ADVERTISEMENT

ಕಾಂಗ್ರೆಸ್‌ನ ಕೆಲ ನಾಯಕರೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇದೆ: MP ಶಶಿ ತರೂರ್

ಪಿಟಿಐ
Published 19 ಜೂನ್ 2025, 10:34 IST
Last Updated 19 ಜೂನ್ 2025, 10:34 IST
 ಶಶಿ ತರೂರ್
 ಶಶಿ ತರೂರ್   

ತಿರುವನಂತರಪುರ: ‘ಕಾಂಗ್ರೆಸ್‌ನ ನಾಯಕತ್ವದ ಹಂತದಲ್ಲಿ ಕೆಲವರೊಂದಿಗೆ ನನಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿವೆ. ಆದರೆ ನಿಲಂಬರ್‌ ಕ್ಷೇತ್ರದ ಉಪಚುನಾವಣೆ ನಡೆಯಲಿದ್ದು, ಅದರ ದೃಷ್ಟಿಕೋನದಲ್ಲಿ ಆ ವಿಷಯವನ್ನು ಪ್ರಸ್ತಾಪಿಸುವುದಿಲ್ಲ’ ಎಂದು ಸಂಸದ ಮತ್ತು ಕಾಂಗ್ರೆಸ್ ಕಾರ್ಯಕಾರಿ ಮಂಡಳಿ ಸದಸ್ಯ ಶಶಿ ತರೂರ್‌ ಗುರುವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್‌, ಅದರ ಮೌಲ್ಯಗಳು ಮತ್ತದರ ಕಾರ್ಯಕರ್ತರು ನನ್ನ ಹೃದಯಕ್ಕೆ ಅತ್ಯಂತ ಹತ್ತಿರವಿರುವವರು. ಕಳೆದ 16 ವರ್ಷಗಳಿಂದ ಪಕ್ಷದ ಕಾರ್ಯಕರ್ತರೊಂದಿಗೆ ಕೆಲಸ ಮಾಡಿದ್ದೇನೆ. ಈಗ ಅವರೆಲ್ಲರೂ ನನ್ನ ಸ್ನೇಹಿತರು ಹಾಗೂ ಸೋದರರಾಗಿದ್ದಾರೆ’ ಎಂದಿದ್ದಾರೆ.

‘ಆದಾಗ್ಯೂ, ಕಾಂಗ್ರೆಸ್‌ ನಾಯಕತ್ವದ ಕೆಲವರೊಂದಿಗೆ ನನಗೆ ಭಿನ್ನಾಭಿಪ್ರಾಯಗಳಿವೆ. ನಾನು ಯಾವುದರ ಬಗ್ಗೆ ಮಾತನಾಡುತ್ತಿದ್ದೇನೆ ಎಂಬುದನ್ನು ನೀವು ಬಲ್ಲಿರಿ ಎಂಬುದನ್ನು ಅರಿತಿದ್ದೇನೆ. ಇವುಗಳಲ್ಲಿ ಕೆಲವೊಂದು ಸಮಸ್ಯೆಗಳು ಸಾರ್ವಜನಿಕ ವಲಯದಲ್ಲಿವೆ ಮತ್ತು ಅವುಗಳು ಮಾದ್ಯಮಗಳಲ್ಲಿ ವರದಿಯೂ ಆಗಿವೆ’ ಎಂದು ತರೂರ್ ಹೇಳಿದ್ದಾರೆ.

ADVERTISEMENT

ಪಕ್ಷದ ಕೇಂದ್ರ ಅಥವಾ ರಾಜ್ಯ ಘಟಕದಲ್ಲಿ ಯಾರೊಂದಿಗೆ ಭಿನ್ನಾಭಿಪ್ರಾಯವಿದೆ ಎಂಬುದನ್ನು ತರೂರ್ ಸ್ಪಷ್ಟಪಡಿಸಲಿಲ್ಲ. ಆದರೆ ಉಪಚುನಾವಣೆ ನಂತರ ಯಾರೊಂದಿಗೆ ಯಾವ ವಿಷಯದಲ್ಲಿ ಭಿನ್ನಾಭಿಪ್ರಾಯವಿದೆ ಎಂಬುದನ್ನು ಬಹಿರಂಗಪಡಿಸುವ ಸುಳಿವು ನೀಡಿದ್ದಾರೆ.

ಉಪಚುನಾವಣೆಯ ಪ್ರಚಾರದಲ್ಲಿ ಏಕೆ ಪಾಲ್ಗೊಂಡಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ತರೂರ್, ‘ಕಳೆದ ವರ್ಷ ನಡೆದ ವಯನಾಡ್‌ ಉಪಚುನಾವಣೆಯನ್ನೂ ಒಳಗೊಂಡು ಈ ಹಿಂದಿನ ಉಪಚುನಾವಣೆಗಳಂತೆಯೇ ಈ ಬಾರಿಯೂ ನನ್ನನ್ನು ಆಹ್ವಾನಿಸಿಲ್ಲ. ಕರೆಯದ ಯಾವುದೇ ಕಾರ್ಯಕ್ರಮಗಳಿಗೂ ನಾನು ಹೋಗುವುದಿಲ್ಲ. ಆದರೆ ನನಗೆ ಪಕ್ಷದ ಕಾರ್ಯಕರ್ತರು ಬೇಕು’ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಇತ್ತೀಚೆಗೆ ನಡೆಸಿದ ಸಮಾಲೋಚನೆ ಕುರಿತು ಪ್ರತಿಕ್ರಿಯಿಸಿದ ಅವರು, ‘ಆಪರೇಷನ್ ಸಿಂಧೂರ ಕುರಿತು ದೇಶದ ನಿಲುವನ್ನು ಜಗತ್ತಿಗೆ ತಿಳಿಸಲು ವಿವಿಧ ರಾಷ್ಟ್ರಗಳಿಗೆ ಭೇಟಿ ನೀಡಿ ಚರ್ಚಿಸಿದ್ದೇನೆ. ಪ್ರವಾಸದ ಕುರಿತು ಪ್ರಧಾನಿಗೆ ಮಾಹಿತಿ ನೀಡಿದೆ. ಆದರೆ ದೇಶದ ರಾಜಕೀಯ  ಬೆಳವಣಿಗೆಗಳ ಕುರಿತು ಚರ್ಚಿಸಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಸಂಸತ್ತಿನ ವಿದೇಶಾಂಗ ವ್ಯವಹಾರಗಳ ಸಮಿತಿಯ ಅಧ್ಯಕ್ಷನಾಗಿರುವ ನನಗೆ ಸರ್ಕಾರದ ನಿಯೋಗದ ಭಾಗವಾಗಿ ವಿದೇಶಗಳಿಗೆ ತೆರಳಿ ಭಯೋತ್ಪಾದನೆ ವಿರುದ್ಧದ ಕಾರ್ಯಾಚರಣೆಯಲ್ಲಿ ದೇಶದ ನಿಲುವನ್ನು ವಿವರಿಸುವಂತೆ ಕೇಂದ್ರ ಸರ್ಕಾರ ಕೇಳಿಕೊಂಡಿತು. ಭಾರತದ ವಿದೇಶಾಂಗ ನೀತಿ ಮತ್ತು ರಾಷ್ಟ್ರದ ಹಿತಕ್ಕಷ್ಟೇ ನನ್ನ ಗಮನ ಕೇಂದ್ರೀಕರಿಸಿದ್ದೆನೇ ಹೊರತು, ಕಾಂಗ್ರೆಸ್ ಅಥವಾ ಬಿಜೆಪಿಯ ವಿದೇಶಾಂಗ ನೀತಿಗಳಿಗಲ್ಲ’ ಎಂದು ತರೂರ್ ಹೇಳಿದ್ದಾರೆ.

'ನನ್ನ ದಾರಿಯನ್ನು ನಾನು ಬದಲಿಸುವುದಿಲ್ಲ. ಯಾವುದೇ ವಿಷಯವಿರಲಿ ದೇಶ ಮೊದಲು ಎಂಬುದಕ್ಕೆ ನಾನು ಬದ್ಧ. ದೇಶಕ್ಕಾಗಿ ನಾವೆಲ್ಲರೂ ದುಡಿಯಬೇಕು ಮತ್ತು ಮಾತನಾಡಬೇಕು. ಆಪರೇಷನ್ ಸಿಂಧೂರ ಸಂದರ್ಭದಲ್ಲಿ ನಾನಾಡಿರುವ ಮಾತುಗಳು ನನ್ನ ನಿಲುವುಗಳು. ಕೇಂದ್ರ ಸರ್ಕಾರವು ನನ್ನ ಸೇವೆಯನ್ನು ಕೇಳಿಕೊಂಡಿತು. ಆದರೆ ಅದೇ ಸಂದರ್ಭದಲ್ಲಿ ನನ್ನ ಪಕ್ಷ ಕೇಳಲಿಲ್ಲ. ಭಾರತದ ನಾಗರಿಕನಾಗಿ ನಾನು ನನ್ನ ಕರ್ತವ್ಯ ನಿರ್ವಹಿಸಿದೆ ಎಂಬ ಹೆಮ್ಮೆ ನನಗಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.