ADVERTISEMENT

ರಾಹುಲ್‌ ಪೊಲೀಸರ ವಶಕ್ಕೆ: ಕಾಂಗ್ರೆಸ್‌ ನಾಯಕರ ಆಕ್ರೋಶ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಅಕ್ಟೋಬರ್ 2020, 11:13 IST
Last Updated 1 ಅಕ್ಟೋಬರ್ 2020, 11:13 IST
ರಾಹುಲ್ ಗಾಂಧಿಯನ್ನು ತಡೆಯುತ್ತಿರುವ ಪೊಲೀಸರು (ಕೃಪೆ: ಪಿಟಿಐ)
ರಾಹುಲ್ ಗಾಂಧಿಯನ್ನು ತಡೆಯುತ್ತಿರುವ ಪೊಲೀಸರು (ಕೃಪೆ: ಪಿಟಿಐ)   

ಬೆಂಗಳೂರು:ಅತ್ಯಾಚಾರ ಸಂತ್ರಸ್ತೆಯ ಕುಟುಂಬದವರ ಭೇಟಿಗಾಗಿ ಗುರುವಾರ ಹತ್ರಾಸ್‌ಗೆ ಹೊರಟಿದ್ದ ಕಾಂಗ್ರೆಸ್ ನಾಯಕರಾದ ರಾಹುಲ್‌ ಗಾಂಧಿಯನ್ನು ತಡೆದು, ವಶಕ್ಕೆ ಪಡೆದ ಉತ್ತರ ಪ್ರದೇಶ ಪೊಲೀಸರ ನಡೆಯನ್ನು ರಾಜ್ಯ ಕಾಂಗ್ರೆಸ್‌ ನಾಯಕರು ಟೀಕಿಸಿದ್ದಾರೆ. ಯೋಗಿ ಆದಿತ್ಯನಾಥ್‌ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

‘ಯೋಗಿ ಸರ್ಕಾರ ಬೆಲೆ ತೆರಬೇಕಾಗುತ್ತದೆ’

ADVERTISEMENT

ಉತ್ತರಪ್ರದೇಶದ ಪೊಲೀಸರು ನಮ್ಮ ಪಕ್ಷದ ನಾಯಕರಾದ ರಾಹುಲ್‌ ಗಾಂಧಿ ಮತ್ತು ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ಬಂಧಿಸಿರುವುದು ಖಂಡನೀಯ. ಈ ಇಬ್ಬರು ನಾಯಕರ ಬಂಧನ ಮತ್ತು ಅವರ ಜೊತೆಗಿನ ಪೊಲೀಸರ ದುರ್ವರ್ತನೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಬೆಲೆ ತೆರಬೇಕಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ.

‘ಕಾನೂನು ಸುವ್ಯವಸ್ಥೆ ಕುಸಿದಿದೆ’

ಆದಿತ್ಯನಾಥ್ ಅವರ ನೇತೃತ್ವದ ಸರ್ಕಾರದಲ್ಲಿ ಉತ್ತರಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕುಸಿದು ಬಿದ್ದಿದೆ. ಮಹಿಳೆಯರು ಹಾಗೂ ದಲಿತರಿಗೆ ರಕ್ಷಣೆಯಿಲ್ಲದಂತಾಗಿದೆ ಎಂದು ಕಾಂಗ್ರೆಸ್‌ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಛಾಟಿ ಬೀಸಿದ್ದಾರೆ.

‘ಬೇಟಿ ಬಚಾವೋ ಬಗ್ಗೆ ಈಗ ಯಾಕೆ ಮಾತಾ‌ಡುತ್ತಿಲ್ಲ ಮೋದಿ?’

ಹತ್ರಾಸ್ ಅತ್ಯಾಚಾರ ಸಂತ್ರಸ್ತೆ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಲು ಹೋರಾಡುತ್ತಿರುವ ನಮ್ಮ ನಾಯಕ ರಾಹುಲ್ ಗಾಂಧಿ ಅವರ ಮೇಲೆ ಉತ್ತರ ಪ್ರದೇಶ ಪೊಲೀಸರು ನಡೆಸಿದ ಹಲ್ಲೆಯನ್ನು ನಾನು ಖಂಡಿಸುತ್ತೇನೆ. ಯಾವ ಕಾನೂನಿನಡಿಯಲ್ಲಿ ಅವರನ್ನು ಬಂಧಿಸಲಾಗಿದೆ? ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರೇಕೆ ಸಂತ್ರಸ್ತೆ ಕುಟುಂಬವನ್ನು ಭೇಟಿ ಮಾಡಬಾರದು? 'ಬೇಟಿ ಬಚಾವೊ' ಬಗ್ಗೆ ಪ್ರಧಾನಿ ಈಗ ಏಕೆ ಮಾತನಾಡುತ್ತಿಲ್ಲ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಪ್ರಶ್ನೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.