ADVERTISEMENT

'ಮಹಾ' ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಯತ್ನ; ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಜೂನ್ 2022, 13:19 IST
Last Updated 23 ಜೂನ್ 2022, 13:19 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ನವದೆಹಲಿ: ಮಹಾರಾಷ್ಟ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿರುವುದಾಗಿ ಕಾಂಗ್ರೆಸ್‌ ಮುಖಂಡ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. 'ಸ್ಥಿರ ಸರ್ಕಾರವನ್ನು ಉರುಳಿಸುವ ಮೂಲಕ ತಮ್ಮದೇ ಸರ್ಕಾರ ರಚಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ರಾಷ್ಟ್ರಪತಿ ಚುನಾವಣೆಯ ದೃಷ್ಟಿಯಿಂದಲೂ ಇದನ್ನೂ ಮಾಡಲಾಗುತ್ತಿದೆ. ಆದರೆ, ನಾವು ಮಹಾ ವಿಕಾಸ ಆಘಾಡಿಗೆ ಬೆಂಬಲವಾಗಿದ್ದೇವೆ' ಎಂದಿದ್ದಾರೆ.

'ನಮ್ಮ ಪಕ್ಷವು ಮಹಾ ವಿಕಾಸ ಆಘಾಡಿ ಜೊತೆಗಿದ್ದು, ನಾವು ಒಟ್ಟಾಗಿ ಮುಂದುವರಿಯಲು ಬಯಸುತ್ತೇವೆ. ಪ್ರಸ್ತುತ ಸರ್ಕಾರವು ಮಹಾರಾಷ್ಟ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸುತ್ತಿದೆ. ಬಿಜೆಪಿ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದೆ. ಅವರು ಈ ಹಿಂದೆ ಕರ್ನಾಟಕ, ಮಧ್ಯ ಪ್ರದೇಶ ಹಾಗೂ ಗೋವಾದಲ್ಲಿ ಇದೇ ರೀತಿ ಮಾಡಿದ್ದಾರೆ' ಎಂದು ಹೇಳಿದ್ದಾರೆ.

ಶಿವಸೇನಾದ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವುದಿಲ್ಲ ಎಂದಿರುವ ಕಾಂಗ್ರೆಸ್‌, ಉದ್ಧವ್‌ ಠಾಕ್ರೆ ಅವರ ಮೇಲೆ ವಿಶ್ವಾಸ ಇರುವುದಾಗಿ ಹೇಳಿದೆ.

ADVERTISEMENT

ಶಿವಸೇನಾದ 37 ಶಾಸಕರು ಮತ್ತು ಪಕ್ಷೇತರರು ಸೇರಿ 46 ಶಾಸಕರು ಏಕನಾಥ ಶಿಂಧೆ ನೇತೃತ್ವದಲ್ಲಿ ಸರ್ಕಾರದ ವಿರುದ್ಧ ಬಂಡಾಯ ಎದ್ದು, ಅಸ್ಸಾಂನ ಗುವಾಹಟಿ ಸೇರಿದ್ದಾರೆ. ಅದರಿಂದಾಗಿ ಮಹಾ ವಿಕಾಸ ಆಘಾಡಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದಂತಾಗಿದೆ.

ಬಂಡಾಯ ಶಾಸಕರ ಮಾತುಗಳಿಗೆ ಪ್ರತಿಕ್ರಿಯಿಸಿರುವ ಶಿವಸೇನಾ ಸಂಸದ ಸಂಜಯ್‌ ರಾವುತ್‌, 24 ಗಂಟೆಗಳಲ್ಲಿ ಮುಂಬೈಗೆ ಮರಳಿ, ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರೊಂದಿಗೆ ಚರ್ಚೆ ನಡೆಸುವಂತೆ ತಿಳಿಸಿದ್ದಾರೆ. ಆ ಶಾಸಕರು ಬಯಸಿದರೆ, ಮೈತ್ರಿ ಸರ್ಕಾರದಿಂದ ಹೊರಬರಲೂ ಸಿದ್ಧರಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ನಿನ್ನೆ ಉದ್ಧವ್‌ ಠಾಕ್ರೆ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಗೂ ಸಿದ್ಧ ಎಂದಿದ್ದರು.

ರಾಜಕೀಯ ಬೆಳವಣಿಗೆಗಳ ಬೆನ್ನಲ್ಲೇ ಕಾಂಗ್ರೆಸ್ ಮುಂಬೈನ ಸಹ್ಯಾದ್ರಿ ಅತಿಥಿ ಗೃಹದಲ್ಲಿ ತುರ್ತು ಸಭೆ ನಡೆಸಿದೆ. ಬಾಳಾಸಾಹೇಬ್‌ ಥೋರಾಟ್‌, ನಿತಿನ್‌ ರಾವುತ್‌, ಅಶೋಕ್‌ ಚೌಹಾಣ್‌ ಹಾಗೂ ಪೃಥ್ವಿರಾಜ್‌ ಚೌಹಾಣ್‌ ಸೇರಿದಂತೆ ಹಲವು ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.