ADVERTISEMENT

ಭಾರತದಲ್ಲಿ ಮತದಾನ ಕಡ್ಡಾಯಗೊಳಿಸಲು ಸಾಧ್ಯವಿಲ್ಲ: ಕೇಂದ್ರ ಸ್ಪಷ್ಟನೆ

ಪಿಟಿಐ
Published 5 ಆಗಸ್ಟ್ 2022, 16:16 IST
Last Updated 5 ಆಗಸ್ಟ್ 2022, 16:16 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಮತದಾನವನ್ನು ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಲೋಕಸಭೆಯಲ್ಲಿ ಮಂಡನೆಯಾಗಿದ್ದ ಖಾಸಗಿ ಸದಸ್ಯರ ಮಸೂದೆಯನ್ನು ಶುಕ್ರವಾರ ಹಿಂತೆಗೆದುಕೊಳ್ಳಲಾಗಿದೆ.

ಈ ಮಸೂದೆಯನ್ನು ಭಾರತದಲ್ಲಿ ಕಾರ್ಯಗತಗೊಳಿಸುವುದು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರವು ಸ್ಪಷ್ಟಪಡಿಸಿದ ಬಳಿಕ ಮಸೂದೆಯನ್ನು ಹಿಂತೆಗೆದುಕೊಳ್ಳಲಾಗಿದೆ. 2019ರಲ್ಲಿ ಬಿಜೆಪಿಯ ಜನಾರ್ಧನ ಸಿಂಗ್‌ ಸಿಗ್ರಿವಾಲ್‌ ಈ ಮಸೂದೆಯನ್ನು ಪರಿಚಯಿಸಿದ್ದರು. ಇದನ್ನು ಅನುಷ್ಠಾನಕ್ಕೆ ತರುವುದರಿಂದ ಪ್ರಜಾಪ್ರಭುತ್ವದ ಸಹಭಾಗಿತ್ವವನ್ನು ಹೆಚ್ಚಿಸುತ್ತದೆ ಮತ್ತು ಕಪ್ಪುಹಣದ ಬಳಕೆಯನ್ನು ಪರಿಶೀಲಿಸಬಹುದು ಎಂದು ಒತ್ತಿ ಹೇಳಿದ್ದರು.

ಕಾನೂನು ಮತ್ತು ನ್ಯಾಯ ಸಚಿವಾಲಯದ ರಾಜ್ಯ ಸಚಿವ ಎಸ್‌.ಪಿ. ಸಿಂಗ್‌ ಬಘೇಲ್‌ ಅವರು ಪ್ರತಿಕ್ರಿಯಿಸುತ್ತ, ಕಡ್ಡಾಯ ಮತದಾನ ತರಬೇಕು ಎಂಬ ಸದಸ್ಯರ ಭಾವನೆಗೆ ಸಮ್ಮತಿಯಿದೆ. ಆದರೆ ಮತದಾನದ ಹಕ್ಕು ಹೊಂದಿರುವ ಜನರಿಗೆ ಕಡ್ಡಾಯವಾಗಿ ಮತ ಚಲಾಯಿಸುವಂತೆ ಮಾಡಲು ವಾಸ್ತವಿಕವಾಗಿ ಸಾಧ್ಯವಿಲ್ಲ ಎಂದಿದ್ದಾರೆ.

ADVERTISEMENT

ಕಲಾಪದಲ್ಲಿ ಚರ್ಚೆಯ ವೇಳೆ ಕೆಲವರು ಪರವಾಗಿ ಮತ್ತು ಕೆಲವರು ವಿರೋಧಿಸಿ ಮಾತನಾಡಿದರು.

ಮಾರ್ಚ್‌ 2015ರಲ್ಲಿ ಚುನಾವಣೆ ಸುಧಾರಣೆ ನಿಟ್ಟಿನಲ್ಲಿ ರಚಿಸಲಾದ ವರದಿಯಲ್ಲಿ ಕಡ್ಡಾಯ ಮತದಾನವನ್ನು ಕಾನೂನು ಆಯೋಗ ವಿರೋಧಿಸಿತ್ತು. ಇದು ಕಾರ್ಯಸಾಧುವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿತ್ತು.

ಕಳೆದ ಲೋಕಸಭೆ ಚುನಾವಣೆಯಲ್ಲಿ ಶೇಕಡಾ 66.11ರಷ್ಟು ಮತದಾನವಾಗಿತ್ತು. ಇದುವರೆಗಿನ ಅತ್ಯಧಿಕ ಮತದಾನ ಇದಾಗಿದೆ. 2014ರಲ್ಲಿ ಶೇಕಡಾ 65.95ರಷ್ಟು ಮತದಾನವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.