
ನವದೆಹಲಿ: ಛತ್ತೀಸಗಢದ ಈ ಹಿಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರದ ಆಡಳಿತದಲ್ಲಿ, ಕಲ್ಲಿದ್ದಲು ತೆರಿಗೆಯ ಹೆಸರಿನಲ್ಲಿ ಅಕ್ರಮವಾಗಿ ಸಂಗ್ರಹಿಸಿದ ₹540 ಕೋಟಿ ಸುಲಿಗೆಯ ಹಣವನ್ನು ಚುನಾವಣಾ ಸಂಬಂಧಿತ ವೆಚ್ಚಗಳಿಗೆ, ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಲಂಚ ನೀಡಲು ಬಳಸಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಸೋಮವಾರ ಹೇಳಿದೆ.
ಮುಖ್ಯಮಂತ್ರಿ ಕಚೇರಿಯಲ್ಲಿ ಕಾರ್ಯದರ್ಶಿಯಾಗಿದ್ದು ಅಮಾನತುಗೊಂಡ ರಾಜ್ಯ ಆಡಳಿತ ಸೇವಾ ಅಧಿಕಾರಿ ಸೌಮ್ಯಾ ಚೌರಾಸಿಯಾ ಮತ್ತು ಇನ್ನೊಬ್ಬ ವ್ಯಕ್ತಿಯ ಒಟ್ಟು ₹2.66 ಕೋಟಿ ಮೌಲ್ಯದ ಆಸ್ತಿಗಳನ್ನು ಈ ಆರೋಪದ ನಂಟಿನ ಹಣ ಅಕ್ರಮ ವರ್ಗಾವಣೆ ತನಿಖೆಯ ಭಾಗವಾಗಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದಿದೆ.
ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್ಎ) ಒಟ್ಟು ಎಂಟು ಸ್ಥಿರ ಆಸ್ತಿಗಳು, ಭೂಮಿ ಮತ್ತು ವಸತಿ ಫ್ಲಾಟ್‌ಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಈ ಆಸ್ತಿಗಳನ್ನು ಪ್ರಕರಣದ ಆರೋಪಿಗಳಾದ ಚೌರಾಸಿಯಾ ಮತ್ತು ನಿಖಿಲ್ ಚಂದ್ರಕರ್ ಅವರು ತಮ್ಮ ಸಂಬಂಧಿಕರ ಹೆಸರಿನಲ್ಲಿ ಕಲ್ಲಿದ್ದಲು ತೆರಿಗೆ ಮತ್ತು ಇತರ ಸುಲಿಗೆ ಚಟುವಟಿಕೆಗಳ ಅಕ್ರಮ ಸಂಗ್ರಹದಿಂದ ಖರೀದಿಸಿದ್ದಾರೆ ಎಂದು ಇ.ಡಿ ಪ್ರಕಟಣೆಯಲ್ಲಿ ತಿಳಿಸಿದೆ.
ರಾಜಕಾರಣಿಗಳು ಮತ್ತು ಅಧಿಕಾರಿಗಳ ಸಹಕಾರದೊಂದಿಗೆ ಖಾಸಗಿ ವ್ಯಕ್ತಿಗಳ ಗುಂಪು 2020ರ ಜುಲೈನಿಂದ 2022ರ ಜೂನ್‌ವರೆಗೆ ಕಲ್ಲಿದ್ದಲು ಸಾಗಣೆದಾರರಿಂದ ಪ್ರತಿ ಟನ್‌ಗೆ ₹25ರಂತೆ, ₹540 ಕೋಟಿಯನ್ನು ಅಕ್ರಮವಾಗಿ ಸಂಗ್ರಹಿಸಿತ್ತು ಎಂದು ಆರೋಪಿಸಿದೆ.
ಇ.ಡಿ.ಯ ಈ ಆರೋಪಗಳನ್ನು ತಿರಸ್ಕರಿಸಿದ್ದ ಕಾಂಗ್ರೆಸ್, ರಾಜಕೀಯ ಪಿತೂರಿಯ ದೂರಿದು ಎಂದಿತ್ತು.
ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೆಲ್ ಅವರ ಸರ್ಕಾರದಲ್ಲಿ ಪ್ರಬಲ ಅಧಿಕಾರಿಯಾಗಿದ್ದ ಚೌರಾಸಿಯಾ ಸೇರಿದಂತೆ ಇತರ ಹತ್ತು ಜನರನ್ನು ಇ.ಡಿ ಬಂಧಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.