ADVERTISEMENT

ಕಾಂಗ್ರೆಸ್‌ ದೇಶವ್ಯಾಪಿ ಪ್ರತಿಭಟನೆ: ಪ್ರಧಾನಿ ನಿವಾಸಕ್ಕೆ ಇಂದು ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2022, 21:30 IST
Last Updated 4 ಆಗಸ್ಟ್ 2022, 21:30 IST
ಪಾರ್ಲಿಮೆಂಟ್ ಹೌಸ್‌ನಲ್ಲಿ ಕಾಂಗ್ರೆಸ್ ಸಂಸದರು ಗುರುವಾರ ಸಭೆ ನಡೆಸಿದರು–ಪಿಟಿಐ ಚಿತ್ರ
ಪಾರ್ಲಿಮೆಂಟ್ ಹೌಸ್‌ನಲ್ಲಿ ಕಾಂಗ್ರೆಸ್ ಸಂಸದರು ಗುರುವಾರ ಸಭೆ ನಡೆಸಿದರು–ಪಿಟಿಐ ಚಿತ್ರ   

ನವದೆಹಲಿ: ಬೆಲೆ ಏರಿಕೆ ವಿರುದ್ಧದ ಹೋರಾಟವನ್ನು ತೀವ್ರಗೊಳಿಸಿರುವ ಕಾಂಗ್ರೆಸ್, ರಾಷ್ಟ್ರವ್ಯಾಪಿ ಪ್ರತಿಭಟನೆಗೆ ನಿರ್ಧರಿಸಿದೆ. ಪ್ರಧಾನಿ ನಿವಾಸಕ್ಕೆ ಶುಕ್ರವಾರ ಮುತ್ತಿಗೆ ಹಾಕಲು ತೀರ್ಮಾನಿಸಲಾಗಿದೆ. ಆದರೆ ನಿರ್ಬಂಧ ಆದೇಶವನ್ನು ಪಕ್ಷದ ಮುಖಂಡರು ಉಲ್ಲಂಘಿಸಿದರೆ, ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ದೆಹಲಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಬೆಲೆ ಏರಿಕೆ, ನಿರುದ್ಯೋಗ ಹಾಗೂ ಅಗತ್ಯ ವಸ್ತುಗಳಿಗೆ ಜಿಎಸ್‌ಟಿ ಹೇರಿಕೆ ಖಂಡಿಸಿ ಶುಕ್ರವಾರ ‘ರಾಷ್ಟ್ರಪತಿ ಭವನ ಚಲೋ’ ನಡೆಸಲೂ ಕಾಂಗ್ರೆಸ್ ಸಂಸದರು ನಿರ್ಧರಿಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನುನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ವಿಚಾರಣೆಗೆ ಒಳಪಡಿಸಿರುವುದು, ಸೋನಿಯಾ ಅವರ ನಿವಾಸಕ್ಕೆ ಹೋಗುವ ಮಾರ್ಗದಲ್ಲಿ ಬ್ಯಾರಿಕೇಡ್ ಅಳವಡಿಕೆ ಹಾಗೂ ನ್ಯಾಷನಲ್ ಹೆರಾಲ್ಡ್ ಕಚೇರಿಯಲ್ಲಿ ಇ.ಡಿ. ಅಧಿಕಾರಿಗಳು ಶೋಧ ನಡೆಸಿದ ಬೆಳವಣಿಗೆಗಳ ಬೆನ್ನಲ್ಲೇ, ಕಾಂಗ್ರೆಸ್ ತೀವ್ರ ಪ್ರತಿಭಟನೆಗೆ ಮುಂದಾಗಿದೆ. ಗ್ರಾಮ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲ ರಾಜ್ಯಗಳಲ್ಲಿ ರಾಜಭವನ ಚಲೋ ನಡೆಸಲು ನಿರ್ಧರಿಸಲಾಗಿದೆ.

ದೆಹಲಿ ಪೊಲೀಸ್ ಉಪ ಆಯುಕ್ತೆ ಅಮೃತಾ ಗುಗುಲೊಥ್ ಅವರು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರಿಗೆ ಪತ್ರ ಬರೆದಿದ್ದಾರೆ. ‘ಕಾಂಗ್ರೆಸ್ ಪಕ್ಷವು ಪ್ರತಿಭಟನೆ ಹಮ್ಮಿಕೊಳ್ಳುವ ಬಗ್ಗೆ ಮಾಹಿತಿ
ಬಂದಿದೆ. ಆದರೆ, ಜಂತರ್ ಮಂತರ್ ಹೊರತುಪಡಿಸಿ, ಉಳಿದ ಕಡೆ 144ನೇ ಸೆಕ್ಷನ್ ಜಾರಿಯಲ್ಲಿದೆ. ಈ ನಿಯಮಾವಳಿಗಳನ್ನು ಉಲ್ಲಂಘಿಸಿ ಧರಣಿ ನಡೆಸುವ ಅಥವಾ ಮುತ್ತಿಗೆ ಹಾಕುವ ಯಾವುದೇ ಯತ್ನಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.