ADVERTISEMENT

ಅಮೆರಿಕದ ಉದ್ಯಮಿ ಜತೆ ರಾಹುಲ್‌ ಗಾಂಧಿಗೆ ನಂಟು: ದುಬೆ ಹೇಳಿಕೆ; ಕಾಂಗ್ರೆಸ್ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2024, 14:26 IST
Last Updated 5 ಡಿಸೆಂಬರ್ 2024, 14:26 IST
<div class="paragraphs"><p>ವಿರೋಧ ಪಕ್ಷಗಳ ಸದಸ್ಯರು ಗುರುವಾರ ಸಂಸತ್‌ ಆವರಣದಲ್ಲಿ ಕಪ್ಪು ಜಾಕೆಟ್ ಧರಿಸಿ ಪ್ರತಿಭಟಿಸಿದರು</p></div>

ವಿರೋಧ ಪಕ್ಷಗಳ ಸದಸ್ಯರು ಗುರುವಾರ ಸಂಸತ್‌ ಆವರಣದಲ್ಲಿ ಕಪ್ಪು ಜಾಕೆಟ್ ಧರಿಸಿ ಪ್ರತಿಭಟಿಸಿದರು

   

–ಪಿಟಿಐ ಚಿತ್ರ

ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರಿಗೆ ಅಮೆರಿಕದ ಉದ್ಯಮಿ ಜಾರ್ಜ್‌ ಸೊರೊಸ್ ಜತೆ ನಂಟು ಇದೆ ಎಂದು ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ಆರೋಪಿಸಿದ್ದು, ಲೋಕಸಭೆಯಲ್ಲಿ ಗುರುವಾರ ಕಾಂಗ್ರೆಸ್‌–ಬಿಜೆಪಿ ನಡುವೆ ಜಟಾಪಟಿಗೆ ಕಾರಣವಾಯಿತು.

ADVERTISEMENT

ದುಬೆ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಉದ್ಯಮಿ ಗೌತಮ್‌ ಅದಾನಿ ಅವರ ‘ಮೆಗಾ ಭ್ರಷ್ಟಾಚಾರ’ವನ್ನು ಬಯಲಿಗೆಳೆಯುವವರ ತೇಜೋವಧೆ ಮಾಡುವ ಕೆಲಸವನ್ನು ‘ಅದಾನಿ ಏಜೆಂಟ’ರಿಗೆ ವಹಿಸಲಾಗಿದೆ ಎಂದು ತಿರುಗೇಟು ನೀಡಿದೆ.

ದುಬೆ ಆರೋಪಗಳಿಗೆ ಕಾಂಗ್ರೆಸ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಲೋಕಸಭೆ ಕಲಾಪವನ್ನು ಎರಡು ಸಲ ಮುಂದೂಡಲಾಯಿತು. ಹೇಳಿಕೆ ವಾಪಸ್‌ ಪಡೆದು ದುಬೆ ಅವರು ಕ್ಷಮೆಯಾಚಿಸುವಂತೆ ಮಾಡಬೇಕು ಎಂದು ಕಾಂಗ್ರೆಸ್‌ ಸದಸ್ಯರು, ಸ್ಪೀಕರ್‌ ಓಂ ಬಿರ್ಲಾ ಅವರನ್ನು ಒತ್ತಾಯಿಸಿದರು. 

ದುಬೆ ಹೇಳಿದ್ದು ಏನು?: 

ಶೂನ್ಯ ವೇಳೆಯಲ್ಲಿ ಮಾತನಾಡಿದ ದುಬೆ, ಕಾಂಗ್ರೆಸ್‌ ನೇತೃತ್ವದ ವಿಪಕ್ಷಗಳು ಫ್ರಾನ್ಸ್‌ನ ಮಾಧ್ಯಮಗಳಲ್ಲಿ ಬಂದ ವರದಿಗಳನ್ನು ಆಧರಿಸಿ ಸಂಸತ್ ಕಲಾಪದ ಹಳಿತಪ್ಪಿಸಲು ಪ್ರಯತ್ನಿಸಿವೆ ಎಂದು ಆರೋಪಿಸಿದರು. 

ಅಮೆರಿಕ ಶ್ರೀಮಂತ ಹೂಡಿಕೆದಾರ ಸೊರೊಸ್, ತನಿಖಾ ಪತ್ರಕರ್ತರ ಸಂಘಟನೆಯಾದ ‘ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ ಯೋಜನೆ’ (ಒಸಿಸಿಆರ್‌ಪಿ) ಹಾಗೂ ಕಾಂಗ್ರೆಸ್ ಪಕ್ಷ ಪರಸ್ಪರ ಸಂಪರ್ಕ ಸಾಧಿಸಿ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸಿಗೆ ಮಸಿ ಬಳಿಯಲು ಪ್ರಯತ್ನಿಸಿವೆ ಎಂದು ಹೇಳಿದರು.

ಭಾರತದಲ್ಲಿ ಅಭಿವೃದ್ಧಿಪಡಿಸಿದ ಕೋವಿಡ್‌ 19 ಲಸಿಕೆ, ಹಿಂಡನ್‌ಬರ್ಗ್‌ ವರದಿ, ಪೆಗಾಸಸ್ ವಿವಾದ ಸೇರಿದಂತೆ ಒಸಿಸಿಆರ್‌ಪಿ ಪ್ರಕಟಿಸಿದ ವಿವಿಧ ವಿಷಯಗಳನ್ನು ಎತ್ತಿಕೊಂಡು ಸಂಸತ್‌ ಕಲಾಪಕ್ಕೆ ಅಡ್ಡಿಪಡಿಸಲು ಕಾಂಗ್ರೆಸ್‌ ಈ ಹಿಂದೆ ಪ್ರಯತ್ನಿಸಿದೆ ಎಂದು ದೂರಿದರು. 

ವಿರೋಧ ಪಕ್ಷಗಳ ಹಲವು ಮುಖಂಡರು ಮಾಧ್ಯಮಗಳಲ್ಲಿ ಬಂದ ವರದಿಗಳನ್ನು ಕಲಾಪದಲ್ಲಿ ಪ್ರಸ್ತಾಪಿಸಿದ್ದಾರೆ. ಆ ವರದಿಗಳು ಭಾರತದಲ್ಲಿ ಸಂಸತ್‌ ಅಧಿವೇಶನ ಆರಂಭವಾಗುವುದಕ್ಕೆ ಕೆಲವೇ ದಿನಗಳ ಮುನ್ನ ಪ್ರಕಟಗೊಂಡಿವೆ ಎಂದು ಹೇಳಿದರು.

ದುಬೆ ಅವರು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಪ್ರಶ್ನೆಗಳನ್ನು ಕೇಳಲು ಮುಂದಾದಾಗ, ಕಾಂಗ್ರೆಸ್ ಸದಸ್ಯರು ಪ್ರತಿಭಟಿಸಿದರು.

ಕಾಂಗ್ರೆಸ್‌ ಸಂಸದರು ಗದ್ದಲ ಎಬ್ಬಿಸಿದ್ದರಿಂದ ಸ್ಪೀಕರ್‌, ಕಲಾಪವನ್ನು ಮಧ್ಯಾಹ್ನ 2ರವರೆಗೆ ಮುಂದೂಡಿದರು. ಕಲಾಪ ಪುನರಾರಂಭವಾದಾಗಲೂ ಗದ್ದಲ ನಿಲ್ಲಲಿಲ್ಲ. ಇದರಿಂದ ಕಪಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.

ಬಿಜೆಪಿ ಸಂಸದ ನಿಶಿಕಾಂತ್‌ ದುಬೆ
ರಾಹುಲ್ ಗಾಂಧಿ ಅವರು ಅದಾನಿ ವಿರುದ್ಧ ಮಾತನಾಡಿದಾಗಲೆಲ್ಲಾ ಸಂಸತ್ತಿನಲ್ಲಿರುವ ‘ಅದಾನಿ ಸ್ಲೀಪರ್ ಸೆಲ್‌’ಗಳು ಸಕ್ರಿಯಗೊಳ್ಳುತ್ತವೆ
ಗೌರವ್‌ ಗೊಗೊಯ್ ಲೋಕಸಭೆಯಲ್ಲಿ ಕಾಂಗ್ರೆಸ್‌ ಉಪನಾಯಕ

ಕಾಂಗ್ರೆಸ್‌ ಪ್ರತಿಭಟನೆ

ದುಬೆ ಅವರು ರಾಹುಲ್‌ ಗಾಂಧಿ ವಿರುದ್ಧ ‘ಅವಹೇಳನಕಾರಿ ಭಾಷೆ’ ಬಳಸಿದ್ದನ್ನು ಖಂಡಿಸಿ ಕಾಂಗ್ರೆಸ್‌ ಸದಸ್ಯರು ಸಂಸತ್‌ ಭವನದ ಮಕರ ದ್ವಾರದ ಬಳಿ ಪ್ರತಿಭಟನೆ ನಡೆಸಿ ಘೋಷಣೆಗಳನ್ನು ಕೂಗಿದರು. ‘ಸಂಸತ್ತಿನಲ್ಲಿ ಈ ರೀತಿಯ ಅವಹೇಳನಕಾರಿ ಹೇಳಿಕೆಯನ್ನು ಎಂದೂ ಬಳಸಿಲ್ಲ. ರಾಹುಲ್ ಗಾಂಧಿ ಅವರು ಅದಾನಿ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಲು ಆರಂಭಿಸಿದ ದಿನದಿಂದಲೂ ಅದಾನಿ ಏಜೆಂಟ್‌ಗಳು ಅವರನ್ನು ನಿಂದಿಸಲು ಶುರು ಮಾಡಿದ್ದಾರೆ. ಏನೇ ಅದರೂ ರಾಹುಲ್‌ ಅವರ ಧನಿ ಅಡಗಿಸಲು ಸಾಧ್ಯವಿಲ್ಲ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್‌ ಹೇಳಿದರು.

ಕಪ್ಪು ಜಾಕೆಟ್ ಧರಿಸಿದ ವಿಪಕ್ಷ ಸದಸ್ಯರು

ಉದ್ಯಮಿ ಗೌತಮ್‌ ಅದಾನಿ ಲಂಚ ಪ್ರಕರಣವನ್ನು ಜಂಟಿ ಸಂಸದೀಯ ಸಮಿತಿಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ‘ಇಂಡಿಯಾ’ ಮೈತ್ರಿಕೂಟದ ಸಂಸದರು ಸಂಸತ್‌ ಆವರಣದಲ್ಲಿ ಗುರುವಾರ ಕಪ್ಪು ಜಾಕೆಟ್‌ ಧರಿಸಿ ಪ್ರತಿಭಟನೆ ನಡೆಸಿದರು.  ‘ಮೋದಿ–ಅದಾನಿ ಏಕ್‌ ಹೆ’ ‘ಅದಾನಿ ಸೇಫ್‌ ಹೆ’ (ಮೋದಿ ಮತ್ತು ಅದಾನಿ ಇಬ್ಬರೂ ಒಂದೇ ಅದಾನಿ ಸುರಕ್ಷಿತರಾಗಿದ್ದಾರೆ) ಎಂಬ ಬರಹ ಇದ್ದ ಬ್ಯಾಜ್‌ ಅನ್ನು ಜಾಕೆಟ್‌ನಲ್ಲಿ ಪ್ರದರ್ಶಿಸಿದರು.  

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಒಳಗೊಂಡಂತೆ ಕಾಂಗ್ರೆಸ್‌ ಸಂಸದರಲ್ಲದೆ ಆರ್‌ಜೆಡಿ ಮತ್ತು ಎಡಪಕ್ಷಗಳ ಸಂಸದರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಅದಾನಿ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಚರ್ಚೆಯಾಗಬೇಕು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಈ ವಿಷಯದಲ್ಲಿ ಮೌನ ಮುರಿಯಬೇಕು ಎಂದು ರಾಹುಲ್‌ ಹಾಗೂ ಪ್ರಿಯಾಂಕಾ ಆಗ್ರಹಿಸಿದರು. ವಿರೋಧ ಪಕ್ಷಗಳ ಸಂಸದರು ಸಂಸತ್‌ ಭವನದ ‘ಮಕರ ದ್ವಾರ’ದ ಬಳಿ ಮಂಗಳವಾರ ಮತ್ತು ಬುಧವಾರವೂ ಪ್ರತಿಭಟನೆ ನಡೆಸಿದ್ದರು.

ಸ್ಪೀಕರ್ ಎಚ್ಚರಿಕೆ: 

ಸಂಸತ್ತಿನಲ್ಲಿ ತ್ರಿವರ್ಣ ಧ್ವಜವನ್ನು ಹೊರತುಪಡಿಸಿ ಯಾವುದೇ ಬ್ಯಾಜ್‌ಗಳನ್ನು ಧರಿಸಬಾರದು ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿಪಕ್ಷಗಳ ಸದಸ್ಯರಿಗೆ ಎಚ್ಚರಿಕೆ ನೀಡಿದರು. ‘ರಾಷ್ಟ್ರಧ್ವಜ ಹೊರತುಪಡಿಸಿ ಬ್ಯಾಜ್‌ ರೂಪದಲ್ಲಿ ಇತರ ಏನನ್ನೂ ಧರಿಸಬಾರದು ಎಂದು ಸಂಸತ್‌ ಕಲಾಪಕ್ಕೆ ಸಂಬಂಧಿಸಿದ ನಿಯಮಗಳು ಹೇಳುತ್ತವೆ. ಸದನದ ಘನತೆಗೆ ಧಕ್ಕೆ ಉಂಟಾಗದಂತೆ ಎಚ್ಚರ ವಹಿಸಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.