ADVERTISEMENT

ಮುಖ್ಯಮಂತ್ರಿಯೇ ಮರಳು ಕಳ್ಳನಾಗಿರುವಾಗ ರಾಜ್ಯ ಉದ್ಧಾರವಾಗುವುದು ಹೇಗೆ? ಕೇಜ್ರಿವಾಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಡಿಸೆಂಬರ್ 2021, 13:58 IST
Last Updated 6 ಡಿಸೆಂಬರ್ 2021, 13:58 IST
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್   

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪಂಜಾಬ್ ಸಿಎಂ ಚರಣ್‌ಜಿತ್ ಸಿಂಗ್ ಚನ್ನಿ ಅವರನ್ನು ಪರೋಕ್ಷವಾಗಿ 'ಮರಳುಗಳ್ಳ' ಎನ್ನುವ ಮೂಲಕ ಟೀಕಿಸಿದ್ದಾರೆ.

ಪಂಜಾಬ್‌ ಎಎಪಿಯ ಸಹ ಉಸ್ತುವಾರಿ ಆಗಿರುವ ರಾಘವ್ ಚಾಧಾಅವರು, ಮುಖ್ಯಮಂತ್ರಿ ಚನ್ನಿ ಅವರು ಪ್ರತಿನಿಧಿಸುವ ಛಮಕೌರ್ ಸಾಹಿಬ್‌ ವಿಧಾನಸಭೆ ಕ್ಷೇತ್ರದ ಜಿಂದಾಪುರ ಗ್ರಾಮಕ್ಕೆ ಶನಿವಾರ ದಿಢೀರ್ ಭೇಟಿ ನೀಡಿದ್ದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ್ದ ರಾಘವ್, 'ಸಿಎಂ ಚನ್ನಿ ಪ್ರತಿನಿಧಿಸುವ ವಿಧಾನಸಭೆ ಕ್ಷೇತ್ರದಲ್ಲಿ ಅಕ್ರಮ ಮರಳು ಸಾಗಾಣೆ ನಡೆಯುತ್ತಿರುವುದು ಬಯಲಾಗಿದೆ. ಇದು ಪಂಜಾಬ್ ರಾಜಕೀಯವನ್ನೇ ಅಲುಗಾಡಿಸಲಿದೆ' ಎಂದು ಹೇಳಿಕೆ ನೀಡಿದ್ದರು.

ದೆಹಲಿಯ ಶಾಸಕರೂ ಆಗಿರುವ ರಾಘವ್, 'ಅಕ್ರಮ ಮರಳು ಗಣಿಗಾರಿಕೆಯು ಜಿಂದಾಪುರದಲ್ಲಿ ರಾಜಾರೋಷವಾಗಿ ನಡೆಯುತ್ತಿದೆ. ಮರಳನ್ನು ಅಕ್ರಮವಾಗಿ ಟ್ರಕ್‌ಗಳಲ್ಲಿ ಸಾಗಿಸಲಾಗುತ್ತಿದೆ' ಎಂದೂ ಆರೋಪಿಸಿದ್ದರು.

ADVERTISEMENT

ಇದಕ್ಕೆ ಭಾನುವಾರ ಪ್ರತಿಕ್ರಿಯಿಸಿದ್ದ ಚನ್ನಿ, ಎಎಪಿಯ ಆರೋಪಗಳು 'ಸುಳ್ಳಿನ ಕಂತೆ' ಎಂದು ತಿರುಗೇಟು ನೀಡಿದ್ದರು.ಇದೇ ವಿಚಾರವಾಗಿ ಇಬ್ಬರೂ ಮುಖ್ಯಮಂತ್ರಿಗಳ ನಡುವೆ ಮಾತಿನ ಸಮರ ನಡೆಯುತ್ತಿದೆ.

117 ಸದಸ್ಯ ಬಲದ ಪಂಜಾಬ್‌ ವಿಧಾನಸಭೆಗೆ 2022ರಲ್ಲಿ ಚುನಾವಣೆ ನಡೆಯಲಿದೆ. ಸದ್ಯ ಅಧಿಕಾರದಲ್ಲಿರುವ ಕಾಂಗ್ರೆಸ್‌ಗೆ ಎಎಪಿ ಪ್ರಬಲ ಪೈಪೋಟಿ ನೀಡುವ ಸಾಧ್ಯತೆ ಇದೆ.

2017ರ ಚುನಾವಣೆಯಲ್ಲಿ ಕಾಂಗ್ರೆಸ್‌ 77 ಸ್ಥಾನಗಳಲ್ಲಿ ಗೆಲುವು ಕಂಡಿದ್ದರೆ, ಎಎಪಿ 20 ಕ್ಷೇತ್ರಗಳಲ್ಲಿ ಜಯ ಗಳಿಸಿ ಉತ್ತಮ ಸಾಧನೆ ತೋರಿತ್ತು.

ಪಂಜಾಬ್‌ನಲ್ಲಿ ಎಎಪಿ ಅಧಿಕಾರಕ್ಕೆ ಬಂದರೆ 18 ವರ್ಷ ಮೀರಿದ ಎಲ್ಲಾ ಮಹಿಳೆಯರ ಬ್ಯಾಂಕ್‌ ಖಾತೆಗಳಿಗೆ ಪ್ರತಿ ತಿಂಗಳು ₹ 1,000 ವರ್ಗಾಯಿಸಲಾಗುವುದು ಎಂದು ಕೇಜ್ರಿವಾಲ್‌ ಇತ್ತೀಚೆಗೆ ಭರವಸೆ ನೀಡಿದ್ದರು. ಇದನ್ನು ಟೀಕಿಸಿದ್ದ ಚನ್ನಿ,ಚುನಾವಣೆ ಹಿನ್ನೆಲೆಯಲ್ಲಿಕೇಜ್ರಿವಾಲ್ ಅವರು ಸುಳ್ಳು ಭರವಸೆಗಳನ್ನು ನಿಡುತ್ತಿದ್ದಾರೆ ಎಂದು ಆರೋಪಿಸಿದ್ದರು.

ಪ್ರತಿಯಾಗಿಮರಳು ಗಣಿಗಾರಿಕೆ ಕುರಿತು ಟ್ವೀಟ್ ಮಾಡಿರುವ ದೆಹಲಿ ಸಿಎಂ,'ಮುಖ್ಯಮಂತ್ರಿಯೇ ಮರಳು ಕಳ್ಳ ಆಗಿರುವಾಗ ಆ ರಾಜ್ಯವು ಹೇಗೆ ತಾನೆ ಪ್ರಗತಿ ಸಾಧಿಸಲು ಸಾಧ್ಯ?' ಎನ್ನುವ ಮೂಲಕ ಚನ್ನಿಗೆ ಪರೋಕ್ಷವಾಗಿ ತಿವಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.