ADVERTISEMENT

'ವಲಸೆ ನಿಲ್ಲಿಸಿ, ಉದ್ಯೋಗ ನೀಡಿ': ಪಾದಯಾತ್ರೆ ಆರಂಭಿಸಿದ ಬಿಹಾರ ಕಾಂಗ್ರೆಸ್

ಪಿಟಿಐ
Published 16 ಮಾರ್ಚ್ 2025, 10:23 IST
Last Updated 16 ಮಾರ್ಚ್ 2025, 10:23 IST
   

ಪಟ್ನಾ: ರಾಜ್ಯದಲ್ಲಿ ನಿರುದ್ಯೋಗ್ಯ ಸಮಸ್ಯೆ ಏರುತ್ತಿರುವ ಬಗ್ಗೆ ಸರ್ಕಾರ ಹಾಗೂ ಸಾರ್ವಜನಿಕರ ಗಮನ ಸೆಳೆಯುವ ನಿಟ್ಟಿನಲ್ಲಿ ಬಿಹಾರ ಕಾಂಗ್ರೆಸ್‌, 'ವಲಸೆ ನಿಲ್ಲಿಸಿ, ಉದ್ಯೋಗ ನೀಡಿ' ಪಾದಯಾತ್ರೆಗೆ ಇಂದು (ಭಾನುವಾರ) ಚಾಲನೆ ನೀಡಿದೆ.

ಮಹಾತ್ಮ ಗಾಂಧಿ ಶತಮಾನದ ಹಿಂದೆ ಪಶ್ಚಿಮ ಚಂಪಾರಣ್‌ ಜಿಲ್ಲೆಯಲ್ಲಿ ಆರಂಭಿಸಿದ್ದ ಭಿತಿಹರ್ವ ಆಶ್ರಮದಿಂದ ಪಾದಯಾತ್ರೆ ಆರಂಭವಾಗಿದೆ. ಅವರು ಇಲ್ಲಿ ಆಶ್ರಮ ಆರಂಭಿಸುವ ಕೆಲ ಸಮಯಕ್ಕೂ ಮುನ್ನ, ಬಿಹಾರದ ಉತ್ತರ ಭಾಗದ ತೋಟಗಳಲ್ಲಿ ಕೆಲಸ ಮಾಡುತ್ತಿದ್ದವರ ಪರವಾಗಿ ದೇಶದಲ್ಲಿ ತಮ್ಮ ಮೊದಲ ಸತ್ಯಾಗ್ರಹ ನಡೆಸಿದ್ದರು.

'ವಲಸೆ ನಿಲ್ಲಿಸಿ, ಉದ್ಯೋಗ ನೀಡಿ' ಪಾದಯಾತ್ರೆಗೆ ಚಾಲನೆ ನೀಡುವ ವೇಳೆ, ಪಕ್ಷದ ವಿದ್ಯಾರ್ಥಿ ಘಟಕ ಎನ್‌ಎಸ್‌ಯುಐ ರಾಷ್ಟ್ರೀಯ ಉಸ್ತುವಾರಿ ಕನ್ಹಯ್ಯಾ ಕುಮಾರ್ ಸೇರಿದಂತೆ ಹಲವು ನಾಯಕರು ಹಾಗೂ ಕಾರ್ಯಕರ್ತರ ಸಮ್ಮುಖದಲ್ಲಿ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಅಖಿಲೇಶ್‌ ಪ್ರಸಾದ್‌ ಸಿಂಗ್‌ ಅವರಿಗೆ ಸಾಂಕೇತಿಕವಾಗಿ ರಾಷ್ಟ್ರಧ್ವಜ ನೀಡಿ ಸನ್ಮಾನಿಸಲಾಗಿದೆ. 

ADVERTISEMENT

ಎನ್‌ಎಸ್‌ಯುಐ ಅಧ್ಯಕ್ಷ ವರುಣ್ ಚೌಧರಿ, ಯುವ ಕಾಂಗ್ರೆಸ್ ಅಧ್ಯಕ್ಷ ಉದಯ್ ಭಾನು ಚಿಬ್, ಬಿಹಾರ ಕಾಂಗ್ರೆಸ್‌ನ ಎಐಸಿಸಿ ಉಸ್ತುವಾರಿ ಕೃಷ್ಣ ಅಲ್ಲಾವರು ಅವರೂ ಉಪಸ್ಥಿತರಿದ್ದರು.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಗುವ ಪಾದಯಾತ್ರೆಯು ಪಟ್ನಾದಲ್ಲಿ ಮುಕ್ತಾಯವಾಗಲಿದೆ.

ಬಿಹಾರ ವಿಧಾನಸಭೆಗೆ ಈ ವರ್ಷಾಂತ್ಯದಲ್ಲಿ ಚುನಾವಣೆ ನಡೆಯಲಿದ್ದು, ಅಧಿಕಾರಕ್ಕೇರುವ ನಿಟ್ಟಿನಲ್ಲಿಯೂ ಈ ಪಾದಯಾತ್ರೆ ಪ್ರಮುಖವಾಗಲಿದೆ. ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವು, ಎಡ ಪಕ್ಷಗಳು ಹಾಗೂ ಆರ್‌ಜೆಡಿ ಜೊತೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ.

ಬಿಹಾರದಲ್ಲಿ ಸದ್ಯ ಜೆಡಿಯು ಹಾಗೂ ಬಿಜೆಪಿ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದ್ದು, ನಿತೀಶ್ ಕುಮಾರ್‌ ಮುಖ್ಯಮಂತ್ರಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.