ನವದೆಹಲಿ: ತುರ್ತು ಪರಿಸ್ಥಿತಿ ಘೋಷಣೆಯಾದ 50ನೆಯ ವರ್ಷದ ಸಂದರ್ಭದಲ್ಲಿ ಸಂಸತ್ತಿನ ವಿಶೇಷ ಅಧಿವೇಶನ ಕರೆಯುವ ಬಗ್ಗೆ ಪರಿಶೀಲನೆ ನಡೆದಿದೆ ಎಂದು ಹೇಳಿರುವ ಕಾಂಗ್ರೆಸ್, ಇದು ಹೆಚ್ಚು ತುರ್ತಿನ ವಿಷಯಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯುವ ಕಾರ್ಯಕ್ಕೆ ಇನ್ನೊಂದು ಉದಾಹರಣೆ ಎಂದು ಟೀಕಿಸಿದೆ.
ಪಾಕಿಸ್ತಾನವನ್ನು ಮತ್ತು ಭಯೋತ್ಪಾದಕರನ್ನು ಗುರಿಯಾಗಿಸಬೇಕಾದ ಸಂದರ್ಭದಲ್ಲಿ ಬಿಜೆಪಿಯು ಕಾಂಗ್ರೆಸ್ಸಿನ ಮೇಲೆ ದಾಳಿ ನಡೆಸುವುದಕ್ಕೆ ಆಸಕ್ತಿ ತೋರುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಹೇಳಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಅದರ ಪರಿಣಾಮಗಳ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಸರ್ವ ಪಕ್ಷಗಳ ಸಭೆ ನಡೆಯಬೇಕು ಎಂದು ಕಾಂಗ್ರೆಸ್ ಪಕ್ಷವು ಏಪ್ರಿಲ್ 22ರ ರಾತ್ರಿಯಿಂದಲೇ ಆಗ್ರಹಿಸುತ್ತಿದೆ. ಆ ಸಭೆಯು ಇನ್ನೂ ನಡೆದಿಲ್ಲ ಎಂದು ರಮೇಶ್ ಹೇಳಿದ್ದಾರೆ.
‘ಸಂಸತ್ತಿನ ವಿಶೇಷ ಅಧಿವೇಶನ ಕರೆದು ನಿರ್ಣಯವೊಂದನ್ನು ಕೈಗೊಳ್ಳುವ ಮೂಲಕ ದೇಶದ ಒಗ್ಗಟ್ಟಿನ ತೀರ್ಮಾನವನ್ನು ತೋರಿಸಬೇಕು ಎಂದು ಲೋಕಸಭೆಯ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕರು ಪ್ರಧಾನಿಯವರಿಗೆ ಮೇ 10ರಂದು ಮನವಿ ಮಾಡಿದ್ದರು. ಇದನ್ನು ಕೂಡ ಪ್ರಧಾನಿ ಒಪ್ಪಿಲ್ಲ’ ಎಂದು ರಮೇಶ್ ‘ಎಕ್ಸ್’ ಖಾತೆಯಲ್ಲಿ ಬರೆದಿದ್ದಾರೆ.
‘ತುರ್ತು ಪರಿಸ್ಥಿತಿ ಜಾರಿಗೆ ತಂದ 50ನೆಯ ವರ್ಷದ ಕಾರಣಕ್ಕೆ ಜೂನ್ 25, 26ಕ್ಕೆ ಸಂಸತ್ತಿನ ವಿಶೇಷ ಅಧಿವೇಶನ ಕರೆಯುವ ಬಗ್ಗೆ ಪರಿಶೀಲನೆ ನಡೆದಿರುವಂತಿದೆ’ ಎಂದು ರಮೇಶ್ ಹೇಳಿದ್ದಾರೆ. ‘ನಿಜವಾದ ಹಾಗೂ ಹೆಚ್ಚು ತುರ್ತಿನ ವಿಷಯಗಳಿಂದ ಗಮನವನ್ನು ಬೇರೆಡೆ ಸೆಳೆಯಲು ಪ್ರಧಾನಿ ನಡೆಸುವ ಕಾರ್ಯಕ್ಕೆ ಇದೊಂದು ಉತ್ತಮ ಉದಾಹರಣೆ’ ಎಂದು ಅವರು ಹೇಳಿದ್ದಾರೆ.
ಪಿಟಿಐ ಜೊತೆ ಮಾತನಾಡಿದ ರಮೇಶ್, ‘ಪ್ರಸಕ್ತ ಸಮಸ್ಯೆಗಳು, ಸವಾಲುಗಳ ಬಗ್ಗೆ ಮಾತನಾಡುವ ಬದಲು ಅವರು ಐವತ್ತು ವರ್ಷಗಳ ಹಿಂದೆ ನಡೆದಿದ್ದನ್ನು ಚರ್ಚಿಸಲು ಬಯಸಿದ್ದಾರೆ’ ಎಂದು ಟೀಕಿಸಿದರು.
ಪ್ರಧಾನಿಯವರು ದೇಶವನ್ನು 11 ವರ್ಷಗಳಿಂದ ಅಘೋಷಿತ ತುರ್ತು ಸ್ಥಿತಿಯಲ್ಲಿ ಇರಿಸಿದ್ದಾರೆ. ಪಹಲ್ಗಾಮ್‌ನಲ್ಲಿ ದಾಳಿ ನಡೆಸಿದ ಉಗ್ರರು ಇನ್ನೂ ಸಿಗದಿರುವುದು ಏಕೆ ಎಂಬ ಪ್ರಶ್ನೆಗೆ ಉತ್ತರಿಸಿಲ್ಲ. ಕದನ ವಿರಾಮದ ಮಧ್ಯಸ್ಥಿಕೆ ನಡೆಸಲು ಟ್ರಂಪ್ ಅವರಿಗೆ ಅವಕಾಶ ಕೊಟ್ಟಿದ್ದೇಕೆ ಎಂಬುದನ್ನು ತಿಳಿಸಿಲ್ಲ.– ಜೈರಾಮ್ ರಮೇಶ್ ಎಐಸಿಸಿ ಪ್ರಧಾನ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.