ADVERTISEMENT

ಕೋವಿಡ್‌ನಿಂದ ಗುಣಮುಖ, ದೆಹಲಿಯಲ್ಲಿ ಲಾಕ್‌ಡೌನ್ ಇಲ್ಲ: ಸಿಎಂ ಕೇಜ್ರಿವಾಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಜನವರಿ 2022, 8:22 IST
Last Updated 9 ಜನವರಿ 2022, 8:22 IST
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್   

ನವದೆಹಲಿ: ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾದ ಬಳಿಕ ಭಾನುವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ನಡುವೆಯೂ ಸದ್ಯಕ್ಕೆ ರಾಷ್ಟ್ರ ರಾಜಧಾನಿಯಲ್ಲಿ ಲಾಕ್‌ಡೌನ್ ಹೇರುವ ಯಾವುದೇ ಇರಾದೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಜನವರಿ 4ರಂದು ಕೇಜ್ರಿವಾಲ್ ಅವರಿಗೆ ಕೋವಿಡ್ ದೃಢಪಟ್ಟಿತ್ತು. ಬಳಿಕ ಮನೆಯಲ್ಲೇ ಪ್ರತ್ಯೇಕವಾಸದಲ್ಲಿದ್ದರು.

ಕೊರೊನಾ ಸೋಂಕಿನಿಂದಾಗಿ ಎರಡು ದಿನ ಜ್ವರ ಕಾಡಿತ್ತು. 7-8 ದಿನಗಳ ಪ್ರತ್ಯೇಕವಾಸದ ಬಳಿಕ ಗುಣಮುಖರಾಗಿ ಸೇವೆಗೆ ಮರಳಿರುವುದಾಗಿ ತಿಳಿಸಿದ್ದಾರೆ.

'ಲಾಕ್‌ಡೌನ್ ಹೇರಲು ನಾವು ಬಯಸುವುದಿಲ್ಲ. ನೀವು ಮಾಸ್ಕ್ ಧರಿಸಿದರೆ ನಾವು ಲಾಕ್‌ಡೌನ್ ಹೇರುವುದಿಲ್ಲ. ಸದ್ಯಕ್ಕೆ ಲಾಕ್‌ಡೌನ್ ಹೇರುವ ಉದ್ದೇಶವಿಲ್ಲ. ಜನಜೀವನಕ್ಕೆ ತೊಂದರೆಯಾಗದಂತೆ ಸಾಧ್ಯವಾದಷ್ಟು ಕಡಿಮೆ ನಿಯಂತ್ರಣ ಹೇರುವುದುನಮ್ಮ ಪ್ರಯತ್ನವಾಗಿದೆ' ಎಂದು ಹೇಳಿದ್ದಾರೆ.

'ಕೋವಿಡ್ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿವೆ. ಇಂದಿನ ಆರೋಗ್ಯ ಬುಲೆಟಿನ್‌ನಲ್ಲಿ ಸುಮಾರು 22,000 ಪ್ರಕರಣಗಳು ದೃಢಪಡುವ ಸಾಧ್ಯತೆಯಿದೆ. ಆದರೆ ಭಯಪಡುವ ಅಗತ್ಯವಿಲ್ಲ. ಕೋವಿಡ್ ಎರಡನೇ ಅಲೆಯ ದತ್ತಾಂಶಗಳಿಗೆ ಹೋಲಿಕೆ ಮಾಡಿ ನಾನು ಹಾಗೇ ಹೇಳುತ್ತಿದ್ದೇನೆ' ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.