ADVERTISEMENT

ಆಂಧ್ರ: ಡಿಜಿಪಿ ಎತ್ತಂಗಡಿ

​ಪ್ರಜಾವಾಣಿ ವಾರ್ತೆ
Published 31 ಮೇ 2019, 18:34 IST
Last Updated 31 ಮೇ 2019, 18:34 IST

ಅಮರಾವತಿ: ಆಂಧ್ರ ಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ವೈ.ಎಸ್‌.ಜಗನ್‌ಮೋಹನ್‌ ರೆಡ್ಡಿ ಅವರು ಅಧಿಕಾರ ಸ್ವೀಕರಿಸಿದ ದಿನವೇ ಡಿಜಿಪಿ ಸೇರಿದಂತೆ ಹಲವು ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ.

ಡಿಜಿಪಿ ಆರ್‌.ಪಿ. ಠಾಕೂರ್‌ ಅವರನ್ನು ಮುದ್ರಣ ಮತ್ತು ಲೇಖನ ಸಾಮಗ್ರಿ ಇಲಾಖೆಯ ಆಯುಕ್ತರನ್ನಾಗಿ ವರ್ಗ ಮಾಡಲಾಗಿದೆ. 1986ರ ಐಪಿಎಸ್‌ ಬ್ಯಾಚ್‌ನ ದಾಮೋದರ್‌ ಗೌತಮ್‌ ಸವಾಂಗ್‌ ಅವರನ್ನು ನೂತನ ಡಿಜಿಪಿಯಾಗಿ ನೇಮಿಸಲಾಗಿದೆ.

ಹಿಂದಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ವಿಶೇಷ ಮುಖ್ಯ ಕಾರ್ಯದರ್ಶಿಯಾಗಿದ್ದ ಸತೀಶ್‌ ಚಂದ್ರ, ಪ್ರಧಾನ ಕಾರ್ಯದರ್ಶಿ ಜಿ. ಸಾಯಿ ಪ್ರಸಾದ್‌, ಕಾರ್ಯದರ್ಶಿಗಳಾದ ಎಂ. ಗಿರಿಜಾ ಶಂಕರ್‌ ಮತ್ತು ಎ.ವಿ.ರಾಜಮೌಳಿ ಅವರನ್ನೂ ವರ್ಗಾವಣೆ ಮಾಡಲಾಗಿದೆ.

ADVERTISEMENT

ವಿಶೇಷ ಜಿಲ್ಲಾಧಿಕಾರಿಯಾಗಿ ನಿವೃತ್ತರಾಗಿರುವ ಪಿ. ಕೃಷ್ಣಮೋಹನ್‌ ರೆಡ್ಡಿ ಅವರನ್ನು ಮುಖ್ಯಮಂತ್ರಿ ಕಚೇರಿಯ ವಿಶೇಷ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ಕೆ. ಧನಂಜಯ ರೆಡ್ಡಿ ಅವರನ್ನು ಹೆಚ್ಚುವರಿ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.

ಆಂಧ್ರ ಪ್ರದೇಶ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಮಾಜಿ ಮುಖ್ಯ ಕಾರ್ಯದರ್ಶಿ ಅನಿಲ್‌ ಚಂದ್ರ ಪುನಿತಾ ಅವರನ್ನು ಕೆಲಸದಿಂದ ಬಿಡುಗಡೆ ಮಾಡಲಾಗಿದೆ.

ಮುಖ್ಯಮಂತ್ರಿ ಕಚೇರಿಗೆ ಶುಕ್ರವಾರ ಪ್ರವೇಶಿಸಬೇಕಿದ್ದ ಜಗನ್‌ ಅದನ್ನು ಮುಂದೂಡಿ, ಪೋಲಾವರಂ ಯೋಜನೆ ಕುರಿತು ತಾಡೇಪಲ್ಲಿಯ ಮನೆಯಲ್ಲೇ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.