ADVERTISEMENT

‘ಮಹಾ’ ವಿಧಾನಸಭೆ ವಿಸರ್ಜಿಸುವ ಪ್ರಶ್ನೆಯೇ ಇಲ್ಲ: ನಾನಾ ಪಟೊಲೆ

ಪಿಟಿಐ
Published 22 ಜೂನ್ 2022, 13:55 IST
Last Updated 22 ಜೂನ್ 2022, 13:55 IST
ನಾನಾ ಪಟೊಲೆ
ನಾನಾ ಪಟೊಲೆ   

ಮುಂಬೈ: ಮಹಾರಾಷ್ಟ್ರ ವಿಧಾನಸಭೆ ವಿಸರ್ಜಿಸುವ ಯಾವುದೇ ಪ್ರಸ್ತಾವ ಇಲ್ಲ ಎಂದು ಸಿಎಂ ಉದ್ಧವ್ ಠಾಕ್ರೆ ತಿಳಿಸಿರುವುದಾಗಿ ಮಹಾರಾಷ್ಟ್ರ ಘಟಕದ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೊಲೆ ಹೇಳಿದ್ಧಾರೆ.

ಮಹಾರಾಷ್ಟ್ರಕ್ಕೆ ವೀಕ್ಷಕರಾಗಿ ನೇಮಕವಾಗಿರುವ ಹಿರಿಯ ಕಾಂಗ್ರೆಸ್ ನಾಯಕ ಕಮಲನಾಥ್, ದೂರವಾಣಿ ಮೂಲಕ ಠಾಕ್ರೆ ಜೊತೆ ಚರ್ಚೆ ನಡೆಸಿದ್ದಾರೆ. ಮಹಾ ವಿಕಾಸ್ ಅಘಾಡಿ ನೇತೃತ್ವದ ಸರ್ಕಾರವು ಸದ್ಯದ ರಾಜಕೀಯ ಪರಿಸ್ಥಿತಿಯಿಂದ ಯಶಸ್ವಿಯಾಗಿ ಹೊರಬರಲಿದೆ. ರಾಜ್ಯ ವಿಧಾನಸಭೆ ವಿಸರ್ಜಿಸುವ ಯಾವುದೇ ಪ್ರಶ್ನೆ ಇಲ್ಲ ಎಂದು ಪಟೊಲೆ ಹೇಳಿದ್ದಾರೆ.

ಸದ್ಯದ ರಾಜಕೀಯ ಬೆಳವಣಿಗೆ ವಿಧಾನಸಭೆ ವಿಸರ್ಜನೆಗೆ ಕಾರಣವಾಗಬಹುದು ಎಂದು ಶಿವಸೇನೆ ಸಂಸದ ಸಂಜಯ್ ರಾವುತ್ ಟ್ವೀಟ್ ಮಾಡಿದ್ದರು.

ADVERTISEMENT

ಈ ಮಧ್ಯೆ, ಕಾಂಗ್ರೆಸ್‌ನ 44 ಶಾಸಕರ ಪೈಕಿ 41 ಮಂದಿ ಬುಧವಾರ ನಡೆದ ಶಾಸಕಾಂಗ ಸಭೆಯಲ್ಲಿ ಭಾಗವಹಿಸಿದ್ದರು ಎಂದು ಕಾಂಗ್ರೆಸ್ ಶಾಸಕಾಂಗದ ಪಕ್ಷದ ನಾಯಕ ಮತ್ತು ಸಚಿವ ಬಾಳಾಸಾಹೇಬ್ ತೋರಟ್ ಹೇಳಿದ್ದಾರೆ. ಮೂವರು ಶಾಸಕರು ರಾಜಧಾನಿಗೆ ವಾಪಸ್ ಆಗುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದರು.

‘ಕಾಂಗ್ರೆಸ್‌ನ ಎಲ್ಲ ಶಾಸಕರು ಒಗ್ಗಟ್ಟಾಗಿದ್ದು, 44 ಶಾಸಕರು ಒಟ್ಟಿಗಿದ್ದೇವೆ’ ಎಂದು ಅವರು ಹೇಳಿದ್ಧಾರೆ.

ಈ ಮಧ್ಯೆ, ನನಗೆ 46 ಶಾಸಕರ ಬೆಂಬಲವಿದೆ. ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗದ ರೀತಿ ವಿಧಾನಸಭೆಯಲ್ಲಿ ಪ್ರತ್ಯೇಕ ಗುಂಪು ರಚನೆಗೆ ಬೇಕಾದಷ್ಟು ಶಾಸಕರ ಬೆಂಬಲ ನನಗಿದೆ ಎಂದು ಏಕನಾಥ್ ಶಿಂಧೆ ಮರಾಠಿ ಸುದ್ದಿವಾಹಿನಿಗೆ ತಿಳಿಸಿದ್ದಾರೆ.

288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಭೆಯಲ್ಲಿ 55 ಮಂದಿ ಶಿವಸೇನೆ ಶಾಸಕರಿದ್ದಾರೆ.

ಇತ್ತ, ಬಂಡಾಯವೆದ್ದಿರುವ ಶಿವಸೇನೆ ಶಾಸಕರು ಏಕನಾಥ್ ಶಿಂಧೆ ನೇತೃತ್ವದಲ್ಲಿ ಚಾರ್ಟರ್ ವಿಮಾನದ ಮೂಲಕ ಬುಧವಾರ ಗುಜರಾತ್‌ನ ಸೂರತ್‌ನಿಂದ ಅಸ್ಸಾಂ ರಾಜಧಾನಿ ಗುವಾಹಟಿಗೆ ಬಂದಿಳಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.