ADVERTISEMENT

ನಿಜಾಮುದ್ದೀನ್ ಭೇಟಿ ಮುಚ್ಚಿಟ್ಟ ಕಾಂಗ್ರೆಸ್ ನಾಯಕರ ವಿರುದ್ಧ ಪ್ರಕರಣ

ಪಿಟಿಐ
Published 10 ಏಪ್ರಿಲ್ 2020, 19:43 IST
Last Updated 10 ಏಪ್ರಿಲ್ 2020, 19:43 IST
   

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿನ ಅತಿದೊಡ್ಡ ಹಾಟ್‌ಸ್ಪಾಟ್‌ಗಳಲ್ಲಿ ಒಂದಾಗಿರುವ ನಿಜಾಮುದ್ದೀನ್‌ನ ತಬ್ಲೀಗ್ ಜಮಾತ್ ಕೇಂದ್ರ ಕಚೇರಿಗೆ ಭೇಟಿ ನೀಡಿದ ವಿಷಯ ಮರೆಮಾಚಿದ್ದಕ್ಕೆ ಕಾಂಗ್ರೆಸ್ ನಾಯಕರೊಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

‘ಮಾಜಿ ರಾಜಕಾರಣಿ ಆಗಿರುವ ಈ ವ್ಯಕ್ತಿ, ಕೌನ್ಸಿಲರ್ ಆಗಿರುವ ಇವರ ಪತ್ನಿ ಹಾಗೂ ಪುತ್ರಿಯಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಇವರು ಅಂಬೇಡ್ಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿಕೆ ಉಲ್ಲೇಖಿಸಿ ಎನ್‌ಡಿಟಿವಿ ಮಾಡಿದೆ.

‘ಈ ನಾಯಕರ ನಿರ್ಲಕ್ಷ್ಯದಿಂದಾಗಿ ನೈಋತ್ಯ ದೆಹಲಿಯಲ್ಲಿರುವ ಇವರ ಗ್ರಾಮ ದೀನ್‌ಪುರವನ್ನು ಸೀಲ್‌ಡೌನ್ ಮಾಡಲಾಗಿದೆ. ’ ಎಂದು ಪೊಲೀಸರು ತಿಳಿಸಿದ್ದಾರೆ.‌

ADVERTISEMENT

ದಿವಾಳಿತನ ಅರ್ಜಿ ವಿಚಾರಣೆಗೆ ತಡೆ:ಮಲ್ಯ ತುಸು ನಿರಾಳ

ಲಂಡನ್: ಉದ್ಯಮಿ ವಿಜಯ ಮಲ್ಯ ಅವರನ್ನು ದಿವಾಳಿ ಎಂದು ಘೋಷಿಸುವಂತೆ ಮನವಿ ಮಾಡಿ ಎಸ್‌ಬಿಐ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಇಲ್ಲಿನ ಹೈಕೋರ್ಟ್ ತಡೆ ಹಿಡಿದಿದೆ. ಇದರಿಂದಾಗಿ ಮಲ್ಯ ಅವರಿಗೆ ತುಸು ನಿರಾಳತೆ ದೊರಕಿದಂತಾಗಿದೆ.

‘ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ಅವರು ಸಲ್ಲಿಸಿರುವ ಅರ್ಜಿಗಳು ಹಾಗೂ ಬ್ಯಾಂಕ್‌ಗಳಿಗೆ ಪೂರ್ಣಪ್ರಮಾಣದಲ್ಲಿ
ಸಾಲ ಮರುಪಾವತಿಗೆ ಅವಕಾಶ ನೀಡುವಂತೆ ಕರ್ನಾಟಕ ಹೈಕೋರ್ಟ್‌ಗೆ ಮಾಡಿರುವ ಮನವಿ ಇತ್ಯರ್ಥವಾಗುವ ತನಕ ಈ ಅರ್ಜಿಯನ್ನು ಪರಿಗಣಿಸಲು ಸಾಧ್ಯವಿಲ್ಲ’ ಎಂದು ನ್ಯಾಯಮೂರ್ತಿ ಮೈಕೆಲ್ ಬ್ರಿಗ್ಸ್‌ ತಮ್ಮ ಆದೇಶದಲ್ಲಿ ಹೇಳಿದ್ದಾರೆ.

ಜೂಮ್‌ ಆ್ಯಪ್‌ ಹ್ಯಾಕ್‌

ಸಿಂಗಪುರ (ಎಪಿ): ಜೂಮ್‌ ಕಾನ್ಫರೆನ್ಸ್‌ ಆ್ಯಪ್‌ ಬಳಸಿ ಆನ್‌ಲೈನ್‌ ಮೂಲಕ ವಿದ್ಯಾರ್ಥಿಗಳಿಗೆ ತರಗತಿ ನಡೆಸುವುದನ್ನು ಸಿಂಗಪುರದಲ್ಲಿ ರದ್ದುಗೊಳಿಸಲಾಗಿದೆ. ಹ್ಯಾಕರ್‌ಗಳು ಆ್ಯಪ್‌ ಅನ್ನು ಹ್ಯಾಕ್‌ ಮಾಡಿ ಅಶ್ಲೀಲ ಚಿತ್ರಗಳನ್ನು ಪ್ರಸಾರಗೊಳಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಈ ರೀತಿ ಹ್ಯಾಕ್‌ ಮಾಡುವುದನ್ನು ‘ಜೂಮ್‌ಬಾಂಬಿಂಗ್‌’ ಎಂದು ಕರೆಯಲಾಗಿದೆ.

ಸೇನೆ ದಾಳಿ: ಪಾಕ್‌ನಲ್ಲಿ ಹಾನಿ

ಶ್ರೀನಗರ: ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದ ಬಳಿಕ ಪ್ರತಿದಾಳಿ ನಡೆಸಿದ ಭಾರತೀಯ ಸೇನೆ ಅಪಾರ ಹಾನಿ ಮಾಡಿದೆ.

ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಎರಡು ಪ್ರದೇಶಗಳಲ್ಲಿ ಶುಕ್ರವಾರ ಈ ದಾಳಿ ನಡೆದಿದೆ.

ಪಾಕಿಸ್ತಾನಿ ಸೇನೆ ಮತ್ತು ಉಗ್ರರು ಅಡಗಿರುವ ತಾಣಗಳ ಮೇಲೆ ಈ ದಾಳಿ ನಡೆಸಲಾಗಿದೆ.

‘ಕದನ ವಿರಾಮ ಉಲ್ಲಂಘಿಸಿದ್ದಕ್ಕೆ ಭಾರತೀಯ ಸೇನೆ ದಿಟ್ಟ ಉತ್ತರವನ್ನು ನೀಡಿದೆ’ ಎಂದು ಸೇನೆಯ ವಕ್ತಾರರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.