ADVERTISEMENT

ಕಾಂಗ್ರೆಸ್‌ನ ರೋಗ್ರಗ್ರಸ್ಥ ಮನಸ್ಥಿತಿ: ಹಿಂದುತ್ವದ ಟೀಕೆಗೆ ಸಂಬಿತ್ ಪಾತ್ರಾ ಕಿಡಿ

ಪಿಟಿಐ
Published 12 ನವೆಂಬರ್ 2021, 15:41 IST
Last Updated 12 ನವೆಂಬರ್ 2021, 15:41 IST
   

ನವದೆಹಲಿ: ಕಾಂಗ್ರೆಸ್ ನಾಯಕತ್ವದ ರೋಗಗ್ರಸ್ತ ಮನಸ್ಥಿತಿಯುಹಿಂದೂ ಧರ್ಮದ ಬಗ್ಗೆ ದ್ವೇಷಭಾವನೆ ಹೊಂದಿದೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಟೀಕಿಸಿದ್ದಾರೆ. ಹಿಂದುತ್ವದ ಬಗ್ಗೆ ರಾಹುಲ್ ಗಾಂಧಿ ಟೀಕೆ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ರಾಹುಲ್ ಗಾಂಧಿಯ ಅತ್ಯಾಪ್ತರಾದ ಸಲ್ಮಾನ್ ಖುರ್ಷಿದ್, ಶಶಿ ತರೂರ್ ಮತ್ತು ಚಿದಂಬರಂ ಸಹ ಧರ್ಮವನ್ನು ಗುರಿಯಾಗಿಸಿಕೊಂಡಿದ್ದರು ಎಂದು ಆರೋಪಿಸಿದ್ದಾರೆ.

ಹಿಂದೂ ಧರ್ಮ ಮತ್ತು ಆರೆಸ್ಸೆಸ್‌ನವರು ಹೆಚ್ಚಾಗಿ ಬಳಸುವ ಹಿಂದುತ್ವ ಬೇರೆ ಬೇರೆ, ಈ ಮೂಲಕ ಆರೆಸ್ಸೆಸ್‌–ಬಿಜೆಪಿ ದ್ವೇಷ ಹರಡುತ್ತಿವೆ ಎಂದು ಹೇಳಿಕೆ ನೀಡಿದ್ದ ರಾಹುಲ್ ಗಾಂಧಿ ವಿರುದ್ಧ ಅವರು ಹರಿಹಾಯ್ದಿದ್ದಾರೆ.

ಹಿಂದೂ ಧರ್ಮ ಮತ್ತು ಸಂಸ್ಕೃತಿ ಮೇಲೆ ಗಂಭೀರ ಟೀಕೆ ಮಾಡಿದ ಇತಿಹಾಸ ರಾಹುಲ್ ಗಾಂಧಿ ಅವರಿಗಿದೆ. ಎಲ್ಲ ಸಂದರ್ಭದಲ್ಲೂ ಹಿಂದೂ ಧರ್ಮವನ್ನು ಟೀಕಿಸುವುದು ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬದ ಗುಣವಾಗಿದೆ ಎಂದು ಸಂಬಿತ್ ಪಾತ್ರಾ ಟೀಕಿಸಿದ್ದಾರೆ.

ADVERTISEMENT

ಗಾಂಧಿ ಕುಟುಂಬದ ಅತ್ಯಾಪ್ತರಾದ ಶಶಿ ತರೂರ್ ಮತ್ತು ಚಿದಂಬರಂ ಅವರು ಹಿಂದೂ ಪಾಕಿಸ್ತಾನ, ಹಿಂದೂ ತಾಲಿಬಾನ್ ಮತ್ತು ಕೇಸರಿ ಭಯೋತ್ಪಾದನೆಯಂತಹ ಪದ ಬಳಕೆ ಮಾಡಿದ್ದಾರೆ. ದಿಗ್ವಿಜಯ್ ಸಿಂಗ್ ಮತ್ತು ಮಣಿಶಂಕರ್ ಅಯ್ಯರ್ ಸಹ ಇದೇ ರೀತಿ ಹೇಳಿಕೆ ನೀಡುತ್ತಾರೆ ಎಂದು ಸಂಬಿತ್ ಪಾತ್ರಾ ಆರೋಪಿಸಿದ್ದಾರೆ.

‘ಅವರು ನೀಡುತ್ತಿರುವ ಹೇಳಿಕೆ ಕಾಕತಾಳಿಯವಲ್ಲ. ಅದೊಂದು ಪ್ರಯೋಗ. ಈ ಪ್ರಯೋಗ ನಡೆಯುತ್ತಿರುವ ಪ್ರಯೋಗಾಲಯದ ಹೆಡ್ ಮಾಸ್ಟರ್ ರಾಹುಲ್ ಗಾಂಧಿ. ರೋಗಗ್ರಸ್ಥ ಮನಸ್ಥಿತಿಯ ಕಾಂಗ್ರೆಸ್ ನಾಯಕರೆಲ್ಲರಲ್ಲೂ ಹಿಂದೂ ಧರ್ಮದ ಬಗ್ಗೆ ದ್ವೇಷಭಾವನೆ ಇದೆ. ಇದಕ್ಕೆ ಗಾಂಧಿ ಕುಟುಂಬದ ಬೆಂಬಲವಿದೆ’ಎಂದು ಅವರು ಹೇಳಿದ್ದಾರೆ.

ಭಾರತಕ್ಕೆ ಹಿಂದೂ ಭಯೋತ್ಪಾದನೆಯು, ಇಸ್ಲಾಂ ಭಯೋತ್ಪಾದನೆಗಿಂತ ಹೆಚ್ಚು ಅಪಾಯಕಾರಿ ಎಂದು ರಾಹುಲ್ ಗಾಂಧಿ ನೀಡಿರುವ ಹೇಳಿಕೆ ಕುರಿತಂತೆ ವಿಕಿಲೀಕ್ಸ್ ಉಲ್ಲೇಖದ ಬಗ್ಗೆಯೂ ಪಾತ್ರಾ ಪ್ರಸ್ತಾಪಿಸಿದ್ದಾರೆ.

ಕಾಂಗ್ರೆಸ್ ಮುಖಂಡ ಸಲ್ಮಾನ್ ಖುರ್ಷಿದ್ ಬರೆದಿರುವ ಪುಸ್ತಕದಲ್ಲಿ ಹಿಂದುತ್ವವನ್ನು ಐಸಿಸ್ ಮತ್ತು ಬೊಕೊ ಹರಾಮ್ ಉಗ್ರಗಾಮಿ ಸಂಘಟನೆಗಳಿಗೆ ಹೋಲಿಸಿದ ಬಗ್ಗೆ ಬಿಜೆಪಿ ಟೀಕಿಸಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿದ್ದ ರಾಹುಲ್ ಗಾಂಧಿ, ನಮ್ಮ ಪಕ್ಷದ ಸಿದ್ಧಾಂತವು ಅಂತ್ಯವಿಲ್ಲದ ಶಕ್ತಿ ಒಳಗೊಂಡ ಸುಂದರವಾದ ಆಭರಣ ಇದ್ದಂತೆ. ಹಿಂದೂ ಧರ್ಮ ಮತ್ತು ಹಿಂದುತ್ವ ಎರಡು ಬೇರೆ ಬೇರೆ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.