
ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್‌ನ ವಿವಿಧ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಇ.ಡಿ ಅಧಿಕಾರಿಗಳು ನಗದು ಹಾಗೂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ
–ಪಿಟಿಐ ಚಿತ್ರ
ರಾಂಚಿ/ಕೋಲ್ಕತ್ತ: ಕಲ್ಲಿದ್ದಲು ಮಾಫಿಯಾ ವಿರುದ್ಧದ ಹಣ ಅಕ್ರಮ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯವು (ಇ.ಡಿ) ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲಿ ಶುಕ್ರವಾರ ಬೃಹತ್ ಶೋಧ ಕಾರ್ಯಾಚರಣೆ ನಡೆಸಿದೆ.
ಬೆಳಿಗ್ಗೆ 6 ಗಂಟೆ ಸುಮಾರಿಗೆ 40ಕ್ಕೂ ಹೆಚ್ಚು ಸ್ಥಳಗಳಲ್ಲಿ ನಡೆದ ದಾಳಿಯಲ್ಲಿ ತನಿಖಾ ಸಂಸ್ಥೆಯ ಸುಮಾರು 100 ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.
ಶೋಧ ಕಾರ್ಯಾಚರಣೆ ನಡೆಸಿದ ಇ.ಡಿ ತಂಡಗಳಿಗೆ ಕೇಂದ್ರ ಭದ್ರತಾ ಪಡೆಗಳು ಭದ್ರತೆ ಒದಗಿಸಿದವು. ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್‌ಎ) ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇ.ಡಿ ತಂಡಗಳು ಕೆಲ ಸ್ಥಳಗಳಿಂದ ನಗದು ಮತ್ತು ಚಿನ್ನಾಭರಣಗಳನ್ನು ವಶಪಡಿಸಿಕೊಂಡಿವೆ. ಜಾರ್ಖಂಡ್‌ನಲ್ಲಿ ಕಲ್ಲಿದ್ದಲು ಕಳ್ಳತನ ಮತ್ತು ಕಳ್ಳ ಸಾಗಣೆಗೆ ಸಂಬಂಧಿಸಿದ ತನಿಖೆಯ ಭಾಗವಾಗಿ ಸಂಸ್ಥೆಯು ಸುಮಾರು 18 ಸ್ಥಳಗಳಲ್ಲಿ ದಾಳಿ ನಡೆಸಿದೆ.
ಮೂಲಗಳ ಪ್ರಕಾರ, ಅನಿಲ್ ಗೋಯಲ್, ಸಂಜಯ್ ಉದ್ಯೋಗ್, ಎಲ್.ಬಿ. ಸಿಂಗ್ ಮತ್ತು ಅಮರ್ ಮಂಡಲ್ ಹೆಸರಿನ ಘಟಕಗಳಲ್ಲಿ ಶೋಧ ನಡೆಸಲಾಗಿದೆ. ಕಲ್ಲಿದ್ದಲು ಕಳವು ಹಾಗೂ ಕಳ್ಳ ಸಾಗಣೆಯಿಂದಾಗಿ ಸರ್ಕಾರದ ಬೊಕ್ಕಸಕ್ಕೆ ನೂರಾರು ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಲ್ಲಿದ್ದಲು ಅಕ್ರಮ ಗಣಿಗಾರಿಕೆ, ಸಾಗಣೆ ಮತ್ತು ಸಂಗ್ರಹಣೆ ತನಿಖೆಯ ಭಾಗವಾಗಿ ಪಶ್ಚಿಮ ಬಂಗಾಳದಲ್ಲಿ ದುರ್ಗಾಪುರ, ಪುರುಲಿಯಾ, ಹೌರಾ ಮತ್ತು ಕೋಲ್ಕತ್ತದ ಸುಮಾರು 24 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ. ನರೇಂದ್ರ ಖಾರ್ಕಾ, ಯುಧಿಷ್ಠಿರ್ ಘೋಷ್, ಕೃಷ್ಣ ಮುರಾರಿ ಕಾಯಲ್, ಚಿನ್ಮಯಿ ಮಂಡಲ್, ರಾಜ್‌ಕಿಶೋರ್ ಯಾದವ್ ಮತ್ತು ಇತರರಿಗೆ ಸೇರಿದ ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.