ADVERTISEMENT

ಕಾಂಗ್ರೆಸ್‌ನ ಮೃದು ಹಿಂದುತ್ವ ಫಲ ಕೊಡದು

ಬಿಜೆಪಿ ವಿರುದ್ಧ ಒಂದಾದರೂ ‘ದಾರಿ ತಪ್ಪುವಿಕೆ’ ವಿರುದ್ಧ ಹೋರಾಟ ನಿಲ್ಲದು: ಸಿಪಿಎಂ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2018, 20:11 IST
Last Updated 6 ಡಿಸೆಂಬರ್ 2018, 20:11 IST
   

ನವದೆಹಲಿ: ಮೃದು ಹಿಂದುತ್ವ ಧೋರಣೆ ಅನುಸರಿಸುವ ಮೂಲಕ ಬಿಜೆಪಿಯನ್ನು ಸೋಲಿಸಬಹುದು ಎಂದು ಕಾಂಗ್ರೆಸ್‌ ಪಕ್ಷ ಭಾವಿಸಿದ್ದರೆ ಅದು ತಪ್ಪು ಗ್ರಹಿಕೆ ಎಂದು ಸಿಪಿಎಂ ಅಭಿಪ್ರಾಯಪಟ್ಟಿದೆ.

‘ಛತ್ತೀಸಗಡ, ಮಧ್ಯಪ್ರದೇಶ ಮತ್ತು ರಾಜಸ್ಥಾನ ವಿಧಾನಸಭೆ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್‌ ಪಕ್ಷವು ಅನುಸರಿಸಿದ ಕಾರ್ಯತಂತ್ರವು ಕೆಲವು ದೃಷ್ಟಿಯಲ್ಲಿ ಹಿಂದುತ್ವದ ಪೇಲವವಾದ ಅನುಕರಣೆ. ಪೆಹ್ಲು ಖಾನ್‌ ಅವರನ್ನು ಹೊಡೆದು ಕೊಂದದಂತಹ ಪ್ರಕರಣಗಳ ಬಗ್ಗೆ ಮಾತನಾಡಲು ಕಾಂಗ್ರೆಸ್‌ಗೆ ಹಿಂಜರಿಕೆ ಇದ್ದುದು ಎದ್ದು ಕಾಣುತ್ತಿತ್ತು’ ಎಂದು ಸಿಪಿಎಂ ಮುಖವಾಣಿ ‘ಪೀಪಲ್ಸ್‌ ಡೆಮಾಕ್ರಸಿ’ಯ ಸಂಪಾದಕೀಯದಲ್ಲಿ ಹೇಳಲಾಗಿದೆ.

‘ಈ ಮೂರು ರಾಜ್ಯಗಳಲ್ಲಿ ಬಿಜೆಪಿಗೆ ಹಿನ್ನಡೆ ಆಗಲಿದೆ. ಉದ್ಯೋಗ ಸೃಷ್ಟಿ, ರೈತರ ಸಂಕಷ್ಟ ಪರಿಹಾರ, ಮೂಲಭೂತ ಸೌಕರ್ಯ ಸೃಷ್ಟಿ ಮತ್ತು ಭ್ರಷ್ಟಾಚಾರ ತಡೆಗಾಗಿ ಜನರು ಬಿಜೆಪಿಗೆ ಮತ ಹಾಕಿದ್ದರು. ಈ ವಿಚಾರಗಳಲ್ಲಿ ಆ ಪಕ್ಷವು ಏನೂ ಮಾಡದಿರುವುದು ಹಿನ್ನಡೆಗೆ ಕಾರಣವಾಗಲಿದೆ. ಹಾಗಾಗಿ ಹಿಂದುತ್ವವನ್ನು ಹಿಡಿದುಕೊಂಡು ಬಿಜೆಪಿಯನ್ನು ಸೋಲಿಸಬಹುದು ಎಂದು ಕಾಂಗ್ರೆಸ್‌ ಭಾವಿಸಿದ್ದರೆ ಆ ಗ್ರಹಿಕೆಯೇ ಸರಿ ಇಲ್ಲ’ ಎಂದು ಸಿಪಿಎಂ ಹೇಳಿದೆ.

ADVERTISEMENT

ನರೇಂದ್ರ ಮೋದಿ ಸರ್ಕಾರದ ವಿರುದ್ಧ ಹೋರಾಡಲು ವಿರೋಧ ಪಕ್ಷಗಳು ಒಂದಾಗಬೇಕು ಎಂಬುದು ನಿಜ. ಹಾಗಂತ, ಇಂತಹ ದಾರಿ ತಪ್ಪುವಿಕೆಯ ವಿರುದ್ಧದ ಹೋರಾಟವನ್ನು ಕೈಬಿಡುವುದಿಲ್ಲ ಎಂದು ಸಿಪಿಎಂ ಪ‍್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಅವರು ಕಳೆದ ವಾರ ಹೇಳಿದ್ದರು.

‘ಮೃದು ಹಿಂದುತ್ವದ ಬಗ್ಗೆ ಕಾಂಗ್ರೆಸ್‌ಗೆ ಸದಾ ಒಲವು ಇದೆ ಎಂದು ನಾವು ಹೇಳುತ್ತಲೇ ಬಂದಿದ್ದೇವೆ. ಕಾಂಗ್ರೆಸ್‌ ಜಾತ್ಯತೀತ ಪಕ್ಷ ಎಂಬುದು ನಿಜ. ಆದರೆ, ಜಾತೀಯತೆಯ ವಿಚಾರದಲ್ಲಿ ಆ ಪಕ್ಷ ರಾಜಿ ಮಾಡಿಕೊಳ್ಳಲು ಸಿದ್ಧ. ಅದು ಕಾಂಗ್ರೆಸ್‌ನ ಸ್ವಭಾವದ ಭಾಗ. ಇದನ್ನು ನಾವು ಹಿಂದೆಯೂ ವಿರೋಧಿಸಿದ್ದೇವೆ, ಮುಂದೆಯೂ ವಿರೋಧಿಸುತ್ತೇವೆ’ ಎಂದು ಯೆಚೂರಿ ಸ್ಪಷ್ಟವಾಗಿಯೇ ಹೇಳಿದ್ದರು.

‘ಕಾಂಗ್ರೆಸ್‌ನ ಹಿಂದುತ್ವವು ಬಿಜೆಪಿಯ ಹಿಂದುತ್ವಕ್ಕಿಂತ ಹೆಚ್ಚು ಪ್ರಾಮಾಣಿಕವಾದುದು’ ಎಂಬುದನ್ನು ಜನರಿಗೆ ಮನದಟ್ಟು ಮಾಡುವ ಪ್ರಯತ್ನ ಚುನಾವಣಾ ಪ್ರಚಾರದಲ್ಲಿ ನಡೆದಿದೆ. ರಾಹುಲ್‌ ಗಾಂಧಿ ಅವರು ಸಾಲು ಸಾಲಾಗಿ ದೇಗುಲಗಳಿಗೆ ಭೇಟಿ ಕೊಟ್ಟಿದ್ದಾರೆ. ಮಧ್ಯ ಪ್ರದೇಶದ ಚುನಾವಣಾ ಪ್ರಣಾಳಿಕೆಯಲ್ಲಿ ಗೋಶಾಲೆ ನಿರ್ಮಾಣ ಮತ್ತು ಗೋಮೂತ್ರ ಮಾರಾಟಕ್ಕೆ ವ್ಯವಸ್ಥೆ ಮಾಡುವ ಬಗ್ಗೆ ಭರವಸೆ ನೀಡಲಾಗಿದೆ. ರಾಜಸ್ಥಾನದ ಪ್ರಣಾಳಿಕೆಯಲ್ಲಿ ವೇದದ ಮೌಲ್ಯಗಳನ್ನು ಪ್ರಚುರಪಡಿಸಲು ಶಿಕ್ಷಣ ಮಂಡಳಿ ಸ್ಥಾಪನೆಯ ಪ್ರಸ್ತಾಪ ಇದೆ’ ಎಂದು ಪೀಪಲ್ಸ್‌ ಡೆಮಾಕ್ರಸಿಯ ಸಂಪಾದಕೀಯ ಹೇಳಿದೆ.

ಪುಣೆಯಿಂದ ಮಾಧುರಿ ಬಿಜೆಪಿ ಅಭ್ಯರ್ಥಿ?

2019ರ ಲೋಕಸಭಾ ಚುನಾವಣೆಯಲ್ಲಿ ಪುಣೆ ಕ್ಷೇತ್ರದಿಂದ ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್‌ ನೆನೆ ಅವರನ್ನು ಕಣಕ್ಕೆ ಇಳಿಸುವ ಬಗ್ಗೆ ಯೋಚಿಸಲಾಗುತ್ತಿದೆ ಎಂದು ಬಿಜೆಪಿ ಮೂಲಗಳು ಹೇಳಿವೆ. ಈ ವರ್ಷ ಜೂನ್‌ನಲ್ಲಿ ನಡೆಸಿದ ‘ಬೆಂಬಲಕ್ಕಾಗಿ ಜನ ಸಂಪರ್ಕ’ ಕಾರ್ಯಕ್ರಮದ ಭಾಗವಾಗಿ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಮಾಧುರಿ ಅವರನ್ನು ಮುಂಬೈಯಲ್ಲಿ ಭೇಟಿಯಾಗಿದ್ದರು.

ಪುಣೆ ಲೋಕಸಭಾ ಕ್ಷೇತ್ರಕ್ಕೆ ಅಂತಿಮಗೊಳಿಸಲಾದ ಅಭ್ಯರ್ಥಿಗಳ ಪಟ್ಟಿಯಲ್ಲಿ ಮಾಧುರಿ ಇದ್ದಾರೆ. ಮಾಧುರಿ ಸ್ಪರ್ಧಿಸುವುದಾದರೆ ಪುಣೆ ಕ್ಷೇತ್ರವೇ ಅತ್ಯುತ್ತಮ ಎಂದು ನಿರ್ಧರಿಸಲಾಗಿದೆ ಎಂದು ಬಿಜೆಪಿಯ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.

2014ರ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರವನ್ನು ಕಾಂಗ್ರೆಸ್‌ನಿಂದ ಬಿಜೆಪಿ ಕಸಿದುಕೊಂಡಿತ್ತು. ಬಿಜೆಪಿಯ ಅನಿಲ್‌ ಶಿರೋಲೆ ಅವರು ಮೂರು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದರು.

ನರೇಂದ್ರ ಮೋದಿ ಅವರು ಗುಜರಾತಿನ ಮುಖ್ಯಮಂತ್ರಿಯಾಗಿ ಮೊದಲ ಬಾರಿ ಆಯ್ಕೆಯಾದಾಗ ಇಂತಹ ಕಾರ್ಯತಂತ್ರ ಅನುಸರಿಸಿದ್ದರು. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎಲ್ಲ ಹೊಸ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿತ್ತು. ಹೊಸ ಅಭ್ಯರ್ಥಿಗಳು ಕಣದಲ್ಲಿದ್ದರೆ ಅವರನ್ನು ಟೀಕಿಸಲು ಏನೂ ಇರುವುದಿಲ್ಲ ಎಂದು ಮುಖಂಡರೊಬ್ಬರು ಹೇಳಿದ್ದಾರೆ.
ವಾಕ್ಚಾತುರ್ಯ

**

ಪ್ರಿಯ ಮೋದಿ ಅವರೇ, ಪ್ರಚಾರ ಮುಗಿಯಿತು. ನಿಮ್ಮ ಅರೆಕಾಲಿಕ ಪ್ರಧಾನಿ ಹುದ್ದೆಯತ್ತ ಈಗಲಾದಲೂ ಸ್ವಲ್ಪ ಗಮನ ಹರಿಸುವಿರಿ ಎಂದು ಆಶಿಸುತ್ತೇನೆ. ಅಂದ ಹಾಗೆ, ನೀವು ಪ್ರಧಾನಿಯಾಗಿ 1,654 ದಿನಗಳಾದವು. ಈವರೆಗೆ ಒಂದೇ ಒಂದು ಮಾಧ್ಯಮಗೋಷ್ಠಿ ನಡೆಸಿಲ್ಲ. ಮಾಧ್ಯಮಗೋಷ್ಠಿ ನಡೆಸಲು ಪ್ರಯತ್ನಿಸಿ ನೋಡಿ. ಪ್ರಶ್ನೆಗಳು ನಮ್ಮೆಡೆಗೆ ತೂರಿ ಬರುವುದು ಚೆನ್ನಾಗಿರುತ್ತದೆ

- ರಾಹುಲ್‌ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ

**

ಕರೀಮ್‌ನಗರದ ಹೆಸರು ಬದಲಾಯಿಸುವುದು ಕರೀಮ್‌ನಗರದಲ್ಲಿ ಯಾರ ಕಾರ್ಯಸೂಚಿಯೂ ಅಲ್ಲ. ಇದು ಯೋಗಿ ಆದಿತ್ಯನಾಥ ಅವರ ಮೋಹ. ಕರೀಮ್‌ನಗರದಲ್ಲಿ ಯಾರೂ ಈ ಬಗ್ಗೆ ಯೋಚಿಸಿಲ್ಲ, ಹೆಸರು ಬದಲಾಯಿಸುವಂತೆ ಕೇಳಿಲ್ಲ. ಹೆಸರು ಬದಲಾವಣೆಯ ಬಗ್ಗೆ ಮಾತನಾಡಿದ್ದನ್ನು ನಾನು ಕೇಳುತ್ತಿರುವುದು ಇದೇ ಮೊದಲು.

- ಬಿ. ವಿನೋದ್‌ ಕುಮಾರ್‌, ಲೋಕಸಭೆಯಲ್ಲಿ ಟಿಆರ್‌ಎಸ್‌ನ ಉಪ ನಾಯಕ

**

ಅಮಿತ್‌ ಶಾ ದೇವರು ಎಂಬ ಬಗ್ಗೆ ನನಗೆ ಅನುಮಾನ ಇದೆ. ರಾಜಕೀಯದಲ್ಲಿ ಏನಾಗಲಿದೆ ಎಂಬ ಬಗ್ಗೆ ಅವರು ಭವಿಷ್ಯ ನುಡಿಯಲಾಗದು. ಮೋದಿ ಕೂಡ ಹೇಳಲಾಗದು. ದೇಶವನ್ನು ಮುಂದಿನ 50 ವರ್ಷ ಬಿಜೆಪಿ ಆಳಲಿದೆ ಎಂಬುದು ಶಾ ಅವರ ಅಪೇಕ್ಷೆ. ಆದರೆ, ಹಾಗೆಯೇ ಆಗುತ್ತದೆ ಎಂದು ಹೇಳುವುದು ಅಸಾಧ್ಯ.

- ಝೊರಾಂತಂಗಾ, ಮಿಜೊ ನ್ಯಾಷನಲ್‌ ಫ್ರಂಟ್‌ ಮುಖ್ಯಸ್ಥ

**
ಬಿಜೆಪಿ ಇರುವಿಕೆ ತೋರಲೇಬೇಕು

ಮೆಹಬೂಬ್‌ನಗರ: ತೆಲಂಗಾಣದಲ್ಲಿ ಶುಕ್ರವಾರ ನಡೆಯುವ ಮತದಾನ ಅಲ್ಲಿ ನೆಲೆ ಕಂಡುಕೊಳ್ಳಲು ಬಿಜೆಪಿಗೆ ನಿರ್ಣಾಯಕವಾಗಿದೆ. ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ತಳ ಭದ್ರಪಡಿಸಿಕೊಳ್ಳಲು ಈ ಚುನಾವಣೆಯ ಫಲಿತಾಂಶ ಬಿಜೆಪಿಗೆ ಭಾರಿ ಮಹತ್ವದ್ದಾಗಿದೆ.

2014ರಲ್ಲಿ ಟಿಡಿಪಿ ಜತೆಗೆ ಮೈತ್ರಿ ಮಾಡಿಕೊಂಡು ಬಿಜೆಪಿ ಸ್ಪರ್ಧಿಸಿತ್ತು. ಹೈದರಾಬಾದ್‌ ನಗರದ ಐದು ಕ್ಷೇತ್ರಗಳಲ್ಲಿ ಗೆಲುವನ್ನೂ ಸಾಧಿಸಿತ್ತು.

ಕಳೆದ ಬಾರಿ ಬಿಜೆಪಿ ಜತೆಗಿದ್ದ ಟಿಡಿಪಿ ಈಗ ಕಾಂಗ್ರೆಸ್‌ ನೇತೃತ್ವದ ಮೈತ್ರಿಕೂಟದ ಪ್ರಮುಖ ಅಂಗ ಪಕ್ಷವಾಗಿದೆ. ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸಿದೆ. ಈ ಬಾರಿ, ಟಿಆರ್‌ಎಸ್‌ ಮತ್ತು ಕಾಂಗ್ರೆಸ್‌ ನೇತೃತ್ವದ ಪ್ರಜಾಕೂಟದ ನಡುವೆ ನೇರ ಸ್ಪರ್ಧೆ ಇದ್ದಂತೆ ಕಾಣಿಸುತ್ತಿದೆ.

ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಬಿಜೆಪಿ ಅಡ್ಡಗಲಾಗಬಹುದು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ಟಿಆರ್‌ಎಸ್‌ ಸರ್ಕಾರದ ಕಾರ್ಯಕ್ಷಮತೆಯೇ ಈ ಚುನಾವಣೆಯ ಮುಖ್ಯ ವಿಷಯ. 2014ರಲ್ಲಿ ಟಿಆರ್‌ಎಸ್‌ಗೆ ತೆಲಂಗಾಣ ರಾಜ್ಯ ರಚನೆಯ ಭಾವನಾತ್ಮಕತೆಯಿಂದಾಗಿ ನಿರಾಯಾಸ ಗೆಲುವು ಲಭಿಸಿತ್ತು. ‘ತೆಲಂಗಾಣದಲ್ಲಿ ಬಿಜೆಪಿಗೆ ಗಟ್ಟಿ ನೆಲೆ ಇದೆ. ಹೈದರಾಬಾದ್‌ ಪ್ರದೇಶದಲ್ಲಿ ನಮ್ಮ ಮತ ಪ್ರಮಾಣ ಹೆಚ್ಚು. ಈ ಬಾರಿ ಈ ಪ್ರಮಾಣ ಇನ್ನಷ್ಟು ಹೆಚ್ಚಲಿದೆ’ ಎಂಬ ವಿಶ್ವಾಸವನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳೀಧರ ರಾವ್‌ ವ್ಯಕ್ತಪಡಿಸುತ್ತಾರೆ.

ಟಿಆರ್‌ಎಸ್‌ಗೆ ಪರ್ಯಾಯವಾಗಿ ಜನರು ಬಿಜೆಪಿಯತ್ತ ನೋಡುತ್ತಿದ್ದಾರೆ. ಟಿಆರ್‌ಎಸ್‌ ವಿರೋಧಿ ಮತಗಳು ಬಿಜೆಪಿಗೆ ಬರುತ್ತವೆಯೇ ಹೊರತು ಕಾಂಗ್ರೆಸ್‌ಗೆ ಹೋಗಲ್ಲ. ಟಿಆರ್‌ಎಸ್‌ ಅಥವಾ ಪ್ರಜಾಕೂಟಕ್ಕೆ ಮತ ಹಾಕಲು ಇಷ್ಟವಿಲ್ಲದ ಜನರನ್ನು ಒಲಿಸಿಕೊಳ್ಳಲು ಬಿಜೆಪಿ ಎಲ್ಲ ಪ್ರಯತ್ನ ನಡೆಸಿದೆ ಎಂದು ಅವರು ಹೇಳಿದ್ದಾರೆ.
**

ಬೇಡಿಕೆ ಈಡೇರಿಸುವ ತ್ರಿಪುರ ಸುಂದರಿ

ಬನ್ಸ್‌ವಾರಾ (ರಾಜಸ್ಥಾನ): ರಾಜಸ್ಥಾನ ವಿಧಾನಸಭೆ ಚುನಾವಣೆಯ ಅಬ್ಬರದ ಪ್ರಚಾರದ ನಡುವೆಯೇ ಅರಾವಳಿ ಬೆಟ್ಟಸಾಲುಗಳ ನಡುವೆ ಇರುವ ಹಲವು ಶತಮಾನ ಹಳೆಯ ತ್ರಿಪುರ ಸುಂದರಿ ದೇವಾಲಯಕ್ಕೆ ಬರುವ ‘ಭಕ್ತರ’ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತದೆ.

ರಾಜಕೀಯದಲ್ಲಿ ಯಶಸ್ಸು ಸಿಗಲಿ ಎಂಬ ಪ್ರಾರ್ಥನೆ ಇಲ್ಲಿ ಈಡೇರುತ್ತದೆ ಎಂಬುದು ರಾಜಕಾರಣಿಗಳಲ್ಲಿ ಇರುವ ನಂಬಿಕೆ. ಹಾಗಾಗಿ ಪಕ್ಷಭೇದ ಇಲ್ಲದೆ ಎಲ್ಲರೂ ಇಲ್ಲಿ ಬರುತ್ತಾರೆ.

ಮುಖ್ಯಮಂತ್ರಿ ವಸುಂಧರಾ ರಾಜೇ ಅವರು ಇಲ್ಲಿಗೆ ಆಗಾಗ ಭೇಟಿ ನೀಡುತ್ತಾರೆ. 2013ರಲ್ಲಿ ನಡೆದ ವಿಧಾನಸಭೆ ಚುನಾವಣೆಯ ಮತ ಎಣಿಕೆ ಸಂದರ್ಭದಲ್ಲಿ ಅವರು ಇಲ್ಲಿಗೆ ಬಂದಿದ್ದರು. 2014ರ ಲೋಕಸಭಾ ಚುನಾವಣೆಯ ಫಲಿತಾಂಶದ ಸಂದರ್ಭದಲ್ಲಿಯೂ ಅವರು ಇಲ್ಲಿಯೇ ಇದ್ದರು.

ಈ ದೇಗುಲ ರಾಜಧಾನಿ ಜೈಪುರದಿಂದ 516 ಕಿ.ಮೀ. ದೂರದಲ್ಲಿದೆ. ಹಾಗಿದ್ದರೂ ಮಾಜಿ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರು ಇತ್ತೀಚೆಗೆ ಇಲ್ಲಿಗೆ ಬಂದು ಹೋಗಿದ್ದಾರೆ. ನರೇಂದ್ರ ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ಇಲ್ಲಿಗೆ ಭೇಟಿ ಕೊಟ್ಟಿದ್ದರು.

ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌, ಕಾಂಗ್ರೆಸ್‌ ಮುಖಂಡ ದಿಗ್ವಿಜಯ್‌ ಸಿಂಗ್‌, ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಹರಿದೇವ್ ಜೋಷಿ ಮುಂತಾದವರೂ ಇಲ್ಲಿಗೆ ಆಗಾಗ ಭೇಟಿ ಕೊಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.