ADVERTISEMENT

ಕಾಂಗ್ರೆಸ್ ʼಕೊಳೆಯುತ್ತಿರುವ ಕೊಚ್ಚೆಗುಂಡಿʼ: ಟಿಎಂಸಿ ಮುಖವಾಣಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಸೆಪ್ಟೆಂಬರ್ 2021, 15:43 IST
Last Updated 27 ಸೆಪ್ಟೆಂಬರ್ 2021, 15:43 IST
   

ಕೋಲ್ಕತ್ತ: ತೃಣಮೂಲ ಕಾಂಗ್ರೆಸ್‌ ಪಕ್ಷವು (ಟಿಎಂಸಿ)ಬಿಜೆಪಿ ವಿರೋಧಿ ಮೈತ್ರಿಕೂಟವನ್ನು ಮುನ್ನಡೆಸುವ ಇಂಗಿತವನ್ನು ವ್ಯಕ್ತಪಡಿಸಿದೆ. ಆ ಪಕ್ಷದ ಮುಖವಾಣಿ ʼಜಾಗೋ ಬಾಂಗ್ಲಾʼದ ಸಂಪಾದಕೀಯದಲ್ಲಿಕಾಂಗ್ರೆಸ್‌ ಪಕ್ಷವನ್ನು ʼಕೊಳೆಯುತ್ತಿರುವ ಕೊಚ್ಚೆಗುಂಡಿʼ ಎಂದು ಉಲ್ಲೇಖಿಸಲಾಗಿದೆ.

ರಾಷ್ಟ್ರ ರಾಜಕೀಯದಲ್ಲಿ ಕಾಂಗ್ರೆಸ್‌ ನಿರ್ವಹಿಸಬೇಕಿದ್ದ ಪಾತ್ರವನ್ನು ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷ (ಟಿಎಂಸಿ) ನಿರ್ವಹಿಸಲಿದೆ. ಅತ್ಯಂತ ಹಳೇ ಪಕ್ಷವಾಗಿರುವ ಕಾಂಗ್ರೆಸ್‌ ಸದ್ಯ ʼಅಪ್ರಸ್ತುತವಾಗಿದೆʼ ಮತ್ತುಬಂಗಾಳದಲ್ಲಿ ಟಿಎಂಸಿಯೇ ʼನಿಜವಾದ ಕಾಂಗ್ರೆಸ್ʼ ಎಂದು ಬರೆಯಲಾಗಿದೆ.

ʼಕಾಂಗ್ರೆಸ್‌ ಪರಂಪರೆಯ ಧ್ವಜವನ್ನುಟಿಎಂಸಿ ಹಿಡಿದಿದೆ. ಇದು (ಟಿಎಂಸಿ) ಸಾಗರ. ಕೊಳೆಯುತ್ತಿರುವ ಕೊಚ್ಚೆಗುಂಡಿ ಇದೀಗ ಅಪ್ರಸ್ತುತ. ಇನ್ನೂ ಕಾಂಗ್ರೆಸ್‌ನಲ್ಲಿ ಉಳಿದುಕೊಂಡಿರುವವರಿಗೆ ಟಿಎಂಸಿಯಲ್ಲಿ ಸ್ವಾಗತವಿದೆʼ ಎಂದು ಹೇಳಲಾಗಿದೆ.

ADVERTISEMENT

ಬಿಜೆಪಿ ವಿರುದ್ಧ ಹೋರಾಡುವತನ್ನ ಜವಾಬ್ದಾರಿ ನಿಭಾಯಿಸುವಲ್ಲಿ ಕಾಂಗ್ರೆಸ್‌ ವಿಫಲವಾಗಿದೆ ಎಂದು ಆರೋಪಿಸಿರುವ ʼಜಾಗೋ ಬಾಂಗ್ಲಾʼ,ಟಿಎಂಸಿಯು ಬಂಗಾಳದಲ್ಲಿ ʼನಿಜವಾದ ಕಾಂಗ್ರೆಸ್‌ʼ ಪಾತ್ರ ನಿರ್ವಹಿಸುತ್ತಿದೆ ಎಂದಾದರೆ, ಅದೇ ರೀತಿಯ ಕಾರ್ಯವನ್ನುರಾಷ್ಟ್ರಮಟ್ಟದಲ್ಲಿಯೂ ಮಾಡಬಲ್ಲದುʼ ಎಂದು ತಿಳಿಸಿದೆ.

ಕಾಂಗ್ರೆಸ್‌ಗೆ ಗೌರವ ನೀಡುವುದಾಗಿ ಟಿಎಂಸಿ ಹೇಳುತ್ತದೆಯಾದರೂ, ʼಕಳೆದ ಎರಡು ಲೋಕಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಹಲವು ಸ್ಥಾನಗಳನ್ನು ಕಳೆದುಕೊಂಡದ್ದು ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೇರಲು ನೆರವಾಯಿತುʼ ಎಂದು ಅದರ (ಟಿಎಂಸಿ) ಮುಖವಾಣಿ ಆರೋಪಿಸಿದೆ. ಮಾತ್ರವಲ್ಲದೆ ಆತ್ಮಾವಲೋಕನ ಮಾಡಿಕೊಳ್ಳುವಂತೆಯೂ ಕಾಂಗ್ರೆಸ್‌ಗೆ ಸಲಹೆ ನೀಡಿದೆ.

ಟಿಎಂಸಿಯು 2014 ಮತ್ತು 2019ರಸಾರ್ವತ್ರಿಕ ಚುನಾವಣೆ ಫಲಿತಾಂಶವನ್ನು ಪುನರಾವರ್ತಿಸದೆ, ಜನರು ಮತ್ತು ಬಿಜೆಪಿಯೇತರ ಪಕ್ಷಗಳೊಂದಿಗೆ ಸೇರಿ ʼಪ್ರಾಯೋಗಿಕ ಮಾದರಿʼಯನ್ನು ಅಳವಡಿಸಿಕೊಂಡು2024ರ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸುವ ಕರ್ತವ್ಯ ನಿಭಾಯಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.

ಹಾಗೆಯೇ, ʼಬಿಜೆಪಿಯ ಉನ್ನತ ಮಟ್ಟದ ನಾಯಕತ್ವವನ್ನು ಮಣಿಸುವ ಸಾಮರ್ಥ್ಯವನ್ನು ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ತೋರಿಸಿದ್ದು ಟಿಎಂಸಿ. ಕಾಂಗ್ರೆಸ್‌ ಅಲ್ಲ. ರಾಷ್ಟ್ರ ಮಟ್ಟದಲ್ಲಿ ಬಿಜೆಪಿಯನ್ನು ಮಣಿಸಬಹುದು ಎಂಬ ಭಾವನೆ ಮೂಡಿಸುವಲ್ಲಿಯೂ ಕಾಂಗ್ರೆಸ್‌ ವಿಫಲವಾಗಿದೆʼ ಎಂದೂ ಟೀಕಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.