ADVERTISEMENT

ಕಾಂಗ್ರೆಸ್‌ನ ಸಾಲಮನ್ನಾ ಎಂಬ ಲಾಲಿಪಪ್ ಬಗ್ಗೆ ಎಚ್ಚರದಿಂದಿರಿ: ರೈತರಿಗೆ ಮೋದಿ ಸಲಹೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2018, 11:16 IST
Last Updated 29 ಡಿಸೆಂಬರ್ 2018, 11:16 IST
   

ಘಾಜಿಪುರ್‌(ಉತ್ತರ ಪ್ರದೇಶ):ಕಾಂಗ್ರೆಸ್‌ ಪಕ್ಷವು ಸಾಲಮನ್ನಾ ಹೆಸರಿನಲ್ಲಿ ರೈತರನ್ನು ವಂಚಿಸುತ್ತಿದೆ ಎಂದು ದೂರಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೃಷಿಕ ಸಮುದಾಯವು ಇಂತಹ ಆಮಿಷಗಳಿಗೆ ಒಳಗಾಗಬಾರದು ಎಂದು ಕರೆ ನೀಡಿದರು.

ಇಲ್ಲಿ ನಡೆದ ಸಮಾವೇಶದಲ್ಲಿ ತಮ್ಮನ್ನು ತಾವು ಕಾವಲುಗಾರ ಎಂದು ಹೇಳಿಕೊಂಡ ಮೋದಿ, ‘ಕಾವಲುಗಾರನು ಕಳ್ಳರು ಓಡಿಹೋಗಲು ಬಿಡುವುದಿಲ್ಲ. ಬದಲಾಗಿ, ಅವರನ್ನು ಸರಿಯಾದಜಾಗಕ್ಕೆ ಸೇರಿಸುತ್ತಾನೆ’ ಎಂದರು.

ಬೇರೆ ಪಕ್ಷಗಳು ಸಾಲಮನ್ನಾ ಹೆಸರಿನ ‘ಲಾಲಿಪಪ್‌’ ತೋರಿಸಿ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದರೆ, ತಮ್ಮ ಸರ್ಕಾರವು ಬಡವರು ಮತ್ತು ರೈತರ ಬದುಕನ್ನು ಮೇಲ್ದರ್ಜೆಗೆ ಏರಿಸಲು ಪ್ರಯತ್ನಿಸುತ್ತಿದೆ ಎಂದು ಪ್ರತಿಪಾದಿಸಿದರು.

ADVERTISEMENT

ಇತ್ತೀಚೆಗೆ ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಕೈಗೊಳ‌್ಳಲಾದ ಸಾಲಮನ್ನಾ ನಿರ್ಧಾರವನ್ನು ಉಲ್ಲೇಖಿಸಿ ಮಾತನಾಡಿದ ಮೋದಿ,‘ರಾಜಕೀಯ ಲಾಭ ಪಡೆಯುವ ಸಲುವಾಗಿ ಎಂತಹ ಭರವಸೆಗಳನ್ನು ನೀಡಲಾಗುತ್ತಿದೆ? ಯಾವ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ? ಆದರೆ ಇವು ಶಾಶ್ವತ ಪರಿಹಾರಗಳಲ್ಲ’ ಎಂದರು.

‘2009ರ ಲೋಕಸಭೆ ಚುನಾವಣೆಗೆ ಮೊದಲೂ ಕಾಂಗ್ರೆಸ್‌ ಸಾಲಮನ್ನಾದಂತಹ ಲಾಲಿಪಪ್‌ ಭರವಸೆ ನೀಡಿತ್ತು’ ಎಂದ ಅವರು, ‘ನಿಮ್ಮ ಸಾಲಮನ್ನಾ ಆಯಿತೇ?. ನಿಮ್ಮ ಖಾತೆಗಳಿಗೆ ಹಣ ಬಂತೇ? ಇಂತಹ ಜನರನ್ನು, ಇಂತಹ ಆಮಿಷಗಳನ್ನು ನಂಬುವಿರಾ?’ ಎಂದು ಪ್ರಶ್ನಿಸಿದರು. ಜೊತೆಗೆಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರವು, ರೈತರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಸ್ವಾಮಿನಾಥನ್‌ ವರದಿಯನ್ನು ಜಾರಿಗೊಳಿಸಲಿಲ್ಲ ಎಂದು ಹರಿಹಾಯ್ದರು.

‘ಕಾಂಗ್ರೆಸ್‌ ಅದರ(ಸ್ವಾಮಿನಾಥನ್‌ ವರದಿ) ಮೇಲೆ ಕುಳಿತಿದೆ. 11 ವರ್ಷಗಳ ಹಿಂದೆಯೇ ಆ ವರದಿ ಅನುಷ್ಠಾನಕ್ಕೆ ಬಂದಿದ್ದರೆ ಇಂದು ಸಾಲಮನ್ನಾ ಮಾಡಬೇಕಾದ ಸ್ಥಿತಿಯೇ ಬರುತ್ತಿರಲಿಲ್ಲ. ಹಾಗಾಗಿ ಸಾಲಮನ್ನಾ ಆಮಿಷದ ಬಗ್ಗೆ ಎಚ್ಚರದಿಂದಿರಿ’ ಎಂದು ಗುಡುಗಿದರು.

ರೈತರು ಹಾಗೂ ಇತರ ವರ್ಗದ ಜನರ ಸಬಲೀಕರಣಕ್ಕಾಗಿ ಸರ್ಕಾರವು ಹಲವು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ ಎಂದರು. ‘ಹೌದು ಕಾವಲುಗಾರ ಪ್ರಮಾಣಿಕವಾಗಿ ಮತ್ತು ಬದ್ಧತೆಯಿಂದ ಹಗಲು ರಾತ್ರಿ ಶ್ರಮಿಸುತ್ತಿದ್ದಾನೆ. ನಂಬಿಕೆ ಇರಿಸಿ’ಎಂದು ಕೋರಿದ ಅವರು, ‘ಈ ಕಾವಲುಗಾರನಿಂದಾಗಿ ಕಳ್ಳರು ನಿದ್ರೆ ಕಳೆದುಕೊಂಡಿದ್ದಾರೆ’ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.