ADVERTISEMENT

‘ಕ್ಷೇತ್ರ’ ಹೊಂದಾಣಿಕೆ ಕಸರತ್ತು: ಗೌಡರ ಪಟ್ಟು, ಕಾಂಗ್ರೆಸ್‌ಗೆ ನುಂಗಲಾರದ ತುತ್ತು

ಒಟ್ಟು ಸ್ಥಾನಗಳಲ್ಲಿ ಮೂರನೇ ಒಂದರಷ್ಟು ಮಿತ್ರ ಪಕ್ಷಕ್ಕೆ ನೀಡಲು ಒತ್ತಾಯ

ಸಿದ್ದಯ್ಯ ಹಿರೇಮಠ
Published 2 ಫೆಬ್ರುವರಿ 2019, 20:12 IST
Last Updated 2 ಫೆಬ್ರುವರಿ 2019, 20:12 IST
   

ನವದೆಹಲಿ: ‘ಸಮ್ಮಿಶ್ರ ಸರ್ಕಾರದ ಸಚಿವ ಸ್ಥಾನಗಳನ್ನು ಹಂಚಿಕೊಂಡಂತೆಯೇ ಲೋಕಸಭೆಯ ಒಟ್ಟು ಸ್ಥಾನಗಳಲ್ಲಿ ಮೂರನೇ ಒಂದರಷ್ಟನ್ನು ಮಿತ್ರ ಪಕ್ಷಕ್ಕೆ ನೀಡಬೇಕು’ ಎಂದು ಜೆಡಿಎಸ್‌ ಅಧಿನಾಯಕ ಎಚ್‌.ಡಿ. ದೇವೇಗೌಡ ಅವರು ಪಟ್ಟು ಹಿಡಿದಿರುವುದು ಕಾಂಗ್ರೆಸ್‌ ಹೈಕಮಾಂಡ್‌ಗೆ ನುಂಗಲಾರದ ತುತ್ತಾಗಿದೆ.

ಹಳೆ ಮೈಸೂರು ಭಾಗದ ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ ಮೈಸೂರು ಮತ್ತು ಚಿತ್ರದುರ್ಗ ಕ್ಷೇತ್ರಗಳತ್ತ ಕಣ್ಣಿಟ್ಟಿರುವ ಜೆಡಿಎಸ್‌ ವರಿಷ್ಠರು, ಚಿಕ್ಕಮಗಳೂರು, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ಉತ್ತರ ಸೇರಿದಂತೆ ಒಟ್ಟು 12 ಕ್ಷೇತ್ರಗಳಿಗೆ ಬೇಡಿಕೆ ಇರಿಸಿದ್ದಾರೆ. ಈಗಾಗಲೇ ಪಕ್ಷ ಪ್ರತಿನಿಧಿಸುತ್ತಿರುವ ಹಾಸನ ಮತ್ತು ಮಂಡ್ಯ ಕ್ಷೇತ್ರಗಳನ್ನು ಬಿಟ್ಟುಕೊಡುವ ಪ್ರಶ್ನೆಯೂ ಇಲ್ಲ ಎಂಬುದೇ ವರಿಷ್ಠರ ಮೇಲೆ ಹೆಚ್ಚು ಒತ್ತಡ ತಂದಿದೆ.

ಮೋದಿ ಅಲೆ ತಂದೊಡ್ಡಿದ್ದ ಸಂಕಷ್ಟದ ನಡುವೆಯೂ 2014ರ ಚುನಾವಣೆಯಲ್ಲಿ ‘ಕೈ’ ಹಿಡಿದಿದ್ದ ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ ಮತ್ತು ಚಿತ್ರದುರ್ಗ ಕ್ಷೇತ್ರಗಳನ್ನು ಬಿಟ್ಟುಕೊಡುವುದಾದರೂ ಹೇಗೆ ಎಂಬುದು ಮೈತ್ರಿ ಸರ್ಕಾರದ ಭಾಗವಾಗಿರುವ ಕಾಂಗ್ರೆಸ್‌ನ ಚಿಂತೆಗೆ ಕಾರಣವಾಗಿದೆ.

ADVERTISEMENT

ವಿಧಾನಸಭೆಗೆ ನಡೆದಿದ್ದ ಚುನಾವಣೆಯಲ್ಲಿ ದಕ್ಕಿರುವ ಗೆಲುವಿನ ಲೆಕ್ಕಾಚಾರದೊಂದಿಗೆ ಈ ಕ್ಷೇತ್ರಗಳತ್ತ ಜೆಡಿಎಸ್‌ ದೃಷ್ಟಿ ನೆಟ್ಟಿದೆ. ಒಂದೊಮ್ಮೆ ಈ ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದ್ದೇ ಆದಲ್ಲಿ, ಪಕ್ಷದ ಪ್ರಾಬಲ್ಯವೂ ದೂರವಾಗಲಿದೆ ಎಂಬುದು ಕಾಂಗ್ರೆಸ್‌ನ ರಾಜ್ಯ ನಾಯಕರ ದುಮ್ಮಾನ.

ಹಾಸನ ಕ್ಷೇತ್ರದಿಂದ ಎಚ್‌.ಡಿ. ರೇವಣ್ಣ ಅವರ ಪುತ್ರ ಪ್ರಜ್ವಲ್‌ ಸ್ಪರ್ಧಿಸಲಿದ್ದಾರೆ ಎಂಬ ಇಂಗಿತ ವ್ಯಕ್ತವಾಗಿದ್ದರಿಂದ ದೇವೇಗೌಡರು ಯಾವ ಕ್ಷೇತ್ರದಿಂದ ಸ್ಪರ್ಧಿಸಬಹುದು ಎಂಬುದೂ ಈಗಿನ ಪ್ರಶ್ನೆಯಾಗಿದೆ. ದೇವೇಗೌಡರು ಮೈಸೂರು, ಬೆಂಗಳೂರು ಉತ್ತರ ಅಥವಾ ತುಮಕೂರು ಕ್ಷೇತ್ರದಿಂದಲೇ ಸ್ಪರ್ಧಿಸುವ ಸಾಧ್ಯತೆಗಳೂ ಇವೆ. ಆದರೆ, ಮೈಸೂರು ಕ್ಷೇತ್ರವನ್ನು ಜೆಡಿಎಸ್‌ಗೆ ‘ಧಾರೆ’ ಎರೆಯುವ ಧಾರಾಳತನ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಗೆ ಇದ್ದಂತಿಲ್ಲ.

ಇನ್ನು, ದಿವಂಗತ ಅಂಬರೀಷ್‌ ಅವರ ಪತ್ನಿ ಸುಮಲತಾ ಅವರು ಬೆಂಬಲಿಗರ ಒತ್ತಾಸೆಯ ಮೇರೆಗೆ ರಾಜಕೀಯಕ್ಕೆ ಧುಮುಕಿದರೆ ಮಂಡ್ಯ ಕ್ಷೇತ್ರದಿಂದ ಅವರನ್ನು ಸ್ಪರ್ಧೆಗೆ ಇಳಿಸುವುದು ಅನಿವಾರ್ಯ. ಆದರೆ, ಜೆಡಿಎಸ್‌ ಆ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವುದರಿಂದ ಬಿಟ್ಟುಕೊಡುವುದೂ ಸುಲಭವಲ್ಲ ಎಂಬುದೂ ಕಾಂಗ್ರೆಸ್‌ನ ಚಿಂತೆಯನ್ನು ದ್ವಿಗುಣಗೊಳಿಸಿದೆ ಎಂದು ಪಕ್ಷದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ನಿವೃತ್ತ ನ್ಯಾಯಾಧೀಶ ಎಸ್‌.ಪಿ. ಮುದ್ದಹನುಮೇಗೌಡ ಅವರು ಪ್ರತಿನಿಧಿಸುತ್ತಿರುವ ತುಮಕೂರು ಮತ್ತು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರ ಚಿಕ್ಕಬಳ್ಳಾಪುರ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ವಿಷಯದಲ್ಲೂ ತೀವ್ರ ಚರ್ಚೆಗಳು ನಡೆದಿವೆ. ಹೈದರಾಬಾದ್‌ ಕರ್ನಾಟಕ ಮತ್ತು ಮುಂಬೈ ಕರ್ನಾಟಕ ಭಾಗದಲ್ಲಿ ಐದರಿಂದ ಆರು ಕ್ಷೇತ್ರಗಳನ್ನು ಬಿಟ್ಟು ಕೊಡಲು ಕಾಂಗ್ರೆಸ್‌ನಿಂದ ಯಾವುದೇ ವಿರೋಧ ಇಲ್ಲ. ಆದರೆ, ಆ ಭಾಗದತ್ತ ಜೆಡಿಎಸ್‌ಗೆ ಒಲವು ಇದ್ದಂತಿಲ್ಲ.

ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಅವರೊಂದಿಗೆ ಕಳೆದ ವಾರ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ದಿಢೀರ್‌ ಭೇಟಿ ಮಾಡಿದಾಗಲೂ ಬಿಟ್ಟುಕೊಡಬಹುದಾದ ಮತ್ತು ಕೊಡಲಾರದಂತಹ ಕ್ಷೇತ್ರಗಳ ಕುರಿತು ಗಂಭೀರ ಚರ್ಚೆಗಳು ನಡೆದಿವೆ.

‘ಮೈತ್ರಿ ಧರ್ಮ’ ಪಾಲಿಸುವ ನಿಟ್ಟಿನಲ್ಲಿ ಒಂದನ್ನು ಕಳೆದುಕೊಂಡು, ಮತ್ತೊಂದನ್ನು ಪಡೆಯಬಹುದಾದ ಅನಿವಾರ್ಯತೆ ಇದೆ. ಅದಕ್ಕೆ ಎಲ್ಲರೂ ಸಿದ್ಧರಾಗಬೇಕು ಎಂಬ ಸಲಹೆ ವರಿಷ್ಠರಿಂದ ಕೇಳಿಬಂದಿದೆ. ಆದರೆ ಸ್ಥಳೀಯ ರಾಜಕಾರಣದ ಲೆಕ್ಕಾಚಾರಗಳು ಇದಕ್ಕೆ ಸಮ್ಮತಿ ಸೂಚಿಸುವ ಲಕ್ಷಣಗಳು ವಿರಳ. ಜೆಡಿಎಸ್‌ಗೆ ಪ್ರಮುಖ ಕ್ಷೇತ್ರ ಬಿಟ್ಟುಕೊಡುವ ಸವಾಲನ್ನು ಕಾಂಗ್ರೆಸ್‌ ಎದುರಿಸುತ್ತಿದೆ. ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಉರುಳಿಸುವ ನಿಟ್ಟಿನಲ್ಲಿ ‘ಸೋಲು– ಗೆಲುವಿನ’ ಸಾಧ್ಯತೆಗಳ ಲೆಕ್ಕ ಹಾಕಿ, ಕಳೆದುಕೊಳ್ಳುವ ಮತ್ತು ಪಡೆದುಕೊಳ್ಳುವ ನಿರ್ಧಾರವನ್ನು ವರಿಷ್ಠರು ಕೈಗೊಳ್ಳಲಿದ್ದಾರೆ.

ಕಾಂಗ್ರೆಸ್‌ ಮುಖಂಡ ಮಂಜುಗೆ ಬಿಜೆಪಿ ಗಾಳ

ಹಾಸನ ಕ್ಷೇತ್ರದಿಂದ ಎಚ್‌.ಡಿ. ರೇವಣ್ಣ ಅವರ ಪುತ್ರ ಪ್ರಜ್ವಲ್‌ ಕಣಕ್ಕಿಳಿದಲ್ಲಿ ಕಾಂಗ್ರೆಸ್‌ನ ಗಟ್ಟಿ ಕುಳವನ್ನು ಸೆಳೆದು ಕಣಕ್ಕಿಳಿಸಲು ಬಿಜೆಪಿ ತಂತ್ರ ರೂಪಿಸಿದೆ.

ಕಾಂಗ್ರೆಸ್‌ ಮುಖಂಡ, ಮಾಜಿ ಸಚಿವ ಎ.ಮಂಜು ಅವರನ್ನು ಪಕ್ಷಕ್ಕೆ ಕರೆತಂದು ಪ್ರಜ್ವಲ್‌ ವಿರುದ್ಧ ಕಣಕ್ಕಿಳಿಸಬೇಕು ಎಂಬುದು ಬಿಜೆಪಿ ವರಿಷ್ಠರ ಲೆಕ್ಕಾಚಾರ. ಈ ಕುರಿತು ಮಾತುಕತೆ ನಡೆದಿವೆ. ಎ.ಮಂಜು ಮತ್ತು ಎಚ್‌.ಡಿ. ರೇವಣ್ಣ ಅವರ ನಡುವೆಯೂ ಈಗಾಗಲೇ ಮಾತಿನ ‘ಚಕಮಕಿ’ ನಡೆದಿರುವುದೂ ಇದರ ಮುನ್ಸೂಚನೆಯಾಗಿದೆ.

‘ಎ.ಮಂಜು ಈ ಹಿಂದೆ ಬಿಜೆಪಿಯಲ್ಲಿದ್ದವರು. ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವ ಚಿಂತನೆಯಂತೂ ನಡೆದಿದೆ. ಅಂತಿಮ ಹಂತದ ಮಾತುಕತೆ ನಡೆಯಬೇಕಷ್ಟೇ’ ಎಂದು ಪಕ್ಷದ ಹಿರಿಯರೊಬ್ಬರು ಖಚಿತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.