ADVERTISEMENT

ಕೋವಿಡ್‌–19 ಸೋಂಕಿನಿಂದ ಮುಕ್ತರಾಗಲು ಎಚ್‌ಐವಿ ಔಷಧ ಪರಿಣಾಮಕಾರಿ: ಅಧಿಕಾರಿ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2020, 13:45 IST
Last Updated 16 ಮಾರ್ಚ್ 2020, 13:45 IST
   

ಜೈಪುರ: ‘ಕೊರೊನಾ ಸೋಂಕು ದೃಢಪಟ್ಟವರು ಚೇತರಿಸಿಕೊಳ್ಳುವಲ್ಲಿ ಎಚ್‌ಐವಿ ಸೋಂಕು ತಡೆಗೆ ನೀಡುವ ಔಷಧಗಳು ಮಹತ್ವದ ಪಾತ್ರವಹಿಸಿವೆ’ ಎಂದು ರಾಜಸ್ಥಾನ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ರಾಜ್ಯದಲ್ಲಿ ನಾಲ್ವರು ರೋಗಿಗಳಲ್ಲಿ ಮೂವರು ಸೋಂಕಿನಿಂದ ಮುಕ್ತರಾಗಿದ್ದಾರೆ. ಆರಂಭದಲ್ಲಿ ಇವರಲ್ಲಿ ಜ್ವರದ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ, ಮಲೇರಿಯಾಗೆ ನೀಡುವ ಔಷಧ ನೀಡಲಾಯಿತು. ಕೊರೊನಾ ವೈರಸ್‌ನ ರಚನೆ ಬಹುತೇಕ ಎಚ್‌ಐವಿ ರೀತಿಯೇ ಇರುವುದರಿಂದಾಗಿ, ಎಚ್‌ಐವಿ ತಡೆಗೆ ನೀಡುವ ಔಷಧವನ್ನು ಸಹ ಕೊಡಲಾಯಿತು’ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ವೈದ್ಯಕೀಯ ಮತ್ತು ಆರೋಗ್ಯ) ರೋಹಿತ್ ಕುಮಾರ್ ಸಿಂಗ್ ವಿವರಿಸಿದ್ದಾರೆ.

‘ಈ ಎರಡೂ ಔಷಧಗಳಿಂದಾಗಿಯೇ ಬಹುಶಃ ಇವರು ಚೇತರಿಸಿಕೊಂಡಿದ್ದಾರೆ. ಈ ವಯೋಮಾನದವರಿಗೆ ಈ ಔಷಧಗಳು ಪರಿಣಾಮ ಬೀರಿ ಅವರು ಸೋಂಕುಮುಕ್ತರಾಗಿದ್ದು, ಮಹತ್ವದ್ದಾಗಿದೆ’ ಎಂದು ಎಸ್‌ಎಂಎಸ್‌ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಆಗಿರುವ ವೈದ್ಯ ಡಿ.ಎಸ್. ಮೀನಾ ತಿಳಿಸಿದ್ದಾರೆ.

ADVERTISEMENT

ಸೋಂಕು ದೃಢಪಟ್ಟಿದ್ದ ನಾಲ್ಕನೇ ವ್ಯಕ್ತಿಯನ್ನು ಜೈಪುರದ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.