ತ್ರಿಶೂರ್ (ಕೇರಳ): 2023ರ ಲೈಫ್ ಮಿಷನ್ ಯೋಜನೆಯ ಭ್ರಷ್ಟಾಚಾರ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಮುಂದೆ ಹಾಜರಾಗದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರ ವಿವೇಕ್ ಕಿರಣ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ನಾಯಕ ಅನಿಲ್ ಅಕ್ಕರ ಅವರು ಇ.ಡಿ ಮತ್ತು ಕೇಂದ್ರ ಹಣಕಾಸು ಸಚಿವಾಲಯಕ್ಕೆ ಸೋಮವಾರ ಪತ್ರ ಬರೆದಿದ್ದಾರೆ.
2018ರ ಕೇರಳ ಪ್ರವಾಹದ ವೇಳೆ ಸಂತ್ರಸ್ತರಾದ ಕುಟುಂಬಗಳಿಗೆ ತ್ರಿಶೂರ್‌ನ ವಡಕ್ಕಂಚೇರಿಯಲ್ಲಿ ಅಪಾರ್ಟ್‌ಮೆಂಟ್ ನಿರ್ಮಿಸಲು ಯುಎಇಯ ರೆಡ್ ಕ್ರೆಸೆಂಟ್ ಸಂಸ್ಥೆಯು ಹಣಕಾಸು ನೆರವು ನೀಡಿತ್ತು. ಲೈಫ್ ಮಿಷನ್ ಎಂಬ ಹೆಸರಿನ ಈ ಯೋಜನೆಯನ್ನು ಕೈಗೆತ್ತಿಕೊಂಡ ಯುನಿಟಾಕ್ ಬಿಲ್ಡರ್ಸ್ ರಾಜ್ಯ ಸರ್ಕಾರದ ಪ್ರತಿನಿಧಿಗಳು ಸೇರಿದಂತೆ ಮಧ್ಯವರ್ತಿಗಳಿಗೆ ₹4.5 ಕೋಟಿಗಳ ಕಮಿಷನ್ ನೀಡಿತ್ತು ಎಂದು ಆರೋಪಿಸಲಾಗಿದೆ.
ಅನಿಲ್ ಅಕ್ಕರ ಅವರ ದೂರಿನ ಆಧಾರದಲ್ಲಿ ಸಿಬಿಐ ಕೂಡಾ ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆ ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲಿಸಿದೆ.
2023ರ ಫೆಬ್ರವರಿಯಲ್ಲಿ ವಿವೇಕ್ ಕಿರಣ್‌ಗೆ ಇ.ಡಿ ಸಮನ್ಸ್ ನೀಡಿತ್ತಾದರೂ ಅವರು ಹಾಜರಾಗಿರಲಿಲ್ಲ. ಬಿಜೆಪಿ ಮತ್ತು ಸಿಪಿಎಂ ನಡುವಿನ ಸಂಬಂಧದ ಕಾರಣದಿಂದಾಗಿ ವಿಚಾರಣೆಗೆ ಗೈರಾಗಿದ್ದರೂ ಅವರ ವಿರುದ್ಧ ಇ.ಡಿ ಯಾವುದೆ ಕ್ರಮ ಕೈಗೊಂಡಿಲ್ಲ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.