ADVERTISEMENT

ಮಹದಾಯಿ: ಶಾ ಹೇಳಿಕೆ ಖಂಡಿಸಲು ಗೋವಾ ಸಿಎಂಗೆ ವಾರದ ಗಡುವು

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2023, 14:10 IST
Last Updated 4 ಫೆಬ್ರುವರಿ 2023, 14:10 IST
ಪ್ರಮೋದ್ ಸಾವಂತ್
ಪ್ರಮೋದ್ ಸಾವಂತ್   

ಪಣಜಿ: ಮಹದಾಯಿ ನದಿ ವಿವಾದವನ್ನು ಬಿಜೆಪಿ ಬಗೆಹರಿಸಿ ಕರ್ನಾಟಕಕ್ಕೆ ನೀರು ನೀಡಿದೆ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಯನ್ನು ಒಂದು ವಾರದೊಳಗೆ ಖಂಡಿಸುವಂತೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರನ್ನು ಪ್ರತಿಪಕ್ಷ ಕಾಂಗ್ರೆಸ್ ಒತ್ತಾಯಿಸಿದೆ.

ನದಿ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ ಹಲವು ವರ್ಷಗಳಿಂದ ಗೋವಾ ಮತ್ತು ನೆರೆಯ ದಕ್ಷಿಣ ರಾಜ್ಯ ನೀರಿನ ವಿಚಾರಕ್ಕೆ ಜಗಳದಲ್ಲಿ ತೊಡಗಿವೆ. ಒಪ್ಪಂದಗಳನ್ನು ನಿರ್ಲಕ್ಷಿಸುವ ಮೂಲಕ ಕರ್ನಾಟಕ ಈ ವಿಷಯದಲ್ಲಿ ಏಕಪಕ್ಷೀಯವಾಗಿ ಮುಂದುವರಿಯುತ್ತಿದೆ ಎಂದು ಗೋವಾ ಆಗಾಗ್ಗೆ ಆರೋಪಿಸಿದೆ.

ಪಕ್ಷದ ಗೋವಾ ಉಸ್ತುವಾರಿ ಮಾಣಿಕಂ ಟ್ಯಾಗೋರ್, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಮಿತ್ ಪಾಟ್ಕರ್, ವಿರೋಧ ಪಕ್ಷದ ನಾಯಕ ಯೂರಿ ಅಲೆಮಾವೊ ಮತ್ತು ದಕ್ಷಿಣ ಗೋವಾ ಸಂಸದ ಫ್ರಾನ್ಸಿಸ್ ಸರ್ಡಿನ್ಹಾ ಸೇರಿದಂತೆ ಕಾಂಗ್ರೆಸ್ ಮುಖಂಡರು ಶನಿವಾರ ಸಭೆಯಲ್ಲಿ ಭಾಗವಹಿಸಿದ್ದರು.

ADVERTISEMENT

‘ಅಮಿತ್ ಶಾ ಹೇಳಿಕೆಯನ್ನು ಶುಕ್ರವಾರದೊಳಗೆ ಗೋವಾ ಮುಖ್ಯಮಂತ್ರಿ ಖಂಡಿಸದಿದ್ದರೆ, ರಾಜಕೀಯಕ್ಕಾಗಿ ಮಹದಾಯಿ ನೀರನ್ನು ಗೋವಾ ಕರ್ನಾಟಕಕ್ಕೆ ಮಾರಾಟ ಮಾಡಿದೆ ಎಂದು ಸಾಬೀತಾಗುತ್ತದೆ’ ಎಂದು ಅಮಿತ್‌ ಪಾಟ್ಕರ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಸಚಿವರ ಹೇಳಿಕೆಗಳು ಗೋವಾದ ಜನರಿಗೆ ಬೇಕಾಗಿಲ್ಲ. ಪ್ರಮೋದ್ ಸಾವಂತ್ ಅವರ ಬಾಯಿಂದಲೇ ಸತ್ಯ ತಿಳಿಸಬೇಕಾಗಿದೆ. ಅವರಿಗೆ ಒಂದು ವಾರದ ಕಾಲಾವಕಾಶ ನೀಡಲಾಗುವುದು’ ಎಂದು ಸಭೆಯಲ್ಲಿ ಕೈಗೊಂಡ ನಿರ್ಣಯ ಉಲ್ಲೇಖಿಸಿ ಹೇಳಿದರು.

ಅಮಿತ್ ಶಾ ಹೇಳಿಕೆ ಕೋಲಾಹಲಕ್ಕೆ ಕಾರಣವಾಗುತ್ತಿದ್ದಂತೆ ಗೋವಾದ ಪ್ರತಿಪಕ್ಷಗಳು ಮಹದಾಯಿ ವಿಚಾರದಲ್ಲಿ ಸ್ಪಷ್ಟ ನಿಲುವು ತೆಗೆದುಕೊಳ್ಳದ ಮುಖ್ಯಮಂತ್ರಿ ಸಾವಂತ್ ಅವರ ರಾಜೀನಾಮೆಗೆ ಆಗ್ರಹಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.