ADVERTISEMENT

ಕಾಂಗ್ರೆಸ್‌ಗೆ ಕಾರ್ಯಾಧ್ಯಕ್ಷರ ನೇಮಕ ಚಿಂತನೆ: ಖರ್ಗೆ, ಮೋತಿಲಾಲ್ ಹೆಸರು ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2019, 19:49 IST
Last Updated 11 ಜೂನ್ 2019, 19:49 IST
   

ನವದೆಹಲಿ:ಕಾಂಗ್ರೆಸ್‌ ಪಕ್ಷದ ಕಾರ್ಯಾಧ್ಯಕ್ಷರಾಗಿ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ನೇಮಿಸಲಾಗುವುದು ಎಂಬ ಸುದ್ದಿ ದಟ್ಟವಾಗಿ ಹರಿದಾಡುತ್ತಿದೆ.

ಲೋಕಸಭೆ ಚುನಾವಣೆಯ ಹೀನಾಯ ಸೋಲಿನ ಹೊಣೆ ಹೊತ್ತು ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಯಲು ರಾಹುಲ್‌ ಗಾಂಧಿ ನಿರ್ಧರಿಸಿದ್ದಾರೆ. ಹಾಗಾಗಿ ಪಕ್ಷದಲ್ಲಿ ನಾಯಕತ್ವದ ಬಗ್ಗೆ ಗೊಂದಲ ಉಂಟಾಗಿದೆ. ಕಾಂಗ್ರೆಸ್‌ನ ಪ್ರಮುಖರ ಸಮಿತಿಯು ಈ ಬಗ್ಗೆ ಬುಧವಾರ ಚರ್ಚೆ ನಡೆಸಲಿದೆ. ಖರ್ಗೆ ಅವರು ಪ್ರಮುಖರ ಸಮಿತಿಯ ಸದಸ್ಯ ಅಲ್ಲ. ಹಾಗಿದ್ದರೂ ಈ ಸಭೆಗೆ ಹಾಜರಾಗುವಂತೆ ಅವರಿಗೆ ಸೂಚಿಸಲಾಗಿದೆ. ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಿಸಬಹುದು ಎಂಬ ಸುದ್ದಿಗೆ ಇದು ಪುಷ್ಟಿ ನೀಡಿದೆ.

17ನೇ ಲೋಕಸಭೆಯ ಮೊದಲ ಅಧಿವೇಶನಕ್ಕೆ ಕೆಲವೇ ದಿನಗಳಿರುವಾಗ ಪ್ರಮುಖರ ಸಮಿತಿಯ ಸಭೆ ನಡೆಯುತ್ತಿದೆ. ಸಂಸದೀಯ ಪಕ್ಷದ ಪ್ರಮುಖ ಸ್ಥಾನಗಳಿಗೆ ನೇಮಕ ಮಾಡಬೇಕಿದೆ. ಸಂಸತ್ತಿನಲ್ಲಿ ಕಾಂಗ್ರೆಸ್‌ ಪಕ್ಷದ ಮುಖ್ಯಸ್ಥೆಯಾಗಿ ಸೋನಿಯಾ ಗಾಂಧಿ ಅವರನ್ನು ಜೂನ್‌ 1ರಂದು ಆಯ್ಕೆ ಮಾಡಲಾಗಿದೆ. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕರನ್ನು ಇನ್ನಷ್ಟೇ ಆಯ್ಕೆ ಮಾಡಬೇಕಾಗಿದೆ.

ADVERTISEMENT

16ನೇ ಲೋಕಸಭೆಯಲ್ಲಿ ಖರ್ಗೆ ಅವರು ಕಾಂಗ್ರೆಸ್‌ ಪಕ್ಷದ ನಾಯಕರಾಗಿದ್ದರು. ಜ್ಯೋತಿರಾದಿತ್ಯ ಸಿಂಧಿಯಾ ಅವರು ಮುಖ್ಯ ಸಚೇತಕರಾಗಿದ್ದರು. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಈ ಇಬ್ಬರೂ ಸೋತಿದ್ದಾರೆ. ಹಾಗಾಗಿ, ಪಕ್ಷದ ಸಂಸದೀಯ ಘಟಕದ ಈ ಹುದ್ದೆಗಳಿಗೆ ಹೊಸಬರನ್ನು ಹುಡುಕಬೇಕಿದೆ.

ತಮ್ಮ ಲೋಕಸಭಾ ಕ್ಷೇತ್ರ ವಯನಾಡ್‌ಗೆ ರಾಹುಲ್‌ ಇತ್ತೀಚೆಗೆ ಭೇಟಿ ಕೊಟ್ಟಿದ್ದರು. ಬಳಿಕ ಅವರು ಪಕ್ಷದ ಕೆಲವು ನಾಯಕರನ್ನು ಭೇಟಿ ಆಗಿದ್ದಾರೆ. ಹಾಗಿದ್ದರೂ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರಿಯುವುದಿಲ್ಲ ಎಂದು ಸ್ಪಷ್ಟವಾಗಿಯೇ ತಿಳಿಸಿದ್ದಾರೆ.

ಪಕ್ಷದ ಮುಖ್ಯಸ್ಥ ಹುದ್ದೆ ತೊರೆಯುವ ರಾಹುಲ್ ನಿರ್ಧಾರವನ್ನು ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ತಿರಸ್ಕರಿಸಿದೆ. ಆದರೆ, ಸಾಮೂಹಿಕ ನಾಯಕತ್ವದ ಮಾದರಿ ಅನುಸರಿಸಲು ನಿರ್ಧರಿಸಿದೆ. ಪಕ್ಷದ ಪುನಶ್ಚೇತನಕ್ಕೆ ಹಲವು ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಸಂಸದೀಯ ಮಂಡಳಿಯನ್ನು ನವೀಕರಿಸುವುದು, ಪಕ್ಷಕ್ಕೆ ಕಾರ್ಯಾಧ್ಯಕ್ಷರನ್ನು ನೇಮಿಸುವುದು ಅಂತಹ ಕ್ರಮಗಳು ಎನ್ನಲಾಗಿದೆ.

ಖರ್ಗೆ ಅವರಲ್ಲದೆ, ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ಹಿರಿಯ ಮುಖಂಡ ಮೋತಿಲಾಲ್‌ ವೋರಾ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್‌ ಚವಾಣ್‌ ಅವರ ಹೆಸರೂ ಕಾರ್ಯಾಧ್ಯಕ್ಷ ಹುದ್ದೆಗೆ ಕೇಳಿಬರುತ್ತಿದೆ.

ಮಧ್ಯಂತರ ಅವಧಿಗೆ ಅಧ್ಯಕ್ಷರೊಬ್ಬರನ್ನು ನೇಮಿಸುವ ಪ್ರಸ್ತಾವವೂ ಇದೆ ಎಂದು ಹೇಳಲಾಗಿದೆ. ಹಿರಿಯ ಮುಖಂಡರ ಮಾರ್ಗದರ್ಶನದಲ್ಲಿ ಈ ಅಧ್ಯಕ್ಷರು ಕಾರ್ಯನಿರ್ವಹಿಸಬೇಕು ಎಂಬುದು ಪಕ್ಷದ ಚಿಂತನೆಯಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.