ADVERTISEMENT

ಸ್ವತಂತ್ರ ನ್ಯಾಯಾಂಗಕ್ಕೆ ಕೊಲಿಜಿಯಂ ಅನಿವಾರ್ಯ: ನಿವೃತ್ತ ಸಿಜೆಐ ಯು.ಯು. ಲಲಿತ್

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2022, 18:25 IST
Last Updated 13 ನವೆಂಬರ್ 2022, 18:25 IST
ನಿವೃತ್ತ ಸಿಜೆಐ ಯು.ಯು. ಲಲಿತ್
ನಿವೃತ್ತ ಸಿಜೆಐ ಯು.ಯು. ಲಲಿತ್   

ನವದೆಹಲಿ: ನ್ಯಾಯಮೂರ್ತಿಗಳ ನೇಮಕಾತಿ ಮಾಡುವ ಕೊಲಿಜಿಯಂ ವ್ಯವಸ್ಥೆಯು ಸ್ವತಂತ್ರ ನ್ಯಾಯಾಂಗಕ್ಕೆ ಅನಿವಾರ್ಯ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್ ಅವರು ಪ್ರತಿಪಾದಿಸಿದ್ದಾರೆ.

ಸುಪ್ರೀಂ ಕೋರ್ಟ್‌ನ 49ನೇ ಮುಖ್ಯ ನ್ಯಾಯಮೂರ್ತಿಯಾಗಿ 74 ದಿನಗಳ ಕಾರ್ಯಭಾರ ಮುಗಿಸಿ ನವೆಂಬರ್ 9ರಂದು ನಿವೃತ್ತರಾದ ಅವರು, ಕೊಲಿಜಿಯಂ ದುರುಪಯೋಗವಾದ ರೀತಿಯಲ್ಲಿ ವ್ಯವಸ್ಥೆಗಳು ಬೇಕು ಎಂದು ಸಲಹೆ ನೀಡಿದ್ದಾರೆ.

‘ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಅನುಮೋದನೆ ನೀಡಿದ್ದ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗದ ಕಾಯ್ದೆ (ಎನ್‌ಜೆಎಸಿ) ಅಸಾಂವಿಧಾನಿಕ ಎಂಬುದಾಗಿ ಸುಪ್ರೀಂ ಕೋರ್ಟ್ ಪರಿಗಣಿಸಿದೆ. ಸರ್ಕಾರವು ಮತ್ತೆ ಆ ಕಾಯ್ದೆ ಜಾರಿಗೆ ಮುಂದಾದರೆ, ಅದು ಅವರ ಪರಮಾಧಿಕಾರ. ಈಗ ಅಸ್ತಿತ್ವದಲ್ಲಿರುವ ಕೊಲಿಜಿಯಂ ವ್ಯವಸ್ಥೆ ಯನ್ನೇ ನಾವು ಅನುಸರಿಸಬೇಕಿದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೊಲಿಜಿಯಂ ವ್ಯವಸ್ಥೆ ಅತ್ಯುತ್ತ ಮವಾಗಿದ್ದು, ಅದನ್ನು ಸರಿಪಡಿಸಬೇಕಾದ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಎನ್‌ಜೆಎಸಿ ತೀರ್ಪಿನ ಪ್ರಕಾರ ಸುಪ್ರೀಂ ಕೋರ್ಟ್‌ನಲ್ಲಿ ಸ್ಥಾಪಿಸಲಾಗಿರುವ ಕಾರ್ಯಾಲಯವು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುವಂತೆ ಆಗಬೇಕು ಎಂದಿದ್ದಾರೆ.

ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು, ಕೊಲಿಯಂ ವ್ಯವಸ್ಥೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ನ್ಯಾಯಮೂರ್ತಿಗಳು ನ್ಯಾಯದಾನ ಮಾಡುವುದಕ್ಕಿಂತ ಹೆಚ್ಚಾಗಿ ತಮ್ಮ ಹೆಚ್ಚಿನ ಸಮಯವನ್ನು ನ್ಯಾಯಮೂರ್ತಿ ನೇಮಕಾತಿ ನಿರ್ಧಾರ ತೆಗೆದುಕೊಳ್ಳುವುದರಲ್ಲೇ ಕಳೆಯುತ್ತಾರೆ ಎಂದು ಆರೋಪಿಸಿದ್ದರು. ಸಚಿವರ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ ಎಂದರು.

**

ಕೊಲಿಜಿಯಂನ ಎಲ್ಲ ಸದಸ್ಯರೂ ನೇಮ ಕಾತಿ ಪ್ರಕ್ರಿಯೆಯಲ್ಲಿ ತಮ್ಮ ಒಳನೋಟ ನೀಡುತ್ತಾರೆ. ಹೀಗಾಗಿಯೇ ಸಿಜೆಐ ಎನ್.ವಿ. ರಮಣ ಅವರ ಅವಧಿಯಲ್ಲಿ 250 ನ್ಯಾಯಮೂರ್ತಿಗಳ ನೇಮಕಾತಿ ಸಾಧ್ಯವಾಗಿದೆ.
–ಯು.ಯು. ಲಲಿತ್, ನಿವೃತ್ತ ಮುಖ್ಯ ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.