ADVERTISEMENT

ವಲಸೆ ಕಾರ್ಮಿಕರಿಗಾಗಿ ಕಾಂಗ್ರೆಸ್‌ನಿಂದ 1000 ಬಸ್ 'ಮೋಸ' ಎಂದ ಶಾಸಕಿ ಅಮಾನತು

ಏಜೆನ್ಸೀಸ್
Published 21 ಮೇ 2020, 7:51 IST
Last Updated 21 ಮೇ 2020, 7:51 IST
   

ಲಖನೌ: ರಾಯ್‌ಬರೇಲಿ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಅದಿತಿ ಸಿಂಗ್ ಅವರನ್ನು ಪಕ್ಷದಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಅಮಾನತು ಮಾಡಲಾಗಿದೆ. ಅವರು ಪಕ್ಷದ ವಿರುದ್ಧ ಅಶಿಸ್ತು ತೋರಿದ್ದರಿಂದಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.

‘ಅದಿತಿ ಅವರು ಪಕ್ಷದ ತೀರ್ಮಾನಕ್ಕೆ ವಿರುದ್ಧವಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರೊಂದಿಗೆ ಸಭೆ ನಡೆಸಿದ್ದರು ಮತ್ತು ವಿಧಾನಸಭೆ ಅಧಿವೇಶನದಲ್ಲಿ ಭಾಗವಹಿಸಿದ್ದರು. ಹಾಗಾಗಿ ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ ಮಹಿಳಾ ಘಟಕವಾದ ‘ಪ್ರಿಯದರ್ಶನಿ’ಯ ರಾಷ್ಟ್ರೀಯ ಉಸ್ತುವಾರಿಯೂ ಆಗಿರುವ ಸಿಂಗ್‌ ಅವರಿಗೆ, ಈ ಬಗ್ಗೆ ಸೂಚನೆ ನೀಡಲಾಗಿದೆ. ಆದರೆಅವರು, ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪ್ರಿಯಾಂಕಾ ವಿರುದ್ಧ ಕಿಡಿಕಾರಿದ್ದು ಮುಳುವಾಯಿತೇ?
‘ಉತ್ತರ ಪ್ರದೇಶಕ್ಕೆ ಹೊಂದಿಕೊಂಡ ಗಡಿಯಲ್ಲಿ 1,000ಕ್ಕೂ ಅಧಿಕ ಬಸ್‌ಗಳನ್ನು ನಿಲ್ಲಿಸಲಾಗಿದೆ. ಬುಧವಾರ ಸಂಜೆ 4 ಗಂಟೆ ವರೆಗೂ ಈ ಬಸ್‌ಗಳು ಅದೇ ಸ್ಥಳಗಳಲ್ಲಿ ಇರುತ್ತವೆ. ಅವುಗಳಲ್ಲಿ ವಲಸೆಕಾರ್ಮಿಕರನ್ನು ಕರೆತನ್ನಿ’ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದರು.

ಈ ಹೇಳಿಕೆ ಸಂಬಂಧ ಪಕ್ಷದ ವಿರುದ್ಧ ಟ್ವಿಟರ್‌ ಮೂಲಕ ಹರಿಹಾಯ್ದಿದ್ದ ಸಿಂಗ್‌, ಇದೊಂದು ‘ಮೋಸ’ ಮತ್ತು ‘ಕ್ರೂರ ಹಾಸ್ಯ’ ಎಂದು ಕಿಡಿಕಾರಿದ್ದರು.

‘ಸಂಕಷ್ಟದ ಸಮಯದಲ್ಲಿ ಇಷ್ಟು ಕೀಳು ಮಟ್ಟದ ರಾಜಕೀಯ ಮಾಡುವ ಅಗತ್ಯವೇನಿದೆ. ಅವರು (ಪ್ರಿಯಾಂಕಾ ಗಾಂಧಿ) 1000 ಬಸ್‌ಗಳ ಪಟ್ಟಿ ನೀಡಿದ್ದಾರೆ. ಅದರಲ್ಲಿ, ಅರ್ಧಕ್ಕಿಂತಲೂ ಹೆಚ್ಚು ಬಸ್‌ಗಳ ನೋಂದಣಿ ಸಂಖ್ಯೆ ನಕಲಿಯಾಗಿದೆ. 297 ಬಸ್‌ಗಳು ಉಪಯೋಗಕ್ಕೆ ಬಾರದವು. 98 ಆಟೋ ರಿಕ್ಷಾಗಳು ಮತ್ತು ಆ್ಯಂಬುಲೆನ್ಸ್‌ನಂತಹ ಬಸ್‌ಗಳಿಗೆ ಪತ್ರವೇ ಇಲ್ಲ. ಎಂಥಾ ಕ್ರೂರ ಹಾಸ್ಯವಿದು. ಬಸ್‌ಗಳಿದ್ದರೆ ಅವುಗಳನ್ನು ರಾಜಸ್ಥಾನ, ಪಂಜಾಬ್‌ ಮತ್ತು ಮಹಾರಾಷ್ಟ್ರಕ್ಕೆ ಏಕೆ ಕಳುಹಿಸಲಿಲ್ಲ’ ಎಂದು ಪ್ರಶ್ನಿಸಿದ್ದರು.

ಮುಂದುವರಿದು, ಲಾಕ್‌ಡೌನ್‌ನಿಂದ ಕೋಟಾದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ವಿದ್ಯಾರ್ಥಿಗಳನ್ನು ಕರೆತರಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಬಸ್‌ಗಳ ವ್ಯವಸ್ಥೆ ಮಾಡಿದ್ದಾರೆ ಎಂದು ಸರ್ಕಾರವನ್ನು ಬೆಂಬಲಿಸಿದ್ದರು.

‘ಯೋಗಿ ಆದಿತ್ಯನಾಥ್‌ ಜಿ ಅವರು, ಬಸ್‌ಗಳನ್ನು ವಾಪಸ್‌ ಕರೆತರಲು ರಾತ್ರಿಯಿಡೀ ಶ್ರಮಿಸಿದ್ದರು. ರಾಜಸ್ಥಾನ ಮುಖ್ಯಮಂತ್ರಿ ಅವರೂ ಇದನ್ನು ಶ್ಲಾಘಿಸಿದ್ದರು’ ಎಂದು ಹೇಳಿದ್ದರು.

ಸಿಂಗ್‌ ಅವರನ್ನು ಪಕ್ಷದಿಂದ ಅಮಾನತು ಮಾಡಲು ಇದು ಮುಖ್ಯಕಾರಣ ಎನ್ನಲಾಗಿದೆ.

ಬೇರೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಂಗ್ ವಿರುದ್ಧ ಈಗಾಗಲೇ ನೀಡಿರುವ ದೂರಿನ ವಿಚಾರಣೆ ವಿಧಾನಸಭೆ ಸಭಾಪತಿ ಬಳಿ ಬಾಕಿ ಇದೆ. ಹೀಗಾಗಿ ಅವರನ್ನುಶಾಸಕಿಸ್ಥಾನದಿಂದಲೂಅನರ್ಹಗೊಳಿಸುವಂತೆ ಪಕ್ಷ ಮನವಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.