ನವದೆಹಲಿ: ನೂತನ ಮುಖ್ಯ ಚುನಾವಣಾ ಆಯುಕ್ತರ (ಸಿಇಸಿ) ಆಯ್ಕೆ ಕುರಿತಂತೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಕ್ಸಮರ ಜೋರಾಗಿದೆ.
ಸಿಇಸಿ ಆಯ್ಕೆ ಕುರಿತಂತೆ ಲೋಕಸಭೆ ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿ ಕೂಡಾ ತಿರುಗೇಟು ನೀಡಿದೆ.
‘ಇದು ಚುನಾಯಿತ ಸರ್ಕಾರದ ಸಾಂವಿಧಾನಿಕ ಆದೇಶವನ್ನು ದುರ್ಬಲಗೊಳಿಸುವ ದುರುದ್ದೇಶಪೂರಿತ ಪ್ರಯತ್ನವಾಗಿದೆ. ಮುಖ್ಯ ಚುನಾವಣಾ ಆಯುಕ್ತರ ಆಯ್ಕೆ ಕುರಿತಂತೆ ಯಾವುದೇ ನಿಯಮ ಅಥವಾ ಕಾನೂನನ್ನು ಉಲ್ಲಂಘಿಸದಿದ್ದರೂ ಕಾಂಗ್ರೆಸ್ ನಾಯಕರು ಅಳುವ ಶಿಶುಗಳಂತೆ ವರ್ತಿಸುತ್ತಿದ್ದಾರೆ’ ಎಂದು ಬಿಜೆಪಿ ಕುಟುಕಿದೆ.
‘ಕಾಂಗ್ರೆಸ್ ಪಕ್ಷವು ತನ್ನ ರಾಜಕೀಯ ಹಿತಾಸಕ್ತಿಗಳನ್ನು ಪೂರೈಸಲು ಮತ್ತು ಅನುಕೂಲಕ್ಕೆ ತಕ್ಕಂತೆ ಸಂವಿಧಾನವನ್ನು ದುರುಪಯೋಗಪಡಿಸಿಕೊಂಡಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅಪಹಾಸ್ಯ ಮಾಡುವ ಮತ್ತು ಅವಮಾನಿಸುವ ಅವಕಾಶವನ್ನು ಕಾಂಗ್ರೆಸ್ ಎಂದಿಗೂ ಬಿಟ್ಟಿಲ್ಲ. ಆದರೆ, ಅಂಬೇಡ್ಕರ್ ಸೇರಿದಂತೆ ಹೋರಾಟಗಾರರ ಆದರ್ಶಗಳನ್ನು ಎತ್ತಿಹಿಡಿಯುವಲ್ಲಿ ಕಾಂಗ್ರೆಸ್ ಯುವರಾಜ (ರಾಹುಲ್ ಗಾಂಧಿ) ದಿಟ್ಟತನ ಪ್ರದರ್ಶಿಸಬೇಕು’ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಒತ್ತಾಯಿಸಿದ್ದಾರೆ.
‘ರಾಹುಲ್ ಗಾಂಧಿ ಅವರು ಸಿಇಸಿ ನೇಮಕದ ಬಗ್ಗೆ ವಿವಾದ ಸೃಷ್ಟಿಸುವ ಮತ್ತು ಅಪಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ಚುನಾವಣಾ ಆಯೋಗವನ್ನು ಹೇಗೆ ನಡೆಸಿಕೊಳ್ಳಲಾಯಿತು ಎಂಬುದನ್ನು ಅವರು ಮರೆತಿದ್ದಾರೆಯೇ?, ದಶಕಗಳ ಕಾಲ ಅಧಿಕಾರದಲ್ಲಿದ್ದರೂ ಕಾಂಗ್ರೆಸ್ ಸರ್ಕಾರ ಆಯ್ಕೆ ವಿಧಾನವನ್ನು ಸುಧಾರಿಸಲು ಏಕೆ ಕ್ರಮಕೈಗೊಳ್ಳಲಿಲ್ಲ’ ಎಂದು ಪ್ರಧಾನ್ ಪ್ರಶ್ನಿಸಿದ್ದಾರೆ.
‘ವಾಸ್ತವವಾಗಿ ಸಂಸತ್ತಿನಲ್ಲಿ ಅಂಗೀಕರಿಸಿದ ಕಾನೂನಿನ ಮೂಲಕ ಸಿಇಸಿ ನೇಮಕಗೊಂಡಿರುವುದು ಇದೇ ಮೊದಲು. ನಮ್ಮ ಸರ್ಕಾರ ಸಿಇಸಿ ಮತ್ತು ಇಸಿ ನೇಮಕಾತಿಗಾಗಿ ಜಂಟಿ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಮುಖ್ಯ ಚುನಾವಣಾ ಆಯುಕ್ತರ ಆಯ್ಕೆ ಕುರಿತಂತೆ ಯಾವುದೇ ನಿಯಮ ಅಥವಾ ಕಾನೂನನ್ನು ಉಲ್ಲಂಘಿಸದಿದ್ದರೂ ಕಾಂಗ್ರೆಸ್ ನಾಯಕರು ಅಳುವ ಶಿಶುಗಳಂತೆ ವರ್ತಿಸುತ್ತಿರುವುದು ದೊಡ್ಡ ದೌರ್ಭಾಗ್ಯ’ ಎಂದು ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿಯು ಫೆ.17ರಂದು ಮಧ್ಯರಾತ್ರಿ, ಜ್ಞಾನೇಶ ಕುಮಾರ್ ಅವರನ್ನು ಮುಖ್ಯ ಚುನಾವಣಾ ಆಯಕ್ತ ರನ್ನಾಗಿ (ಸಿಇಸಿ) ನೇಮಕ ಮಾಡಿದೆ.
ಮೋದಿ ಅಲ್ಲದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನೊಳಗೊಂಡ ಸಮಿತಿಯು ಸೋಮವಾರ ಸಂಜೆ ಪ್ರಧಾನಿ ಅವರ ಅಧಿಕೃತ ನಿವಾಸದಲ್ಲಿ ಸಭೆ ನಡೆಸಿ ನೂತನ ಸಿಇಸಿ ಹೆಸರನ್ನು ಅಂತಿಮಗೊಳಿಸಿತ್ತು.
‘ಸಿಇಸಿ ಆಯ್ಕೆ ಪ್ರಕ್ರಿಯೆ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇನ್ನೆರಡು ದಿನಗಳಲ್ಲಿ ನಡೆಸಲಿದೆ. ಇಂತಹ ಸಂದರ್ಭದಲ್ಲಿ ‘ಮಧ್ಯರಾತ್ರಿ’ಯಲ್ಲಿ ನೂತನ ಸಿಇಸಿ ಆಯ್ಕೆ ಕುರಿತು ನಿರ್ಧಾರ ಕೈಗೊಂಡಿರುವುದು ಪ್ರಧಾನಿ ಹಾಗೂ ಗೃಹ ಸಚಿವರಿಗೆ ‘ಗೌರವ ತರುವಂತದ್ದಲ್ಲ’ ಹಾಗೂ ಇದು ‘ವಿವೇಚನಾರಹಿತ’ ನಡೆ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
‘ಪ್ರಜಾತಾಂತ್ರಿಕ ಪ್ರಕ್ರಿಯೆಗಳು ಹಾಗೂ ಚುನಾವಣಾ ಆಯೋಗದ ಕಾರ್ಯನಿರ್ವಹಣೆಯಲ್ಲಿ ಕಾರ್ಯಾಂಗದ ಹಸ್ತಕ್ಷೇಪದ ಬಗ್ಗೆ ಡಾ.ಬಿ.ಆರ್.ಅಂಬೇಡ್ಕರ್ ಎಚ್ಚರಿಸಿದ್ದರು. ಅಂಬೇಡ್ಕರ್ ಸೇರಿದಂತೆ ರಾಷ್ಟ್ರ ನಿರ್ಮಾಣ ಮಾಡಿದ ಮಹಾನ್ ನಾಯಕರ ಆದರ್ಶಗಳನ್ನು ಎತ್ತಿ ಹಿಡಿಯುವುದು ನನ್ನ ಕರ್ತವ್ಯವಾಗಿದೆ’ ಎಂದು ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.