ಪ್ರಾತಿನಿಧಿಕ ಚಿತ್ರ
ಐಸ್ಟಾಕ್ ಚಿತ್ರ
ನವದೆಹಲಿ: ಬಿಹಾರದ ಜನರನ್ನು ಬೀಡಿಗಳಿಗೆ ಹೋಲಿಕೆ ಮಾಡಿರುವ ಕಾಂಗ್ರೆಸ್, ಬಿಹಾರಿಗಳಿಗೆ ಅವಮಾನ ಮಾಡಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಇದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಬಿಜೆಪಿ ಹೇಳಿದೆ.
'ಬೀಡಿಗಳು ಮತ್ತು ಬಿಹಾರವು ‘ಬಿ‘ಯಿಂದ ಪ್ರಾರಂಭವಾಗುತ್ತದೆ. ಇದನ್ನು ಪಾಪವೆಂದು ಪರಿಗಣಿಸಲಾಗದು' ಎಂದು ಕೇರಳ ಕಾಂಗ್ರೆಸ್ ಘಟಕ ವಿವಾದಾತ್ಮಕ ಪೋಸ್ಟ್ ಹಂಚಿಕೊಂಡಿತ್ತು. ಇದಕ್ಕೆ ಎಲ್ಲಡೆ ಆಕ್ಷೇಪ ವ್ಯಕ್ತವಾದ ಹಿನ್ನೆಲೆ ಪೋಸ್ಟ್ ಅನ್ನು ಅಳಿಸಿ ಹಾಕಿತ್ತು.
ಕಾಂಗ್ರೆಸ್ ಹಾಕಿದ್ದ ಪೋಸ್ಟ್ ಅನ್ನು 'ನಾಚಿಕೆಗೇಡು' ಎಂದು ಖಂಡಿಸಿರುವ ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಹಾರಿಗಳಿಗೆ ಮಾಡಿದ ಈ ಅವಮಾನಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿಯವರ ತಾಯಿಯನ್ನು ಅವಮಾನಿಸಿತ್ತು. ಆದರೆ ಇಲ್ಲಿಯವರೆಗೆ ಕ್ಷಮೆಯಾಚಿಸಿಲ್ಲ. ಇದೀಗ ಮತ್ತೆ ಕಾಂಗ್ರೆಸ್ ಬಿಹಾರಿಗಳ ಘನತೆಗೆ ಧಕ್ಕೆ ತರುವ ರೀತಿ ಪೋಸ್ಟ್ ಹಾಕಿ, ಅವಮಾನಿಸಿದ್ದಾರೆ ಎಂದು ಪ್ರಸಾದ್ ತಿಳಿಸಿದ್ದಾರೆ.
ರಾಹುಲ್ ಗಾಂಧಿ, ನೀವು ಏನು ಮಾಡುತ್ತಿದ್ದೀರಿ?, ಕೇರಳದ ನಾಯಕರ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ ಏಕೆ? ಎಂದು ಪ್ರಶ್ನಿಸಿರುವ ಪ್ರಸಾದ್, ತೇಜಸ್ವಿ ಯಾದವ್ ವಿರುದ್ಧವೂ ಕಿಡಿಕಾರಿದ್ದಾರೆ.
ಬಿಹಾರದ ಜನರನ್ನು ಅವಮಾನಿಸುವ ಮೂಲಕ ವಿರೋಧ ಪಕ್ಷವು ತನ್ನ ನಕಾರಾತ್ಮಕ ಮತ್ತು ಕ್ಷುಲ್ಲಕ ಮನಸ್ಥಿತಿಯನ್ನು ಮತ್ತೊಮ್ಮೆ ಪ್ರದರ್ಶಿಸಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
ವಿವಾದಾತ್ಮಕ ಪೋಸ್ಟ್‌ನಿಂದ ನೋವಾಗಿದ್ದರೆ ಕ್ಷಮೆಯಾಚಿಸುತ್ತೇವೆ ಎಂದು ಪೋಸ್ಟ್ ಅನ್ನು ಅಳಿಸಿ ಹಾಕಿದ ಬಳಿಕ ಕೇರಳ ಕಾಂಗ್ರೆಸ್ ಘಟಕವು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.