ADVERTISEMENT

ತಮಿಳುನಾಡು ಚುನಾವಣೆ: ಡಿಎಂಕೆ ಮೈತ್ರಿಯಲ್ಲಿ ಕಾಂಗ್ರೆಸ್‌ಗೆ 25 ಸ್ಥಾನ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2021, 6:35 IST
Last Updated 7 ಮಾರ್ಚ್ 2021, 6:35 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಚೆನ್ನೈ: ಹಲವು ಸುತ್ತಿನ ಅನೌಪಚಾರಿಕ ಮತ್ತು ಔಪಚಾರಿಕ ಮಾತುಕತೆಗಳ ಬಳಿಕ ಡಿಎಂಕೆ ಹಾಗೂ ಕಾಂಗ್ರೆಸ್ ಪಕ್ಷಗಳು ಸೀಟು ಹಂಚಿಕೆ ಬಗ್ಗೆ ಶನಿವಾರ ಒಮ್ಮತಕ್ಕೆ ಬಂದಿವೆ.

ಕಾಂಗ್ರೆಸ್ ಪಕ್ಷಕ್ಕೆ 25 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅವಕಾಶ ದೊರೆತಿದೆ. ಕನ್ಯಾಕುಮಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಲಭಿಸುವ ನಿರೀಕ್ಷೆ ಇದೆ ಎನ್ನಲಾಗಿದೆ. ಈ ಕುರಿತು ಇಂದು (ಭಾನುವಾರ) ಒಪ್ಪಂದ ನಡೆಯಲಿದೆ. ಒಂದು ರಾಜ್ಯಸಭಾ ಸ್ಥಾನವನ್ನೂ ನೀಡಬೇಕೆಂದು ಕಾಂಗ್ರೆಸ್ ಬೇಡಿಕೆ ಇಟ್ಟಿದೆ. ಇದಕ್ಕೆ ಡಿಎಂಕೆ ಸಮ್ಮತಿಸಿದೆ ಎಂದೂ ಹೇಳಲಾಗಿದೆ.

ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್, ಕಾಂಗ್ರೆಸ್ ಪಕ್ಷದ ತಮಿಳುನಾಡು ಉಸ್ತುವಾರಿ ದಿನೇಶ್ ಗುಂಡೂರಾವ್, ಟಿಎನ್‌ಸಿಸಿ ಮುಖ್ಯಸ್ಥರು ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಕೆ.ಆರ್.ರಾಮಸ್ವಾಮಿ ಅವರ ನಡುವೆ ಶನಿವಾರ ತಡರಾತ್ರಿ ನಡೆದ ಮಾತುಕತೆ ವೇಳೆ ಒಮ್ಮತಕ್ಕೆ ಬರಲಾಗಿದೆ.

ADVERTISEMENT

ನಾವು ಡಿಎಂಕೆ ಜೊತೆ ಒಪ್ಪಂದಕ್ಕೆ ಬಂದಿದ್ದೇವೆ. ಒಪ್ಪಂದಕ್ಕೆ ಎರಡೂ ಪಕ್ಷಗಳು ಭಾನುವಾರ ಬೆಳಿಗ್ಗೆ 10 ಗಂಟೆಗೆ ಸಹಿ ಹಾಕಲಿವೆ ಎಂದು ಸ್ಟಾಲಿನ್ ನಿವಾಸದ ಹೊರಗೆ ಗುಂಡೂರಾವ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಡಿಎಂಕೆ ಮತ್ತು ಕಾಂಗ್ರೆಸ್ ನಡುವೆ ಸೀಟು ಹಂಚಿಕೆಗೆ ಸಂಬಂಧಿಸಿ ಗೊಂದಲ ಮುಂದುವರಿದಿತ್ತು. ಎರಡು ಪಕ್ಷಗಳು ಪಟ್ಟು ಸಡಿಲಿಸಿರಲಿಲ್ಲ. ಮೊದಲಸುತ್ತಿನ ಮಾತುಕತೆ ವೇಳೆ ಕಾಂಗ್ರೆಸ್‌ಗೆ18 ಸ್ಥಾನ ನೀಡಲುಡಿಎಂಕೆ ಒಪ್ಪಿತ್ತು. ನಂತರ 24 ಸ್ಥಾನಗಳನ್ನು ನೀಡುವುದಾಗಿ ಹೇಳಿತ್ತು. ಇದೀಗ ಅಂತಿಮವಾಗಿ 25 ಸ್ಥಾನಗಳನ್ನು ನೀಡಲು ಸಮ್ಮತಿ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.