ಉತ್ತರಾಖಂಡದಲ್ಲಿ ಮೇಘಸ್ಫೋಟ
ಪಿಟಿಐ ಚಿತ್ರ
ಉತ್ತರಕಾಶಿ: ಉತ್ತರಕಾಶಿ (ಉತ್ತರಾಖಂಡ)/ಲಖನೌ: ಮೇಘಸ್ಫೋಟ ಪರಿಣಾಮ ಉತ್ತರಾಖಂಡದ ಉತ್ತರಕಾಶಿಯಲ್ಲಿ ಮಂಗಳವಾರ ದಿಢೀರ್ ಪ್ರವಾಹ ಕಂಡು ಬಂದಿದ್ದು, ಐವರು ಮೃತಪಟ್ಟು, ಇತರ 50 ಮಂದಿ ನಾಪತ್ತೆಯಾಗಿದ್ದಾರೆ.
ಧಾರಾಲಿ ಖೀರಗರ್ದ್ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಮಣ್ಣು ಮಿಶ್ರಿತ ನೀರು ರಭಸದಿಂದ ಹರಿಯುತ್ತಿದ್ದ ಪರಿಣಾಮ, ಹಲವಾರು ಮನೆಗಳು ಕೊಚ್ಚಿ ಹೋಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಧಾರಾಲಿಯು ಈ ಮಾರ್ಗದಲ್ಲಿನ ಪ್ರಮುಖ ತಂಗುದಾಣವಾಗಿದ್ದು, ಇಲ್ಲಿ ಹೋಟೆಲ್‌ಗಳು, ರೆಸ್ಟೋರೆಂಟ್ ಹಾಗೂ ಹೋಂಸ್ಟೇಗಳು ಇವೆ. ಪ್ರಸಿದ್ಧ ಯಾತ್ರಾಸ್ಥಳ ಗಂಗೋತ್ರಿಯು ಧಾರಾಲಿಯಿಂದ 18 ಕಿ.ಮೀ. ದೂರದಲ್ಲಿದೆ.
ಖೀರಗಂಗಾ ನದಿಯ ಜಲಾನಯನ ಪ್ರದೇಶದಲ್ಲಿ ಮೇಘಸ್ಫೋಟ ಸಂಭವಿಸಿದ್ದರಿಂದ ದಿಢೀರ್ ಪ್ರವಾಹ ಕಂಡುಬಂದಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಪ್ರವಾಹದಿಂದಾಗಿ ನೀರು ಗ್ರಾಮಕ್ಕೆ ನುಗ್ಗುತ್ತಿರುವುದು ಹಾಗೂ ಮನೆಗಳಿಗೆ ಹಾನಿಯಾಗುತ್ತಿರುವುದನ್ನು ತೋರಿಸುವ ವಿಡಿಯೊಗಳು ವ್ಯಾಪಕವಾಗಿ ಹಂಚಿಕೆಯಾಗಿವೆ. ಅವಶೇಷಗಳಡಿ ಸಿಲುಕಿರುವ ವ್ಯಕ್ತಿಯೊಬ್ಬರು ಹೊರಗೆ ಬರಲು ಪ್ರಯತ್ನಿಸುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.
‘ಪ್ರಾಥಮಿಕ ವರದಿಗಳ ಪ್ರಕಾರ, ಕನಿಷ್ಠ ನಾಲ್ವರು ಮೃತಪಟ್ಟಿದ್ದಾರೆ. ಹರ್ಸಿಲ್‌ನಿಂದ ಸೇನೆಯ ತುಕಡಿಯೊಂದು ಘಟನಾ ಸ್ಥಳಕ್ಕೆ ತೆರಳಿ, ಪರಿಹಾರ ಕಾರ್ಯ ಕೈಗೊಂಡಿದೆ’ ಎಂದು ಉತ್ತರಕಾಶಿ ಜಿಲ್ಲಾಧಿಕಾರಿ ಪ್ರಶಾಂತ ಆರ್ಯ ತಿಳಿಸಿದ್ದಾರೆ.
ಮಾಹಿತಿ ಪಡೆದ ಪ್ರಧಾನಿ: ‘ಪ್ರವಾಹದಿಂದ ತೊಂದರೆಗೆ ಒಳಗಾದವರ ಸುರಕ್ಷತೆಗೆ ನಾನು ಪ್ರಾರ್ಥಿಸುವೆ. ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರೊಂದಿಗೆ ಮಾತನಾಡಿ, ಪರಿಸ್ಥಿತಿ ಕುರಿತು ಮಾಹಿತಿ ಪಡೆದಿರುವೆ. ಸಂತ್ರಸ್ತರಿಗೆ ಎಲ್ಲ ನೆರವು ನೀಡಲಾಗುವುದು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ‘ಎಕ್ಸ್’ನಲ್ಲಿ ಹೇಳಿದ್ದಾರೆ.
ಭಾರಿ ನಷ್ಟ: ‘ಪ್ರವಾಹದಿಂದ ಭಾರಿ ನಷ್ಟ ಉಂಟಾಗಿರುವುದು ದುಃಖ ತಂದಿದೆ. ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್, ಜಿಲ್ಲಾಡಳಿತ ಹಾಗೂ ಇತರ ತಂಡಗಳು ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯ ಕೈಗೆತ್ತಿಕೊಂಡಿವೆ’ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಮುಖ ಅಂಶಗಳು
* ಪ್ರವಾಸಿಗರು ಸೇರಿ 100ಕ್ಕೂ ಹೆಚ್ಚು ಜನರು ಕಟ್ಟಡಗಳ ಅವಶೇಷಗಳಡಿ ಸಿಲುಕಿರಬಹುದು ಎಂದು ಮೂಲಗಳು ಹೇಳಿವೆ
* 20–25 ಹೋಟೆಲ್‌ಗಳು/ಹೋಂ ಸ್ಟೇಗಳು ಕೊಚ್ಚಿಕೊಂಡು ಹೋಗಿವೆ
* ಇಂಡೊ–ಟಿಬೆಟ್ ಗಡಿ ಪೊಲೀಸ್‌ನ (ಐಟಿಬಿಪಿ) ಪಡೆಯ 16 ಸದಸ್ಯರಿರುವ ತಂಡ ಧಾರಾಲಿಗೆ ತೆರಳಿದ್ದು, ರಕ್ಷಣಾ ಕಾರ್ಯ ಕೈಗೆತ್ತಿಕೊಂಡಿದೆ
* ಮಾಟ್ಲಿಯಲ್ಲಿರುವ ಐಟಿಬಿಪಿಯ 12ನೇ ಬೆಟಾಲಿಯನ್, ಸ್ಥಳಕ್ಕೆ ತೆರಳಿದ್ದು, ರಕ್ಷಣಾ ಕಾರ್ಯಕ್ಕೆ ಕೈಜೋಡಿಸಿದೆ
* ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ 8ರಿಂದ 10 ಯೋಧರು
ನಾಪತ್ತೆಯಾಗಿದ್ದಾರೆ. ಆದರೆ ಸೇನೆ ಇದನ್ನು ದೃಢಪಡಿಸಿಲ್ಲ
* ಮಣ್ಣು ಮಿಶ್ರಿತ ನೀರು ಹಾಗೂ ಹೂಳು ತಗ್ಗು ಪ್ರದೇಶಗಳತ್ತ ನುಗ್ಗುತ್ತಿರುವ ಕಾರಣ ಇಲ್ಲಿನ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ
ಸಹಾಯವಾಣಿ ಆರಂಭ: ಜಿಲ್ಲಾಡಳಿತವು ಸಹಾಯವಾಣಿ ಆರಂಭಿಸಿದೆ. 01374-222126, 222722, 9456556431 ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದು ಎಂದು ತಿಳಿಸಿದೆ. ನದಿಗಳಿಂದ ದೂರ ಇರುವಂತೆ ಜಿಲ್ಲಾಡಳಿತ ಜನರಿಗೆ ಮನವಿ ಮಾಡಿದೆ.
ರೆಡ್ ಅಲರ್ಟ್ ಘೋಷಣೆ
ಧಾರಾಲಿ ಪ್ರದೇಶದಲ್ಲಿ ಭಾರಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿರುವ ಭಾರತೀಯ ಹವಾಮಾನ ಇಲಾಖೆ (ಐಎಂಡಿ), ರೆಡ್ ಅಲರ್ಟ್ ಘೋಷಿಸಿದೆ.
ಉತ್ತರಾಖಂಡದ ಹಲವು ಪ್ರದೇಶಗಳಲ್ಲಿ 21 ಸೆಂ.ಮೀ. ಮಳೆಯಾಗಿದೆ ಎಂದು ಐಎಂಡಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.