ADVERTISEMENT

ಕೋಲ್ಕತ್ತ | ಕಾನೂನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಭದ್ರತಾ ಸಿಬ್ಬಂದಿ ಬಂಧನ

ಪಿಟಿಐ
Published 28 ಜೂನ್ 2025, 7:42 IST
Last Updated 28 ಜೂನ್ 2025, 7:42 IST
<div class="paragraphs"><p>ಬಂಧನ </p></div>

ಬಂಧನ

   

ಕೋಲ್ಕತ್ತ: ದಕ್ಷಿಣ ಕೋಲ್ಕತ್ತದ ಕಾನೂನು ಪದವಿ ವಿದ್ಯಾರ್ಥಿನಿ ಮೇಲೆ ಜೂನ್‌ 25ರಂದು ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಾಲೇಜಿನ ಭದ್ರತಾ ಸಿಬ್ಬಂದಿಯನ್ನು ಶನಿವಾರ ಬಂಧಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಮೂವರನ್ನು ಬಂಧಿಸಲಾಗಿತ್ತು.

‘ಕಾಲೇಜಿನಲ್ಲಿದ್ದ ಸಿ.ಸಿ ಟಿವಿ ಕ್ಯಾಮೆರಾ ದೃಶ್ಯಾವಳಿ ಗಮನಿಸಿ, ಭದ್ರತಾ ಸಿಬ್ಬಂದಿಯನ್ನು ಶನಿವಾರ ಬೆಳಿಗ್ಗೆ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ವಿಚಾರಣೆಗೆ ಸಹಕರಿಸದ ಕಾರಣ, ‌ನಂತರ ಅವರನ್ನು ಬಂಧಿಸಲಾಯಿತು’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

‘ಭದ್ರತಾ ಸಿಬ್ಬಂದಿ ತನ್ನ ಜವಾಬ್ದಾರಿಯನ್ನು ನಿರ್ವಹಿಸಲು ವಿಫಲರಾಗಿದ್ದಾರೆ. ಘಟನೆ ನಡೆದ ವೇಳೆ ಅವರೊಬ್ಬರು ಮಾತ್ರ ಇದ್ದರೇ ಎಂಬುದು ಇನ್ನಷ್ಟೇ ತಿಳಿಯಬೇಕಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಲೇಜಿಗೆ ಬಿಗಿ ಭದ್ರತೆ: ಇಲ್ಲಿನ ಕಸಬಾ ಪ್ರದೇಶದಲ್ಲಿರುವ ಕಾಲೇಜಿನ ಆವರಣಕ್ಕೆ ಬಿಗಿಭದ್ರತೆ ಕಲ್ಪಿಸಲಾಗಿದ್ದು, ಒಳ ಹಾಗೂ ಹೊರ ಆವರಣದಲ್ಲಿ ಹೆಚ್ಚಿನ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿದೆ.

ಅಪರಾಧ ಕೃತ್ಯ ನಡೆದ ಯೂನಿಯನ್‌ ಕೊಠಡಿ, ಭದ್ರತಾ ಕೊಠಡಿಯನ್ನು ಸೀಲ್‌ ಮಾಡಲಾಗಿದೆ. ಕಾಲೇಜಿಗೆ ಪ್ರವೇಶ ಕಲ್ಪಿಸುವ ಅರ್ಟಿಯಲ್‌ ರಸ್ತೆಯಲ್ಲಿ ಶನಿವಾರ ವಾಹನ ಸಂಚಾರ ಎಂದಿನಂತಿತ್ತು.

ಪ್ರತಿಭಟನೆ: ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ಭದ್ರತೆ ಕಲ್ಪಿಸಲು ತೃಣಮೂಲ ಸರ್ಕಾರವು ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ, ಬಿಜೆಪಿ ಹಾಗೂ ಎಡಪಕ್ಷಗಳ‌ ಸದಸ್ಯರು ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದರು.

ರ‍್ಯಾಲಿಗೆ ತಡೆ: ಕೃತ್ಯ ಖಂಡಿಸಿ ನಗರದ ಕೇಂದ್ರ ಸಚಿವ ಹಾಗೂ ರಾಜ್ಯ ಘಟಕದ ಅಧ್ಯಕ್ಷ ಸುಕಾಂತ ಮಜುಂದಾರ್‌ ನೇತೃತ್ವದಲ್ಲಿ ಗೈರಾಹಾಟ್‌ನಿಂದ ಕಾಲೇಜಿನವರೆಗೆ ಶನಿವಾರ ಬಿಜೆಪಿ ಬೃಹತ್‌ ರ‍್ಯಾಲಿ ನಡೆಸಲು ನಿರ್ಧರಿಸಿತ್ತು. 

ರ‍್ಯಾಲಿಗೂ ಮುನ್ನವೇ ಮಜುಂದಾರ್‌ ಹಾಗೂ ಬಿಜೆಪಿ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು. ಈ ನಡೆಗೆ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ದೂರಿನಲ್ಲೇನಿದೆ?

  • ಭದ್ರತಾ ಸಿಬ್ಬಂದಿ ಮನವಿ ಮಾಡಿದ್ದರೂ, ನೆರವಿಗೆ ಬಂದಿರಲಿಲ್ಲ

  • ಅತ್ಯಾಚಾರವೆಸಗಿದ್ದ ವ್ಯಕ್ತಿ ವಕೀಲ, ಗುತ್ತಿಗೆ
    ಆಧಾರದಲ್ಲಿ ಅಧ್ಯಾಪಕನಾಗಿ ಕೆಲಸ

  • ಮದುವೆ ಪ್ರಸ್ತಾಪ ತಿರಸ್ಕರಿಸಿದ್ದಕ್ಕೆ ಅತ್ಯಾಚಾರ

  • ಇಬ್ಬರು ವಿದ್ಯಾರ್ಥಿಗಳಿಂದ ಕೃತ್ಯದ ಚಿತ್ರೀಕರಣ

  • ರಾತ್ರಿ 7.30ರಿಂದ 10.30ರವರೆಗೆ ನಡೆದಿದ್ದ ಕೃತ್ಯ

ಪತ್ರ ಬರೆದ ಮಹಿಳಾ ಆಯೋಗ

ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತಕ್ಷಣ ಕ್ರಮ ಕೈಗೊಳ್ಳಬೇಕು ಹಾಗೂ ಸಂತ್ರಸ್ತೆ ಕುಟುಂಬಸ್ಥರ ಜೊತೆ ಸಭೆ ನಡೆಸಲು ಆಯೋಗದ ಸದಸ್ಯೆ ಅರ್ಚನಾ ಮಜುಂದಾರ್ ಅವರಿಗೆ ಸೂಕ್ತ ಭದ್ರತೆ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗವು ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಒತ್ತಾಯಿಸಿದೆ.

ಪ್ರಕರಣವು ‘ಗಂಭೀರವಾಗಿದ್ದು, ಸಾರ್ವಜನಿಕ ಆತ್ಮಸಾಕ್ಷಿಯನ್ನು ಕಲುಕಿದೆ’ ಎಂದು ಆಯೋಗದ ಅಧ್ಯಕ್ಷೆ ವಿಜಯ ರಹಟ್ಕರ್‌ ಅವರು ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಶುಕ್ರವಾರ ಈ ಸಂಬಂಧ ಆಯೋಗವು ಸ್ವಯಂಪ್ರೇರಿತ ದೂರು ದಾಖಲಿಸಿದೆ.

ಎಸ್‌ಐಟಿ ರಚನೆ

ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ‌ಸಹಾಯಕ ಕಮೀಷನರ್‌ ನೇತೃತ್ವದಲ್ಲಿ ಐದು ಸದಸ್ಯರ ವಿಶೇಷ ತನಿಖಾ ತಂಡ(ಎಸ್‌ಐಟಿ)ವನ್ನು ರಚಿಸಲಾಗಿದೆ.

ಬಂಗಾಳದಲ್ಲಿ ಮಹಿಳೆಯರಿಗೆ ಯಾವುದೇ ಭದ್ರತೆಯಿಲ್ಲ. ರಾಜ್ಯದಲ್ಲಿ ಅವರು ಸುರಕ್ಷಿತರಲ್ಲ.
– ಸುಕಾಂತ ಮಜುಂದಾರ್‌, ಪಶ್ಚಿಮ ಬಂಗಾಳ ಬಿಜೆಪಿ ಘಟಕದ ಅಧ್ಯಕ್ಷ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.