ನವದೆಹಲಿ: ಕಾಂಗ್ರೆಸ್ ಮತ್ತು ಲೋಕಸಭೆ ವಿಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಮಾನಹಾನಿಕರ ಹೇಳಿಕೆ ಹಂಚಿಕೊಂಡಿರುವ ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಅಮಿತ್ ಮಾಳವಿಯಾ ಮತ್ತು ಪತ್ರಕರ್ತ ಅರ್ನಬ್ ಗೋಸ್ವಾಮಿ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಬುಧವಾರ ಆಗ್ರಹಿಸಿದೆ.
‘ಎಕ್ಸ್’ನಲ್ಲಿ ಮಾನಹಾನಿಕರ ಹೇಳಿಕೆ ಪೋಸ್ಟ್ ಮಾಡಿರುವ ಈ ಇಬ್ಬರ ವಿರುದ್ಧ ಕರ್ನಾಟಕ ಮತ್ತು ದೆಹಲಿ ಸೇರಿ ದೇಶದ ವಿವಿಧ ಭಾಗಗಳಲ್ಲಿ ಕ್ರಿಮಿನಲ್ ದೂರುಗಳನ್ನು ದಾಖಲಿಸಲಾಗಿದೆ. ಈಗ ಇವುಗಳನ್ನು ಎಫ್‌ಐಆರ್‌ಗಳಾಗಿ ಪರಿವರ್ತಿಸಲಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಹೇಳಿದ್ದಾರೆ.
‘ಈ ಜೋಡಿ ಈಗ, ರಕ್ಷಣೆ ಪಡೆಯಲು ನ್ಯಾಯಾಲಯಗಳಿಗೆ ಎಡತಾಕುತ್ತದೆ. ಈ ಇಬ್ಬರ ದುರುದ್ದೇಶಪೂರಿತ ಕೃತ್ಯಗಳಿಂದ ದೇಶಕ್ಕೆ ಉಂಟಾದ ದೊಡ್ಡ ಹಾನಿಯನ್ನು ನ್ಯಾಯಾಲಯಗಳು ಗಮನಿಸುವುದಾಗಿ ನಾವು ನಂಬಿದ್ದೇವೆ’ ಎಂದು ರಮೇಶ್ ಹೇಳಿದ್ದಾರೆ.
ಕಾಂಗ್ರೆಸ್ ಮತ್ತು ಅದರ ನಾಯಕತ್ವದ ವಿರುದ್ಧ ದುರುದ್ದೇಶದಿಂದ ಸುಳ್ಳುಗಳನ್ನು ಹರಡಿದ ಇಬ್ಬರು ವ್ಯಕ್ತಿಗಳ ವಿರುದ್ಧ ಕಾಂಗ್ರೆಸ್ ಪಕ್ಷವು ಸಿವಿಲ್ ಮತ್ತು ಕ್ರಿಮಿನಲ್ ಕಾನೂನುಗಳ ಅಡಿಯಲ್ಲಿ ದೂರು ದಾಖಲಿಸಿದೆ ಎಂದು ಅವರು ಹೇಳಿದ್ದಾರೆ. ಭಾರತೀಯ ಯುವ ಕಾಂಗ್ರೆಸ್ (ಐವೈಸಿ) ಕೂಡ ಮಾಳವಿಯಾ ಮತ್ತು ಗೋಸ್ವಾಮಿ ವಿರುದ್ಧ ದೂರು ದಾಖಲಿಸಿದೆ.
ರಾಹುಲ್ ಗಾಂಧಿ ಅವರ ಹೆಸರಿಗೆ ಮಸಿ ಬಳಿಯಲು ಮತ್ತು ಕಾಂಗ್ರೆಸ್‌ಗೆ ಟರ್ಕಿಯ ನಂಟು ಬೆಸೆಯಲು ಪಿತೂರಿ ನಡೆಸಿದ್ದಕ್ಕಾಗಿ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಮತ್ತು ರಿಪಬ್ಲಿಕ್ ಟಿವಿಯ ಗೋಸ್ವಾಮಿ ವಿರುದ್ಧ ಜಾಮೀನು ರಹಿತ ಅಪರಾಧಗಳಡಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಐವೈಸಿ ಕಾನೂನು ವಿಭಾಗ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.