ADVERTISEMENT

ಸರಳ ತೆರಿಗೆ ಪದ್ಧತಿ ಜಾರಿಗೊಳಿಸಲು ಕಾಂಗ್ರೆಸ್‌ ಆಗ್ರಹ

ಪಿಟಿಐ
Published 16 ಆಗಸ್ಟ್ 2025, 14:42 IST
Last Updated 16 ಆಗಸ್ಟ್ 2025, 14:42 IST
<div class="paragraphs"><p>Want GST 2.0 to be Good and Simple Tax not Growth Suppressing Tax: Cong</p></div>

Want GST 2.0 to be Good and Simple Tax not Growth Suppressing Tax: Cong

   

ನವದೆಹಲಿ: ‘ನಮಗೆ ಸರಳ ಮತ್ತು ಉತ್ತಮ ತೆರಿಗೆ ಪದ್ಧತಿ ಬೇಕು. ಅಭಿವೃದ್ಧಿಯನ್ನು ಹತ್ತಿಕ್ಕುವ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಅಲ್ಲ’ ಎಂದು ಕಾಂಗ್ರೆಸ್‌ ಶನಿವಾರ ಹೇಳಿದೆ.

ಜಿಎಸ್‌ಟಿ 2.0 ಕುರಿತಂತೆ ಶೀಘ್ರದಲ್ಲೇ ಸಮಗ್ರ ಮಾಹಿತಿಯನ್ನು ಒಳಗೊಂಡ ಅಧಿಕೃತ ಪತ್ರವನ್ನು ಬಿಡುಗಡೆಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.

ADVERTISEMENT

ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮುಂಬರುವ ದೀಪಾವಳಿ ಹಬ್ಬದ ವೇಳೆಗೆ ಜಿಎಸ್‌ಟಿಯ ದರಗಳನ್ನು ಕಡಿಮೆ ಮಾಡಲಾಗುವುದು ಎಂದು ಘೋಷಿಸಿದ ಮರುದಿನ ಕಾಂಗ್ರೆಸ್‌ ತನ್ನ ಬೇಡಿಕೆಯನ್ನು ಮಂಡಿಸಿದೆ.

‘ಎಂಟು ವರ್ಷದಿಂದಲೂ ಜಿಎಸ್‌ಟಿ ನೀತಿಯಲ್ಲಿ ಸುಧಾರಣೆ ಆಗಿಲ್ಲದಿರುವುದರಿಂದ, ಕೇಂದ್ರ ಸರ್ಕಾರವು ನಿತ್ಯಬಳಕೆಯ ವಸ್ತುಗಳ ಮೇಲಿನ ತೆರಿಗೆಯನ್ನು ಕಡಿತಗೊಳಿಸಲು ಇದೀಗ ಯೋಚಿಸಿದೆ’ ಎಂದಿದೆ.

‘ಜಿಎಸ್‌ಟಿಯ ಆಮೂಲಾಗ್ರ ಸುಧಾರಣೆಗೆ ಒಂದೂವರೆ ವರ್ಷದಿಂದಲೂ ಪಕ್ಷ ಒತ್ತಾಯಿಸುತ್ತಿದೆ’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಂ ರಮೇಶ್‌ ಹೇಳಿದ್ದಾರೆ.

‘2024ರ ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಜಿಎಸ್‌ಟಿ ನೀತಿಯಲ್ಲಿ ಸುಧಾರಣೆ ತರುವುದಾಗಿ ಕಾಂಗ್ರೆಸ್‌ ಘೋಷಿಸಿತ್ತು’ ಎಂದಿದ್ದಾರೆ.

‘ಜಿಎಸ್‌ಟಿ ನೀತಿಯಲ್ಲಿ ಬದಲಾವಣೆಗಳಾಗದಿದ್ದರೆ, ಅಂತರರಾಜ್ಯ ಪೂರೈಕೆಯನ್ನು ಹೆಚ್ಚಿಸದಿದ್ದರೆ ಬೆಳವಣಿಗೆ ವೇಗಗೊಳ್ಳುವುದಿಲ್ಲ ಎಂಬ ಅಂಶವನ್ನು ಪ್ರಧಾನಿಯು ಅಂತಿಮವಾಗಿ ಮನದಟ್ಟುಮಾಡಿಕೊಂಡಿದ್ದಾರೆ’ ಎಂದು ಹೇಳಿದ್ದಾರೆ.

ಜವಳಿ, ಪ್ರವಾಸೋದ್ಯಮ, ರಫ್ತುದಾರರು, ಕರಕುಶಲ ವಸ್ತುಗಳು ಮತ್ತು ಕೃಷಿ ವಲಯದಲ್ಲಿನ ಸಮಸ್ಯೆಗಳ ಪರಿಹಾರಕ್ಕೂ ಕೇಂದ್ರ ಸರ್ಕಾರ ಮುಂದಾಗಬೇಕು. ವಿದ್ಯುತ್‌, ಮದ್ಯ, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ರಿಯಲ್‌ ಎಸ್ಟೇಟ್‌ ವಲಯಕ್ಕೆ ಆಯಾ ರಾಜ್ಯದ ಹಂತದಲ್ಲೇ ಜಿಎಸ್‌ಟಿ ಜಾರಿಗೊಳಿಸಲು ರಾಜ್ಯ ಸರ್ಕಾರಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.