ADVERTISEMENT

ಚೆನ್ನೈ: ರಾಜ್ಯಪಾಲ ರವಿ ನಿವಾಸದ ಔತಣಕೂಟ ಬಹಿಷ್ಕರಿಸಿದ ಸ್ಟಾಲಿನ್

ಪಿಟಿಐ
Published 26 ಜನವರಿ 2025, 15:54 IST
Last Updated 26 ಜನವರಿ 2025, 15:54 IST
ಎಂ.ಕೆ.ಸ್ಟಾಲಿನ್
ಎಂ.ಕೆ.ಸ್ಟಾಲಿನ್   

ಚೆನ್ನೈ: ಗಣರಾಜ್ಯೋತ್ಸವ ಅಂಗವಾಗಿ ರಾಜ್ಯಪಾಲ ಆರ್‌.ಎನ್‌.ರವಿ ಅವರು ರಾಜಭವನದಲ್ಲಿ  ಭಾನುವಾರ ಏರ್ಪಡಿಸಿದ್ದ, ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಪಾಲ್ಗೊಳ್ಳಲಿಲ್ಲ.

ಕೇಂದ್ರ ಆರಂಭಿಸಲಿದ್ದ ಟಂಗಸ್ಟನ್ ಗಣಿಗಾರಿಕೆಯನ್ನು ರದ್ದುಪಡಿಸಿದ್ದಕ್ಕಾಗಿ ತಮ್ಮನ್ನು ಸನ್ಮಾನಿಸಲು ಮದುರೈಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸ್ಟಾಲಿನ್‌ ಪಾಲ್ಗೊಂಡಿದ್ದರು.

ಹಲವು ವಿಚಾರಗಳಿಗೆ ಸಂಬಂಧಿಸಿ ರಾಜಭವನ ಮತ್ತು ಡಿಎಂಕೆ ನೇತೃತ್ವದ ಸರ್ಕಾರದ ನಡುವಿನ ಜಟಾಪಟಿಯೇ ಇಂತಹ ನಡೆಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ADVERTISEMENT

ವಿರೋಧ ಪಕ್ಷಗಳಾದ ಎಐಎಡಿಎಂಕೆ, ಬಿಜೆಪಿ, ಡಿಎಂಡಿಕೆ ಹಾಗೂ ಪುದಿಯ ತಮಿಳಗಂ ಪಕ್ಷಗಳ ನಾಯಕರು ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

‘ರಾಜಭವನದಲ್ಲಿ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡ ತಮಿಳುನಾಡು ಜನತೆಗೆ ನನ್ನ ಹೃದಯಪೂರ್ವಕ ಧನ್ಯವಾದಗಳು’ ಎಂದು ರಾಜ್ಯಪಾಲ ರವಿ ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಕಳೆದ ವರ್ಷ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಜಭವನದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸ್ಟಾಲಿನ್‌ ಹಾಗೂ ಅವರ ಸಂಪುಟ ಸಹೋದ್ಯೋಗಿಗಳು ಪಾಲ್ಗೊಂಡಿದ್ದರು.

ಮದುರೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ಠಾಲಿನ್‌, ‘ಟಂಗಸ್ಟನ್‌ ಗಣಿಗಾರಿಕೆ ತಡೆದಿದ್ದಕ್ಕಾಗಿ ನನ್ನನ್ನು ಹೊಗಳುವ ಬದಲು, ಇದಕ್ಕೆ ಕಾರಣರಾದ ಇಲ್ಲಿನ ಜನರಿಗೆ ಧನ್ಯವಾದ ಹೇಳಿ, ಅವರನ್ನು ಸನ್ಮಾನಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.