ADVERTISEMENT

ಕೃಷಿ ಪತ್ತಿನ ಸಹಕಾರ ಸಂಘಗಳ ಕಂಪ್ಯೂಟರೀಕರಣಕ್ಕೆ ₹2,516 ಕೋಟಿ

ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆಯಲ್ಲಿ ಅನುಮೋದನೆ

ಪಿಟಿಐ
Published 29 ಜೂನ್ 2022, 13:49 IST
Last Updated 29 ಜೂನ್ 2022, 13:49 IST

ನವದೆಹಲಿ: ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ದೇಶದ ಒಟ್ಟು 63 ಸಾವಿರಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ (ಪಿಎಸಿಎಸ್‌) ಕಂಪ್ಯೂಟರೀಕರಣಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ಇದಕ್ಕಾಗಿ ಒಟ್ಟು ₹2,516 ಕೋಟಿ ಅನುದಾನ ಪ್ರಕಟಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಸಭೆಯಲ್ಲಿ ಬುಧವಾರ ಇದಕ್ಕೆ ಅನುಮೋದನೆ ನೀಡಲಾಗಿದೆ.

ಕೃಷಿ ಪತ್ತಿನ ಸಹಕಾರ ಸಂಘಗಳ ಕಾರ್ಯದಕ್ಷತೆ ಹೆಚ್ಚಿಸುವ, ಅವುಗಳ ಸೇವೆ ವಿಸ್ತರಿಸುವ, ವ್ಯವಹಾರದಲ್ಲಿ ಪಾರದರ್ಶಕತೆ ಹಾಗೂ ನಿಖರತೆ ತರುವುದು ಕಂಪ್ಯೂಟರೀಕರಣ ಯೋಜನೆಯ ಉದ್ದೇಶವಾಗಿದೆ.

ADVERTISEMENT

‘ಕ್ಲೌಡ್‌ ಆಧಾರಿತವಾಗಿರುವ ಏಕರೂಪದ ತಂತ್ರಾಂಶ ಅಭಿವೃದ್ಧಿಪಡಿಸುವುದು. ಸೈಬರ್‌ ಭದ್ರತೆಯ ಜೊತೆಗೆ ದತ್ತಾಂಶ ಸಂಗ್ರಹಣೆಗೆ ಸಹಕಾರ ನೀಡುವುದು. ಹಳೆಯ ದಾಖಲೆಗಳ ಡಿಜಿಟಲೀಕರಣಕ್ಕಾಗಿ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಅಗತ್ಯವಿರುವ ಹಾರ್ಡ್‌ವೇರ್‌ ಬೆಂಬಲ ಒದಗಿಸುವುದಕ್ಕೂ ಈ ಯೋಜನೆ ಸಹಕಾರಿಯಾಗಲಿದೆ. ಸಾಫ್ಟ್‌ವೇರ್‌ಗಳು ಸ್ಥಳೀಯ ಭಾಷೆ ಒಳಗೊಂಡಿರಲಿವೆ. ಇದರಿಂದ ಗ್ರಾಹಕರ ದಾಖಲೀಕರಣ ಸುಲಭವಾಗಲಿದೆ’ ಎಂದು ಪ್ರಕಟಣೆ ತಿಳಿಸಿದೆ.

‘ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಬಹುತೇಕ ಪತ್ತಿನ ಸಹಕಾರ ಸಂಘಗಳು ಇನ್ನೂ ಗಣಕೀಕೃತಗೊಂಡಿಲ್ಲ. ಅವು ಈಗಲೂ ಹಳೆಯ ಪದ್ಧತಿಯಲ್ಲೇ ವ್ಯವಹರಿಸುತ್ತಿವೆ. ಇದರಿಂದ ಅವುಗಳ ಕಾರ್ಯಕ್ಷಮತೆ ಕುಂಠಿತಗೊಂಡಿವೆ. ಅವುಗಳು ಬಳಸುತ್ತಿರುವ ತಂತ್ರಾಂಶಗಳಲ್ಲೂ ಏಕರೂಪತೆ ಇಲ್ಲ. ಅವು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ (ಡಿಸಿಸಿಬಿ) ಹಾಗೂ ಎಸ್‌ಟಿಸಿಬಿಗಳೊಂದಿಗೂ ಪರಸ್ಪರ ಸಂಪರ್ಕ ಹೊಂದಿಲ್ಲ’ ಎಂದು ವಿವರಿಸಿದೆ.

‘ತ್ವರಿತಗತಿಯಲ್ಲಿ ಸಾಲ ಸೌಲಭ್ಯ ಒದಗಿಸುವುದಕ್ಕೆ ಹಾಗೂ ಈ ಪ್ರಕ್ರಿಯೆಗೆ ತಗಲುವ ವೆಚ್ಚ ಕಡಿತಗೊಳಿಸುವುದಕ್ಕೂ ಈ ಯೋಜನೆ ನೆರವಾಗಲಿದೆ’ ಎಂದೂ ಹೇಳಿದೆ.

‘5 ವರ್ಷಗಳಲ್ಲಿ63 ಸಾವಿರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಕಂಪ್ಯೂಟರೀಕರಣಗೊಳಿಸಲು ನಿರ್ಧರಿಸಲಾಗಿದೆ.₹2,516 ಕೋಟಿ ಅನುದಾನದಲ್ಲಿ ಕೇಂದ್ರ ಪಾಲು₹1,528 ಕೋಟಿ ಇರಲಿದೆ. ಯೋಜನೆಯಿಂದ ಸುಮಾರು 13 ಕೋಟಿ ರೈತರಿಗೆ ನೆರವಾಗಲಿದೆ’ ಎಂದು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.