿ ಮತ್ತು ಎರಡು ಮರಿಗಳು ಸಾವನ್ನಪ್ಪಿದ್ದವು. ಹಕ್ಕಿ ಜ್ವರದ ಯಾವುದೇ ಪ್ರಕರಣಗಳು ಸಂಭವಿಸದಿದ್ದರೆ ಸಾವಿನ ಪ್ರಮಾಣ ಇನ್ನೂ ಕಡಿಮೆಯಾಗುತ್ತಿತ್ತು‘ ಎಂದು ಪಾಂಡೆ ಮಾಹಿತಿ ನೀಡಿದರು.

‘ಇಂಥ ನಕಾರಾತ್ಮಕ ಬೆಳವಣಿಗೆಗಳ ನಡುವೆ ಕಳೆದ ವರ್ಷ ನವೆಂಬರ್‌ ತಿಂಗಳಲ್ಲಿ ಸಂತಸಪಡುವ ಬೆಳವಣಿಗೆ ನಡೆಯಿತು. ಅದು ನಮ್ಮ ಮೃಗಾಯಲಕ್ಕೆ ‘ಬಂಗಾಳ ಹುಲಿ‘ ಸೇರ್ಪಡೆಯಾಗಿದ್ದು. ಈಗ ಸಂತಾನೋತ್ಪತ್ತಿ ಉದ್ದೇಶಕ್ಕಾಗಿ ಚೆನ್ನೈ ಮತ್ತು ನಾಗಪುರದಿಂದ ಇನ್ನೂ ಮೂರು ಹುಲಿಗಳನ್ನು ಕರೆತರಲು ಯೋಚಿಸಲಾಗಿದೆ‘ ಎಂದು ಪಾಂಡೆ ತಿಳಿಸಿದರು.

ಸಾರ್ವಜನಿಕರಿಗೆ ಪ್ರಾಣಿ ಸಂಗ್ರಹಾಲಯ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ ಮೇಲೆ ಗುರುವಾರ ಒಂದೇ ದಿನ 1645 ಮಂದಿ ಭೇಟಿ ನೀಡಿದ್ದಾರೆ ಎಂದು ಪಾಂಡೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.