ADVERTISEMENT

ಕಾಂಗ್ರೆಸ್ ಚಿಂತನ ಶಿಬಿರ ಇಂದಿನಿಂದ; ಚುನಾವಣಾ ಸಿದ್ಧತೆ, ಮರು ಸಂಘಟನೆ ಚರ್ಚೆ

ಚುನಾವಣಾ ಸಿದ್ಧತೆ, ಪಕ್ಷದ ಮರು ಸಂಘಟನೆ ಚರ್ಚೆ

​ಪ್ರಜಾವಾಣಿ ವಾರ್ತೆ
Published 13 ಮೇ 2022, 6:25 IST
Last Updated 13 ಮೇ 2022, 6:25 IST
   

ಉದಯಪುರ: ಶುಕ್ರವಾರದಿಂದ ಆರಂಭವಾಗಲಿರುವ ಮೂರು ದಿನಗಳ ಚಿಂತನ ಶಿಬಿರದಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್‌ ಮುಖಂಡರು ಉದಯಪುರದತ್ತ ಹೆಜ್ಜೆ ಹಾಕುತ್ತಿದ್ದಾರೆ. ಲೋಕಸಭೆ, ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣಾ ಸೋಲುಗಳಿಂದ ಕಂಗೆಟ್ಟಿರುವ ಕಾಂಗ್ರೆಸ್, 2024ರ ಲೋಕಸಭಾ ಚುನಾವಣೆ ಸಜ್ಜಾಗುವ ಹಾಗೂ ಪಕ್ಷವನ್ನು ಮರುಸಂಘಟಿಸುವ ಕುರಿತು ಸಭೆಯಲ್ಲಿ ಚಿಂತನ ಮಂಥನ ನಡೆಯಲಿದೆ.

ಕಾಲಮಿತಿಯೊಳಗೆ ಪಕ್ಷದ ಮರು ಸಂಘಟನೆಗೆ ಇರುವ ಮಾರ್ಗಗಳು, ಬಿಜೆಪಿಯ ರಾಜಕೀಯ ಧ್ರುವೀಕರಣ ಹಾಗೂ ಬುಲ್ಡೋಜರ್ ಸಂಸ್ಕೃತಿಯನ್ನು ಎದುರಿಸುವ ಬಗ್ಗೆ ಚರ್ಚೆಗಳು ನಡೆಯಲಿವೆ. ‘ಚಿಂತನ ಶಿಬಿರವು ಕೇವಲ ಆಚರಣೆಗೆ ಸೀಮಿತವಾಗಬಾರದು.ಪಕ್ಷದ ಪುನರ್‌ ಸಂಘಟನೆಗೆ ವೇಗ ನೀಡಲು ಎಲ್ಲರ ಒಗ್ಗಟ್ಟು ಹಾಗೂ ಬದ್ಧತೆ ಅಗತ್ಯವಿದೆ’ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇತ್ತೀಚೆಗೆ ನಡೆದ ಸಿಡಬ್ಲ್ಯುಸಿ ಸಭೆಯಲ್ಲಿ ಹೇಳಿದ್ದರು.

ರಾಜಕೀಯ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ, ಕಾಂಗ್ರೆಸ್ ಸಂಘಟನೆ, ರೈತರು ಮತ್ತು ಕೃಷಿ ಕಾರ್ಮಿಕರು, ಯುವಜನತೆ – ವಿಚಾರಗಳ ಬಗ್ಗೆ ವಿಷಯ ಮಂಡನೆಯಾಗಲಿದೆ. ವಿವಿಧ ವಿಚಾರಗಳ ಬಗ್ಗೆ ಪ್ರತ್ಯೇಕ ಗುಂಪುಗಳಲ್ಲಿ ಚರ್ಚೆ ನಡೆಯಲಿದ್ದು, ಈ ವಲಯಗಳಲ್ಲಿ ಪಕ್ಷ ಅಳವಡಿಸಿಕೊಳ್ಳಬೇಕಿರುವ ಹಾದಿಯನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ವಿವರಿಸಲಾಗುತ್ತದೆ. ಈ ವಿಚಾರಗಳನ್ನು ಕ್ರೋಢೀಕರಿಸಿ, ಸಿಡಬ್ಲ್ಯುಸಿ ಅಂತಿಮ ನಿರ್ಣಯವನ್ನು ಸಿದ್ಧಪಡಿಸಲಿದೆ.

ADVERTISEMENT

ಆರ್ಥಿಕ ಕುಸಿತ, ಸಂಪತ್ತಿನ ಅಸಮಾನತೆ ಹೆಚ್ಚಳ, ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಚಾರಗಳ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ಪಕ್ಷದ ವಕ್ತಾರ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ.

ಒತ್ತಡ ಆರೋಪ: ಉದಯಪುರದಿಂದ ಹೊರ ನಡೆಯುವಂತೆ ಪೊಲೀಸರು ತಮ್ಮ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಕಿರೋಡಿ ಲಾಲ್‌ ಮೀನಾ ಗುರುವಾರ ಆರೋಪಿಸಿದ್ದಾರೆ. ಬುಡಕಟ್ಟು ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಬುಧವಾರ ರಾತ್ರಿ ಉದಯಪುರಕ್ಕೆ ಬಂದು ಹೋಟೆಲ್‌ನಲ್ಲಿ ತಂಗಿದ್ದೇನೆ ಎಂದು ಅವರು ಹೇಳಿದ್ದಾರೆ. ಆದರೆ ಪೊಲೀಸರು ಹೋಟೆಲ್‌ ಬಿಟ್ಟು ಹೊರಹೋಗಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿರುವ ಅವರು, ರಾಜಸ್ಥಾನ ವಿಧಾನಸಭೆಯ ಪ್ರತಿಪಕ್ಷ ನಾಯಕರಿಗೆ ದೂರು ನೀಡಿದ್ದೇನೆ ಎಂದಿದ್ದಾರೆ.

*

2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ–ಎನ್‌ಡಿಎಯೇತರ ಒಕ್ಕೂಟ ರಚನೆಯಲ್ಲಿ ಕಾಂಗ್ರೆಸ್ ಆಧಾರ ಸ್ಥಂಭವಾಗಿರಲಿದೆ.
–ಸಚಿನ್ ಪೈಲಟ್, ಕಾಂಗ್ರೆಸ್ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.