
ಹೈದರಾಬಾದ್: ಸರ್ಕಾರಿ ಸ್ವಾಮ್ಯದ ಸಿಂಗರೇಣಿ ಕೊಲಿರೀಸ್ ಕಂಪನಿ ಲಿಮಿಟೆಡ್ (ಎಸ್‌ಸಿಸಿಎಲ್) ಬಳಿ ಕಲ್ಲಿದ್ದಲು ಗಣಿ ಗುತ್ತಿಗೆಗೆ ಸಂಬಂಧಿಸಿದಂತೆ, ಕಾಂಗ್ರೆಸ್‌ನ ಇಬ್ಬರು ಸಚಿವರ ನಡುವೆಯೇ ಸಂಘರ್ಷ ಆರಂಭವಾಗಿದೆ ಎಂದು ವರದಿಯಾಗಿದೆ.
ಈ ಬೆಳವಣಿಗೆಯ ಬೆನ್ನಲ್ಲೇ, ಒಡಿಶಾದ ಅಂಗುಲ್ ಜಿಲ್ಲೆಯಲ್ಲಿರುವ ನೈನಿ ಕಲ್ಲಿದ್ದಲು ಬ್ಲಾಕ್ ಗಣಿಗಾರಿಕೆ ಟೆಂಡರ್ ರದ್ದುಪಡಿಸಬೇಕು ಎಂದು ತೆಲಂಗಾಣದ ಹಣಕಾಸು ಹಾಗೂ ಇಂಧನ ಸಚಿವರಾಗಿರುವ ಉಪ ಮುಖ್ಯಮಂತ್ರಿ ಭಟ್ಟಿ ವಿಕ್ರಮಾರ್ಕ ಅವರು ಎಸ್‌ಸಿಸಿಎಲ್‌ಗೆ ಸೂಚನೆ ನೀಡಿದ್ದಾರೆ.
ಸಚಿವರೊಬ್ಬರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಸುದ್ದಿ ವಾಹಿನಿಯೊಂದರ ಮಾಲೀಕರೊಂದಿಗೆ ಸೇರಿ ಮತ್ತೊಬ್ಬ ಸಚಿವರಿಗೆ ಗುತ್ತಿಗೆ ಸಿಗದಂತೆ ತಡೆಯುವ ಯತ್ನ ನಡೆದಿದೆ ಎಂದು ಮತ್ತೊಂದು ತೆಲುಗು ಸುದ್ದಿ ವಾಹಿನಿಯೊಂದು ಆರೋಪ ಮಾಡಿತ್ತು. ಇದರ ಬೆನ್ನಲ್ಲೇ ಟೆಂಡರ್ ರದ್ದುಗೊಳಿಸಲಾಗಿದೆ.
ತೆಲುಗಿನ ಸುದ್ದಿ ವಾಹಿನಿಯೊಂದರ ಮಾಲೀಕರೊಬ್ಬರು ಕಲ್ಲಿದ್ದಲು ಗಣಿ ಗುತ್ತಿಗೆ ಪಡೆಯಲು ಆಸಕ್ತಿ ತೋರಿದ್ದರು. ಗುತ್ತಿಗೆ ಪಡೆಯಲು ಮುಂದಾಗಿದ್ದ ಪ್ರತಿಸ್ಪರ್ಧಿ ಸಚಿವರೊಬ್ಬರು ಮಹಿಳಾ ಐಎಎಸ್ ಅಧಿಕಾರಿ ಜೊತೆ ಪ್ರಣಯ ಸಂಬಂಧ ಹೊಂದಿದ್ದಾರೆ ಎಂದು ಸುದ್ದಿ ಮಾಡಿ ತಮ್ಮ ವಾಹಿನಿಯಲ್ಲಿ ಪ್ರಸಾರ ಮಾಡಿದ್ದರು.
ಮಹಿಳಾ ಅಧಿಕಾರಿಯ ತೇಜೋವಧೆಗೆ ಯತ್ನಿಸಿದ ವಿಚಾರ ತೆಲಂಗಾಣ ಐಎಎಸ್ ಹಾಗೂ ಐಪಿಎಸ್ ಅಧಿಕಾರಿ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ, ಪೊಲೀಸರು ದೂರು ದಾಖಲಿಸಿ ಸುದ್ದಿ ಪ್ರಸಾರ ಮಾಡಿದ ಸುದ್ದಿವಾಹಿನಿಯ ಪತ್ರಕರ್ತರನ್ನು ಬಂಧಿಸಿದ್ದರು. ಪತ್ರಕರ್ತರು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.
ಸ್ಪಷ್ಟನೆ: ಈ ಬೆಳವಣಿಗೆಯ ಬಳಿಕ ಭಾನುವಾರ ಪತ್ರಿಕಾಗೋಷ್ಠಿ ನಡೆಸಿ ಉಪ ಮುಖ್ಯಮಂತ್ರಿ ಭಟ್ಟಿ ವಿಕ್ರಮಾರ್ಕ ಸ್ಪಷ್ಟನೆ ನೀಡಿದರು.
‘ಸಾರ್ವಜನಿಕರನ್ನು ದಾರಿ ತಪ್ಪಿಸಲು ಕಪೋಲಕಲ್ಪಿತ ಕಥೆಗಳನ್ನು ಹೆಣೆಯಲಾಗಿದೆ. ಇಂತಹ ವರದಿಗಳಿಗೆ ನಾನು ಹೆದರುವುದಿಲ್ಲ. ಎಸ್‌ಎಸ್‌ಸಿಎಲ್ ಸಂಸ್ಥೆಯು ನಿಯಾಮವಳಿ ಪ್ರಕಾರ ಟೆಂಡರ್ ಆಹ್ವಾನಿಸಿದ್ದು, ಇದುವರೆಗೂ ಯಾವುದೇ ಬಿಡ್‌ಗಳನ್ನು ಸ್ವೀಕರಿಸಿಲ್ಲ’ ಎಂದು ಸ್ಪಷ್ಟನೆ ನೀಡಿದರು.
‘ಸಾರ್ವಜನಿಕ ಸ್ವಾಮ್ಯದ ಸಂಸ್ಥೆಯಲ್ಲಿ ಕೇಂದ್ರ ಸರ್ಕಾರದ ನಿಯಾಮವಳಿ ಅನ್ವಯ ಹೊಸತಾಗಿ ಟೆಂಡರ್ ಆಹ್ವಾನಿಸುವಂತೆ ಕಂಪನಿಗೆ ಸೂಚನೆ ನೀಡಲಾಗಿದೆ’ ಎಂದು ಹೇಳಿದರು.
ಸರ್ಕಾರಿ ಸ್ವಾಮ್ಯದ ಎಸ್‌ಎಸ್‌ಸಿಎಲ್‌ಗೆ ಒಡಿಶಾದ ನೈನಿ ಕಲ್ಲಿದ್ದಲು ಬ್ಲಾಕ್ ಹಂಚಿಕೆ ಮಾಡಲಾಗಿತ್ತು. ಇದು ರಾಜ್ಯದ ಹೊರಗಿನ ಮೊದಲ ಯೋಜನೆಯಾಗಿದೆ. 2025ರ ಏಪ್ರಿಲ್ ತಿಂಗಳಿನಿಂದಲೇ ಇದು ಕಾರ್ಯಾಚರಣೆ ಆರಂಭಿಸಿದ್ದು, ಇಲ್ಲಿಂದ ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು ಪೂರೈಸಲಾಗುತ್ತಿದೆ.
‘ಉಪಮುಖ್ಯಮಂತ್ರಿ ವಿಕ್ರಮಾರ್ಕ ಹಾಗೂ ಸುದ್ದಿ ವಾಹಿನಿಯೊಂದರ ಮಾಲೀಕರು ಕಲ್ಲಿದ್ದಲ್ಲು ಗಣಿ ಗುತ್ತಿಗೆ ಪಡೆಯಲು ಆಸಕ್ತಿ ಹೊಂದಿದ್ದರು. ಈ ಗಣಿ ಗುತ್ತಿಗೆ ಪಡೆಯಲು ಆಸಕ್ತಿ ವಹಿಸಿದ ಸಂಪುಟದ ಮತ್ತೊಬ್ಬ ಸಚಿವರ ಜೊತೆ ಮಹಿಳಾ ಅಧಿಕಾರಿಗೆ ಸಂಬಂಧ ಇದೆ ಎಂದು ಸುದ್ದಿ ಪ್ರಸಾರ ಮಾಡಿ, ತೇಜೋವಧೆಗೆ ಯತ್ನಿಸಿದ್ದರು’ ಎಂದು ತೆಲುಗಿನ ಮತ್ತೊಂದು ಸುದ್ದಿ ವಾಹಿನಿ ವರದಿ ಮಾಡಿದೆ.
ಸಿಬಿಐ ತನಿಖೆಗೆ ಆಗ್ರಹ: ಟೆಂಡರ್ ರದ್ದತಿ ಕುರಿತಂತೆ ಕೂಡಲೇ ಸಿಬಿಐ ತನಿಖೆ ನಡೆಸಬೇಕು ಎಂದು ವಿರೋಧ ಪಕ್ಷ ಬಿಆರ್‌ಎಸ್ ಒತ್ತಾಯಿಸಿದೆ.
‘ಇಡೀ ವ್ಯವಹಾರದಲ್ಲಿ ದೊಡ್ಡ ಮಟ್ಟದ ಅವ್ಯವಹಾರ ನಡೆದಿದೆ. ಒಂದೊಮ್ಮೆ ಬಿಜೆಪಿ ಹಾಗೂ ರೇವಂತ್ ರೆಡ್ಡಿ ಜೊತೆಗೆ ಅಕ್ರಮ ಸಂಪರ್ಕವಿಲ್ಲದಿದ್ದರೆ, ಬಿಜೆಪಿ ಹಾಗೂ ಕೇಂದ್ರ ಸಚಿವ ಕಿಶನ್ ರೆಡ್ಡಿ ಅವರು ಕೂಡಲೇ ಸಿಬಿಐ ತನಿಖೆಗೆ ಒತ್ತಾಯಿಸಬೇಕು’ ಎಂದು ಬಿಆರ್‌ಎಸ್ ನಾಯಕ ಟಿ.ಹರೀಶ್ ರಾವ್ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.