ADVERTISEMENT

ರಕ್ಷಣಾ ಕ್ಷೇತ್ರದಲ್ಲಿ ಅದಾನಿ ಸಮೂಹ ಏಕಸ್ವಾಮ್ಯ: ಕೇಂದ್ರ ನೆರವು -ಕಾಂಗ್ರೆಸ್

ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದ ಕಾಂಗ್ರೆಸ್‌

ಪಿಟಿಐ
Published 15 ಫೆಬ್ರುವರಿ 2023, 15:50 IST
Last Updated 15 ಫೆಬ್ರುವರಿ 2023, 15:50 IST
ಜೈರಾಮ್ ರಮೇಶ್‌ 
ಜೈರಾಮ್ ರಮೇಶ್‌    

ನವದೆಹಲಿ: ‘ಅದಾನಿ ಸಮೂಹವು ರಕ್ಷಣಾ ಕ್ಷೇತ್ರದಲ್ಲಿ ಏಕಸ್ವಾಮ್ಯ ಹೊಂದಲು ಕೇಂದ್ರ ಸರ್ಕಾರ ಅನುವು ಮಾಡಿಕೊಡುತ್ತಿದೆ’ ಎಂದು ಕಾಂಗ್ರೆಸ್‌ ಬುಧವಾರ ಆರೋಪಿಸಿದೆ.

‘ರಕ್ಷಣಾ ವಲಯದಂತಹ ಅತಿ ಸೂಕ್ಷ್ಮ ಹಾಗೂ ನಿರ್ಣಾಯಕ ಕ್ಷೇತ್ರದಲ್ಲಿ‌‌‌‌‌‌‌‌‌‌ ‘ಪ್ರಶ್ನಾರ್ಹ’ ಕಂಪನಿಯೊಂದು ತನ್ನ ಕಾರ್ಯಚಟುವಟಿಕೆ ಕೈಗೊಳ್ಳಲು ಅವಕಾಶ ಮಾಡಿಕೊಟ್ಟಿರುವುದು ಖಂಡನೀಯ. ಇದು ರಾಷ್ಟ್ರೀಯ ಹಿತಾಸಕ್ತಿಯೇ’ ಎಂದು ಕಿಡಿಕಾರಿದೆ.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ನಡೆಸುತ್ತಿರುವ ‘ಟ್ವೀಟ್‌ ಸರಣಿ’ಯ ಭಾಗವಾಗಿ ಬುಧವಾರ ಟ್ವೀಟ್‌ ಮಾಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌, ‘ಅದಾನಿ ಸಮೂಹವು ರಕ್ಷಣಾ ಕ್ಷೇತ್ರದಲ್ಲಿ ವಿವಿಧ ನವೋದ್ಯಮಗಳನ್ನು ಸ್ವಾಧೀನಪಡಿಸಿಕೊಳ್ಳುತ್ತಿದೆ’ ಎಂದು ದೂರಿದ್ದಾರೆ.

ADVERTISEMENT

‘ಅದಾನಿ ಸಮೂಹದ ಬೆಳವಣಿಗೆಯಲ್ಲಿ ನಿಮ್ಮ ಪಾತ್ರ ಏನು ಎಂಬುದನ್ನು ಪ್ರಶ್ನಿಸಿ ಮೋದಿ ಅವರ ಎದುರು ಸತತ 10ನೇ ದಿನ ಮೂರು ಅಂಶಗಳ ಪ್ರಶ್ನೆ ಇಟ್ಟಿದ್ದೇನೆ. ಅವರು ಇನ್ನಾದರೂ ಮೌನ ಮುರಿಯಲಿ’ ಎಂದು ಜೈರಾಮ್‌ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

‘ಗೌತಮ್‌ ಅದಾನಿ ಅವರು 2017ರಲ್ಲಿ ಇಸ್ರೇಲ್‌ಗೆ ಭೇಟಿ ನೀಡಿ ಬಂದ ಬಳಿಕ ಭಾರತ–ಇಸ್ರೇಲ್‌ ರಕ್ಷಣಾ ಬಾಂಧವ್ಯದ ಮೇಲೆ ಪ್ರಭಾವ ಬೀರಿದ್ದಾರೆ. ಡ್ರೋನ್‌ ತಯಾರಿಕೆ, ಎಲೆಕ್ಟ್ರಾನಿಕ್ಸ್‌, ವಿಮಾನಗಳ ನಿರ್ವಹಣೆ ಸೇರಿದಂತೆ ವಿವಿಧ ವಲಯಗಳಲ್ಲಿ ಲಾಭದಾಯಕ ಉದ್ದಿಮೆಗಳನ್ನು ಸ್ಥಾಪಿಸಿದ್ದಾರೆ’ ಎಂದೂ ಆರೋಪಿಸಿದ್ದಾರೆ.

****

ಅದಾನಿ ಪ್ರಕರಣ: ಅರ್ಜಿ ವಿಚಾರಣೆಗೆ ‘ಸುಪ್ರೀಂ’ ಒಪ್ಪಿಗೆ

ನವದೆಹಲಿ (ಪಿಟಿಐ): ‘ಅದಾನಿ ಸಮೂಹದ ವಿರುದ್ಧದ ಪ್ರಕರಣವನ್ನು ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಮೂರ್ತಿಯೊಬ್ಬರ ಮೇಲ್ವಿಚಾರಣೆಯಲ್ಲಿ ತನಿಖೆಗೆ ಒಳಪಡಿಸುವಂತೆ ಕೋರಿ ಕಾಂಗ್ರೆಸ್‌ ನಾಯಕಿ ಜಯಾ ಠಾಕೂರ್‌ ಸಲ್ಲಿಸಿರುವ ಅರ್ಜಿಯನ್ನು ಇದೇ 17ರಂದು ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್‌ ಬುಧವಾರ ಹೇಳಿದೆ.

ಅರ್ಜಿಯನ್ನು ತುರ್ತು ವಿಚಾರಣೆಗೆ ಪರಿಗಣಿಸುವಂತೆ ಜಯಾ ಅವರ ಪರ ವಕೀಲರು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಹಾಗೂ ನ್ಯಾಯಮೂರ್ತಿ ಪಿ.ಎಸ್‌.ನರಸಿಂಹ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠಕ್ಕೆ ಮನವಿ ಮಾಡಿದರು.

ಇದೇ 24ರಂದು ವಿಚಾರಣೆ ನಡೆಸುವುದಾಗಿ ನ್ಯಾಯಪೀಠ ಮೊದಲು ಹೇಳಿತು. ಇದೇ 17ರಂದು ಪ್ರಕರಣಕ್ಕೆ ಸಂಬಂಧಿಸಿದ ಇತರ ಅರ್ಜಿಗಳ ವಿಚಾರಣೆ ನಿಗದಿಯಾಗಿದೆ ಹೀಗಾಗಿ ಅದೇ ದಿನ ವಿಚಾರಣೆ ನಡೆಸಬೇಕು ಎಂದು ವಕೀಲರು ಕೋರಿದರು. ಅವರ ಮನವಿಯನ್ನು ನ್ಯಾಯಪೀಠ ಪುರಸ್ಕರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.