ಅಹಮದಾಬಾದ್: ಗುಜರಾತ್ ಸರ್ಕಾರದಲ್ಲಿ ಪ್ರಮುಖ ಖಾತೆಯನ್ನು ಹೊಂದಿದ್ದ ಇಬ್ಬರು ಸಂಪುಟ ಸಚಿವರನ್ನು ಹಠಾತ್ ಪದಚ್ಯುತಗೊಳಿಸಲು ಕಾರಣವೇನೆಂದು ಸಾರ್ವಜನಿಕ ಹೇಳಿಕೆ ಬಿಡುಗಡೆ ಮಾಡಬೇಕು ಎಂದು ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳು ಭಾನುವಾರ ರಾಜ್ಯ ಸರ್ಕಾರವನ್ನು ಒತ್ತಾಯಿಸಿವೆ.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಾಗಲೇ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಶನಿವಾರ ಕಂದಾಯ ಸಚಿವ ರಾಜೇಂದ್ರ ತ್ರಿವೇದಿ ಹಾಗೂ ರಸ್ತೆ ಮತ್ತು ಕಟ್ಟಡ ಸಚಿವ ಪೂರ್ಣೇಶ್ ಮೋದಿ ಅವರನ್ನು ಸಚಿವಸ್ಥಾನದಿಂದ ಹಠಾತ್ ಕೆಳಗಿಳಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಗುಜರಾತ್ ಕಾಂಗ್ರೆಸ್‌ನ ಮುಖ್ಯ ವಕ್ತಾರ ಮನೀಷ್ ದೋಶಿ, ‘ತ್ರಿವೇದಿ ಮತ್ತು ಮೋದಿ ಇಬ್ಬರೂ ಸರ್ಕಾರದ ಹಿರಿಯ ಸಚಿವರು. ಹಾಗಿದ್ದೂ ಪ್ರಮುಖ ಖಾತೆಯಿಂದ ಅವರನ್ನು ಪದಚ್ಯುತಗೊಳಿಸುವ ಮುಖ್ಯಮಂತ್ರಿಗಳ ನಡೆಗೆ ಕಾರಣ ಏನೆಂದು ತಿಳಿದುಕೊಳ್ಳುವುದು ಗುಜರಾತ್‌ನ ಜನರ ಹಕ್ಕು’ ಎಂದು ತಿಳಿಸಿದ್ದಾರೆ.
‘ಪ್ರಮುಖ ಖಾತೆಗಳಿಂದ ಇಬ್ಬರು ಹಿರಿಯ ಸಚಿವರನ್ನು ತೆಗೆದುಹಾಕುವ ನಿರ್ಧಾರ ಬಿಜೆಪಿಯ ವೈಯಕ್ತಿಕ ವಿಷಯ ಅಲ್ಲ. ಇದು ಸಾರ್ವಜನಿಕರ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗಿ ಇದಕ್ಕೆ ಕಾರಣ ಏನೆಂದು ಸರ್ಕಾರ ಸ್ಪಷ್ಟಪಡಿಸಬೇಕು’ ಎಂದು ಎಎಪಿ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಇಂದ್ರನಿಲ್ ರಾಜ್‌ಗುರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.