ADVERTISEMENT

ಕೇಂದ್ರದ ಸುಗ್ರೀವಾಜ್ಞೆಗೆ ‘ಕೈ’ ವಿರೋಧ: ವಿಪಕ್ಷಗಳ ಸಭೆಯಲ್ಲಿ ಎಎಪಿ ಭಾಗಿ

​ಪ್ರಜಾವಾಣಿ ವಾರ್ತೆ
Published 15 ಜುಲೈ 2023, 15:54 IST
Last Updated 15 ಜುಲೈ 2023, 15:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೆಹಲಿ ಸರ್ಕಾರದ ಅಧಿಕಾರಶಾಹಿ ಮೇಲೆ ಹಿಡಿತ ಸಾಧಿಸಲು ಕೇಂದ್ರ ಸರ್ಕಾರ ತಂದಿರುವ ಸುಗ್ರೀವಾಜ್ಞೆಯನ್ನು ವಿರೋಧಿಸುವುದಾಗಿ ಕಾಂಗ್ರೆಸ್‌ ಶನಿವಾರ ಪ್ರಕಟಿಸಿದೆ. ಈ ವಿಷಯದಲ್ಲಿ ಸ್ಪಷ್ಟ ನಿಲುವು ಪ್ರಕಟಿಸಬೇಕು ಎಂಬ ಆಮ್ ಆದ್ಮಿ ಪಕ್ಷದ (ಎಎಪಿ) ಒತ್ತಡಕ್ಕೆ ‘ಕೈ’ ಪಾಳಯ ಮಣಿದಿದೆ. 

ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ರಾಜ್ಯ ಸರ್ಕಾರಗಳ ಹಾಗೂ ಮೂಲಭೂತ ಹಕ್ಕುಗಳ ಮೇಲಿನ ದಾಳಿ ಕುರಿತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಸಂಸತ್‌ನಲ್ಲಿ ತರಾಟೆಗೆ ತೆಗೆದುಕೊಳ್ಳುವುದಾಗಿ ಕಾಂಗ್ರೆಸ್‌ ಹೇಳಿದೆ. ಇದರ ಬೆನ್ನಲ್ಲೇ, ಬೆಂಗಳೂರಿನಲ್ಲಿ ಸೋಮವಾರ ಹಾಗೂ ಮಂಗಳವಾರ ನಡೆಯಲಿರುವ ವಿರೋಧ ಪಕ್ಷಗಳ ಸಭೆಯಲ್ಲಿ ಭಾಗವಹಿಸಲು ಎಎಪಿ ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ. 

ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ನಿವಾಸದಲ್ಲಿ ನಡೆದ ಕಾಂಗ್ರೆಸ್‌ ಸಂಸದೀಯ ಕಾರ್ಯತಂತ್ರ ಗುಂಪಿನ 90 ನಿಮಿಷಗಳ ಸಭೆಯ ಬಳಿಕ  ಕಾಂಗ್ರೆಸ್‌ ನಾಯಕರು ಪಕ್ಷದ ನಿಲುವನ್ನು ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು. ಮುಂಗಾರು ಅಧಿವೇಶನದ ಕಾರ್ಯತಂತ್ರದ ಕುರಿತು ಚರ್ಚಿಸಲು ಆಯೋಜಿಸಲಾಗಿದ್ದ ಸಭೆಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಹಿರಿಯ ನಾಯಕರು ಭಾಗಿಯಾಗಿದ್ದರು. 

ADVERTISEMENT

ಕೇಂದ್ರದ ಸುಗ್ರೀವಾಜ್ಞೆ ಕುರಿತು ಕಾಂಗ್ರೆಸ್‌ ನಿಲುವು ಏನು ಎಂಬ ಪ್ರಶ್ನೆಗಳಿಗೆ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್‌, ‘ರಾಜ್ಯ ಸರ್ಕಾರಗಳು, ಸ್ಥಳೀಯ ಸಂಸ್ಥೆಗಳು ಹಾಗೂ ಮೂಲಭೂತ ಹಕ್ಕುಗಳ ಮೇಲೆ ಮೋದಿ ಸರ್ಕಾರದ ದಾಳಿಯ ವಿರುದ್ಧ ನಮ್ಮ ಪಕ್ಷ ಯಾವಾಗಲೂ ಹೋರಾಡುತ್ತದೆ’ ಎಂದು ಸ್ಪಷ್ಟಪಡಿಸಿದರು. 

‘ಕೇಂದ್ರ ಸರ್ಕಾರದಿಂದ ನೇಮಕಗೊಂಡ ರಾಜ್ಯಪಾಲರ ಮೂಲಕ ಪರೋಕ್ಷವಾಗಿ ಈ ದಾಳಿ ಆಗಬಹುದು. ಕಾಂಗ್ರೆಸ್‌ ಇದನ್ನು ಸಂಸತ್ತಿನಲ್ಲಿ ಈ ಹಿಂದೆಯೂ ವಿರೋಧಿಸಿದೆ. ಮುಂದೆಯೂ ವಿರೋಧಿಸಲಿದೆ. ಇದು ಸಂವಿಧಾನದ ಮೇಲೆ ಲಜ್ಜೆಗೆಟ್ಟ ಹಲ್ಲೆ’ ಎಂದು ಅವರು ಹೇಳಿದರು. 

ಕೇಂದ್ರ ಸರ್ಕಾರದ ‘ಕರಾಳ’ ಸುಗ್ರೀವಾಜ್ಞೆ ಬಗ್ಗೆ ಕಾಂಗ್ರೆಸ್‌ ತನ್ನ ನಿಲುವನ್ನು ಸಾರ್ವಜನಿಕವಾಗಿ ಪ್ರಕಟಿಸದಿದ್ದರೆ ವಿರೋಧ ಪಕ್ಷಗಳ ಸಭೆಯಿಂದ ದೂರ ಉಳಿಯುವುದಾಗಿ ಎಎಪಿ ಈ ಹಿಂದೆಯೇ ಎಚ್ಚರಿಸಿತ್ತು. ಪಟ್ನಾದಲ್ಲಿ ನಡೆದ ವಿರೋಧ ಪಕ್ಷಗಳ ಸಭೆಯಲ್ಲೇ ಈ ಬಗ್ಗೆ ಕಾಂಗ್ರೆಸ್‌ ನಿಲುವು ಪ್ರಕಟಿಸಬೇಕು ಎಂದು ಎಎಪಿ ಒತ್ತಾಯಿಸಿತ್ತು. ಕಾಂಗ್ರೆಸ್‌ ಮೌನವನ್ನು ಖಂಡಿಸಿ ಅಂದಿನ ಮಾಧ್ಯಮಗೋಷ್ಠಿಗೆ ಎಎಪಿ ನಾಯಕರು ಗೈರುಹಾಜರಾಗಿದ್ದರು. ಕಾಂಗ್ರೆಸ್‌ ಸ್ಪಷ್ಟ ನಿಲುವು ಪ್ರಕಟಿಸದಿದ್ದರೆ ವಿರೋಧ ಪಕ್ಷಗಳ ಯಾವುದೇ ಸಭೆ ಅಥವಾ ಮೈತ್ರಿಕೂಟದ ಭಾಗವಾಗುವುದು ಕಷ್ಟ ಎಂದೂ ಎಎಪಿ ಹೇಳಿಕೆ ಬಿಡುಗಡೆ ಮಾಡಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.