ADVERTISEMENT

ಮೋದಿ ಇಸ್ರೇಲ್‌ ಭೇಟಿ ನಾಚಿಕೆಗೇಡು: ಕಾಂಗ್ರೆಸ್‌ ಟೀಕೆ

ಪಿಟಿಐ
Published 28 ಫೆಬ್ರುವರಿ 2026, 14:18 IST
Last Updated 28 ಫೆಬ್ರುವರಿ 2026, 14:18 IST
ಸಲ್ಮಾನ್ ಖುರ್ಷಿದ್
ಸಲ್ಮಾನ್ ಖುರ್ಷಿದ್   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಇಸ್ರೇಲ್‌ ಭೇಟಿ ‘ನಾಚಿಕೆಗೇಡು’ ಮತ್ತು ‘ಸಮಯೋಚಿತವಲ್ಲದ್ದು’ ಎಂದು ಶನಿವಾರ ಕಾಂಗ್ರೆಸ್ ಟೀಕಿಸಿದೆ.

‘ಇಸ್ರೇಲ್‌ ನಡೆಸುತ್ತಿರುವ ಸೇನಾ ಕಾರ್ಯಾಚರಣೆಗೆ ಮೋದಿ ಅವರ ಭೇಟಿ ರಾಜಕೀಯ ಅನುಮೋದನೆ ಕೊಟ್ಟಂತಾಗಿದೆ. ಅಲ್ಲದೆ, ಅಂತರರಾಷ್ಟ್ರೀಯ ವ್ಯವಸ್ಥೆಯ ಕುರಿತು ಭಾರತ ಹೊಂದಿರುವ ಐತಿಹಾಸಿಕ ಬದ್ಧತೆಗೆ ವಿರುದ್ಧವಾದ ನಡೆಯೂ ಇದಾಗಿದೆ’ ಎಂದು ಕಾಂಗ್ರೆಸ್‌ನ ವಿದೇಶಾಂಗ ವ್ಯವಹಾರಗಳ ವಿಭಾಗದ ಮುಖ್ಯಸ್ಥ ಸಲ್ಮಾನ್‌ ಖುರ್ಷೀದ್ ಹೇಳಿಕೆ ನೀಡಿದ್ದಾರೆ.

‘ಒಂದು ಪ್ರದೇಶದ ಭೌಗೋಳಿಕ ಅಖಂಡತೆ, ರಾಜಕೀಯ ಸ್ವಾತಂತ್ರ್ಯದ ವಿರುದ್ಧ ಸೇನಾ ಬಳಕೆ ಕೂಡದು ಎಂಬ ವಿಶ್ವಸಂಸ್ಥೆಯ ನಿಲುವಿಗೆ ಬದ್ಧವಾಗಿರುವ ನಮ್ಮ ನೀತಿಗೂ ಈ ನಡೆ ವ್ಯತಿರಿಕ್ತವಾದುದು’ ಎಂದಿದ್ದಾರೆ.

ADVERTISEMENT

‘ಪಶ್ಚಿಮ ಏಷ್ಯಾದಲ್ಲಿ ಶತೃತ್ವ ತೀವ್ರಗೊಂಡಿರುವುದು ಮತ್ತು ವ್ಯಾಪಕ ಸಂಘರ್ಷ ಸ್ಥಿತಿ ಇರುವಾಗಲೇ ಪ್ರಧಾನಿ ಮೋದಿ ಫೆಬ್ರುವರಿ 26ರಿಂದ ಎರಡು ದಿನ ಇಸ್ರೇಲ್‌ ಪ್ರವಾಸ ಕೈಗೊಂಡಿದ್ದು ಅತ್ಯಂತ ಕಳವಳಕಾರಿ’ ಎಂದು ಅವರು ಹೇಳಿದ್ದಾರೆ.

ಇರಾನ್‌ ಮೇಲೆ ಇಸ್ರೇಲ್‌ ವಾಯುದಾಳಿ ನಡೆಸಿದ ನಂತರ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಇರಾನ್‌ನಲ್ಲಿ ಬೃಹತ್‌ ಸಮರ ಕಾರ್ಯಾಚರಣೆ ನಡೆಸುವುದಾಗಿ ಶನಿವಾರ ಹೇಳಿದ್ದಾರೆ. 

‘ಇಂತಹ ಸಂದರ್ಭದಲ್ಲಿ ಮೋದಿ ಅವರ ಭೇಟಿ ಪಕ್ಷಪಾತದ, ಆಕ್ರಮಣಕ್ಕೆ ಮೌನ ಸಮರ್ಥನೆ ನೀಡುವ ರಣನೀತಿಯಂತೆ ಭಾಸವಾಗುತ್ತದೆ. ಭಾರತದ ಸಂಬಂಧ ಇಸ್ರೇಲ್‌ ಜೊತೆಗೆ ಮಾತ್ರವಲ್ಲ, ಇರಾನ್‌, ಪ್ಯಾಲೆಸ್ಟೀನ್‌ ಸೇರಿ ಇತರರ ಜೊತೆಗೂ ಇದೆ ಎನ್ನುವುದನ್ನು ಬಿಜೆಪಿ ಆಡಳಿತ ಅರ್ಥ ಮಾಡಿಕೊಳ್ಳಬೇಕು’ ಎಂದು ಸಲ್ಮಾನ್‌ ಖುರ್ಷಿದ್ ಹೇಳಿದ್ದಾರೆ.

ನೈತಿಕ ಹೇಡಿತನ: ಜೈರಾಮ್‌ ರಮೇಶ್

ಮೋದಿ ಅವರ ಇಸ್ರೇಲ್ ಭೇಟಿಯನ್ನು ಖಂಡಿಸಿರುವ ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌, ‘ಅವರು (ಮೋದಿ) ತಮ್ಮ ಇಸ್ರೇಲ್‌ ಭೇಟಿಯನ್ನು ಸಂಭ್ರಮಿಸಿದ ಎರಡು ದಿನಗಳ ನಂತರ ಅವರ ಉತ್ತಮ ಸ್ನೇಹಿತರು (ಇಸ್ರೇಲ್ ಮತ್ತು ಅಮೆರಿಕ) ಜಂಟಿಯಾಗಿ ಇರಾನ್‌ ವಿರುದ್ಧ ಸಮರ ಸಾರಿದ್ದಾರೆ’ ಎಂದು ಆರೋಪಿಸಿದರು.

‘ಪ್ರಧಾನಿ ಇಸ್ರೇಲ್‌ ಭೇಟಿ ನಾಚಿಕೆಗೇಡು’ ಎಂದು ‘ಎಕ್ಸ್’ನಲ್ಲಿ ಹೇಳಿರುವ ಅವರು ‘ಕಳೆದ ಕೆಲ ತಿಂಗಳುಗಳಿಂದಲೂ ಅವರ ಸೈನ್ಯ ಜಮಾವಣೆ ಆಗುತ್ತಿದ್ದುದನ್ನು ನೋಡಿದರೆ ಸಂಘರ್ಷದ ಮುನ್ಸೂಚನೆ ಇದ್ದೇ ಇತ್ತು. ಆದರೂ ಮೋದಿ ಇಸ್ರೇಲ್‌ಗೆ ಭೇಟಿ ನೀಡಿದರು. ಅಲ್ಲಿ ತಮ್ಮ ನೈತಿಕ ಹೇಡಿತನ ಪ್ರದರ್ಶಿಸಿದರು. ಇಸ್ರೇಲ್‌ ಜೊತೆ ಭಾರತ ನಿಲ್ಲಲಿದೆ ಎಂದು ಘೋಷಿಸಿ ಪ್ರಶಸ್ತಿಯನ್ನೂ ಗಿಟ್ಟಿಸಿದರು’ ಎಂದು ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.