ADVERTISEMENT

ದ್ರೌಪದಿಗೆ ಬೆಂಬಲಿಸಿದ ಜೆಎಂಎಂ ಮೇಲೆ ಕಾಂಗ್ರೆಸ್‌ ಕೆಂಗಣ್ಣು 

ರಾಷ್ಟ್ರಪತಿ ಚುನಾವಣೆ: ಜಾರ್ಖಂಡ್‌ ಮೈತ್ರಿಕೂಟದಲ್ಲಿ ಬಿರುಕು

​ಪ್ರಜಾವಾಣಿ ವಾರ್ತೆ
Published 15 ಜುಲೈ 2022, 18:25 IST
Last Updated 15 ಜುಲೈ 2022, 18:25 IST
ಜೆಎಂಎಂ ವರಿಷ್ಠ ಶಿಬು ಸೊರೇನ್‌ ಮತ್ತು ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಭೇಟಿಯಾದ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು
ಜೆಎಂಎಂ ವರಿಷ್ಠ ಶಿಬು ಸೊರೇನ್‌ ಮತ್ತು ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಭೇಟಿಯಾದ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು    

ರಾಂಚಿ : ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಬೆಂಬಲ ಘೋಷಿಸುವ ಮೂಲಕ ಬಿಜೆಪಿಗೆ ಹತ್ತಿರವಾಗುತ್ತಿರುವ ಜಾರ್ಖಂಡ್‌ ಮುಕ್ತಿ ಮೋರ್ಚಾ (ಜೆಎಂಎಎಂ) ಪಕ್ಷವು, ಜಾರ್ಖಂಡ್‌ನಲ್ಲಿ ಆಡಳಿತಾರೂಢ ಯುಪಿಎ ಮೈತ್ರಿಯ ಪಾಲುದಾರ ಕಾಂಗ್ರೆಸ್‌ನ ತೀವ್ರ ಕೆಂಗಣ್ಣಿಗೆ ಗುರಿಯಾಗಿದೆ.

ಯುಪಿಎ ಪಾಲುದಾರ ಕಾಂಗ್ರೆಸ್‌ ಮತ್ತು ಆರ್‌ಜೆಡಿ ಪಕ್ಷಗಳು ಪ್ರತಿಪಕ್ಷಗಳ ಅಭ್ಯರ್ಥಿ ಯಶವಂತ ಸಿನ್ಹಾ ಅವರಿಗೆ ಬೆಂಬಲವಾಗಿ ನಿಂತಿವೆ. ‘ಜಾರ್ಖಂಡ್‌ ಮಣ್ಣಿನ ಮಗ’ ಯಶವಂತ ಸಿನ್ಹಾ ಅವರಿಗೇ ತನ್ನ ಬೆಂಬಲವೆಂದು ಜೆಎಂಎಂ ಪಕ್ಷ ಆರಂಭದಲ್ಲಿ ಹೇಳಿತ್ತು. ಆದರೆ, ಎನ್‌ಡಿಎ ದ್ರೌಪದಿ ಮುರ್ಮು ಅವರ ಹೆಸರು ಘೋಷಿಸಿ, ಅವರು ಗೆದ್ದರೆ ರಾಷ್ಟ್ರಪತಿ ಹುದ್ದೆಗೇರಿದ ದೇಶದ ಮೊದಲ ಬುಡಕಟ್ಟು ಮಹಿಳೆ ಎನಿಸಿಕೊಳ್ಳುತ್ತಾರೆ ಎಂದಾಗ, ಜೆಎಎಂ ತನ್ನ ನಿಲುವು ಬದಲಿಸಬೇಕಾಯಿತು ಎನ್ನುವುದು ಸ್ಪಷ್ಟ.

ಮುರ್ಮು ಮತ್ತು ಜೆಎಂಎಂ ನಾಯಕ ಶಿಬು ಸೊರೇನ್‌ ಇಬ್ಬರೂ ಬುಡಕಟ್ಟು ಸಮುದಾಯದ ನಾಯಕರು. ಈ ಇಬ್ಬರೂ ಜಾರ್ಖಂಡ್‌ ಮತ್ತು ನೆರೆಯ ಒಡಿಶಾ ರಾಜ್ಯದಲ್ಲಿ ಬಹುಸಂಖ್ಯೆಯಲ್ಲಿರುವಸಂತಾಲ್ ಜನಾಂಗಕ್ಕೆ ಸೇರಿದವರು. ಹಾಗಾಗಿಯೇ ‘ಮಣ್ಣಿನ ಮಗ’ ಅಥವಾ ‘ಬುಡಕಟ್ಟು ಜನಾಂಗ’ ಇದರಲ್ಲಿ ಆಯ್ಕೆ ಪ್ರಶ್ನೆಯೂ ಜೆಎಂಎಂಗೆ ಎದುರಾಯಿತು ಎನ್ನುವುದು ಕೆಲವು ವಿಶ್ಲೇಷಕರ ಅಭಿಪ್ರಾಯ.

ADVERTISEMENT

ಜಾರ್ಖಂಡ್ ಮುಖ್ಯಮಂತ್ರಿ ಮತ್ತು ಪಕ್ಷದ ಕಾರ್ಯಾಧ್ಯಕ್ಷಹೇಮಂತ್ ಸೊರೇನ್ ಅವರು ಗಣಿ ಗುತ್ತಿಗೆಯಲ್ಲಿ ಹಿತಾಸಕ್ತಿ ಸಂಘರ್ಷ ಆರೋಪ ಪ್ರಕರಣದಲ್ಲಿ ಜಾರ್ಖಂಡ್ ಹೈಕೋರ್ಟ್ ಮುಂದೆ ವಿಚಾರಣೆ ಎದುರಿಸುತ್ತಿದ್ದಾರೆ. ಜತೆಗೆ ಹಣ ಅಕ್ರಮ ವರ್ಗಾವಣೆ ಪ್ರಕರಣವನ್ನೂ ಎದುರಿಸುತ್ತಿದ್ದಾರೆ. ಈ ಕಾರಣಗಳಿಗಾಗಿಯೂ ಜೆಎಂಎಂಮುರ್ಮು ಅವರಿಗೆ ಬೇಷರತ್‌ ಬೆಂಬಲ ಘೋಷಿಸಿದೆ ಎನ್ನಲಾಗುತ್ತಿದೆ.

ಮುರ್ಮುಗೆ ಎಸ್‌ಬಿಎಸ್‌ಪಿ ಬೆಂಬಲ

ಲಖನೌ: ಸಮಾಜವಾದಿ ಪಕ್ಷದ (ಎಸ್‌ಪಿ) ಮೈತ್ರಿ ಕೂಟ ಸುಹೇಲ್‌ದೇವ್‌ ಭಾರತೀಯ ಸಮಾಜ ಪಾರ್ಟಿ (ಎಸ್‌ಬಿಎಸ್‌ಪಿ) ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಬೆಂಬಲ ಘೋಷಿಸಿದೆ.

ಶುಕ್ರವಾರಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ನಾಯಕ ರಾಜ್‌ಭರ್‌ ‘ಅಖಿಲೇಶ್‌ ಯಾದವ್‌ ನಮ್ಮ ಬೆಂಬಲ ಕೇಳಿಲ್ಲ. ಕೇಂದ್ರ ಗೃಹಸಚಿವ ಅಮಿತ್‌ ಶಾ ಜತೆಗೆ ದೆಹಲಿಯಲ್ಲಿ ಇತ್ತೀಚೆಗಷ್ಟೇ ಸಭೆ ನಡೆಯಿತು. ಶಾ ಅವರು ಮುರ್ಮು ಅವರನ್ನು ಬೆಂಬಲಿಸುವಂತೆ ಕೇಳಿದರು. ಹಾಗಾಗಿ ಉತ್ತರಪ್ರದೇಶದಲ್ಲಿ ಪಕ್ಷದ ಆರೂ ಶಾಸಕರು ಮುರ್ಮು ಅವರನ್ನು ಬೆಂಬಲಿಸಲಿದ್ದಾರೆ’ ಎಂದು ತಿಳಿಸಿದರು.

ಅಖಿಲೇಶ್ ಅವರ ಚಿಕ್ಕಪ್ಪ ಮತ್ತು ಸಮಾಜವಾದಿ ಪಕ್ಷದ ಶಾಸಕ ಶಿವಪಾಲ್ ಸಿಂಗ್ ಯಾದವ್ ಕೂಡ ತಮ್ಮ ಬೆಂಬಲಿಗ ಶಾಸಕ, ಸಂಸದರು ಮುರ್ಮು ಅವರಿಗೆ ಮತ ನೀಡುವುದಾಗಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.