ADVERTISEMENT

ನೃತ್ಯ ಮಾಡಿ, ಗುಂಡು ಹಾರಿಸಿದ ಕಾಂಗ್ರೆಸ್‌ ಶಾಸಕ: ಕ್ರಮಕ್ಕೆ ಮುಂದಾದ ಪೊಲೀಸರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಜನವರಿ 2023, 14:32 IST
Last Updated 2 ಜನವರಿ 2023, 14:32 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಭೋಪಾಲ್‌: ಮಧ್ಯಪ್ರದೇಶದ ಕಾಂಗ್ರೆಸ್‌ ಶಾಸಕ ಸುನೀಲ್ ಸರಾಫ್ ಅವರು ಹೊಸ ವರ್ಷದ ಖಾಸಗಿ ಕಾರ್ಯಕ್ರಮದಲ್ಲಿ ನೃತ್ಯ ಮಾಡಿ, ಪಿಸ್ತೂಲ್‌ನಿಂದ ಗುಂಡು ಸಿಡಿಸಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಶಾಸಕರ ವಿರುದ್ಧ ಮಧ್ಯಪ್ರದೇಶ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಸಾರ್ವಜನಿಕರು ಟ್ವೀಟ್‌ ಮಾಡಿದ್ದಾರೆ. ಶಾಸಕ ಸುನೀಲ್‌ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಮಧ್ಯಪ್ರದೇಶ ಪೊಲೀಸರು ಹೇಳಿದ್ದಾರೆ.

ಈ ಘಟನೆಯನ್ನು ಖಂಡಿಸಿ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಶಾಸಕ ಸುನೀಲ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ADVERTISEMENT

ಶಾಸಕ ಸುನೀಲ್‌ ನೃತ್ಯ ಮಾಡಿ, ಗುಂಡು ಹಾರಿಸಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಶಾಸಕರ ನಡೆಗೆ ಆಕ್ರೋಶ ವ್ಯಕ್ತವಾಗಿದೆ.

ವಿಡಿಯೊದಲ್ಲಿ ಶಾಸಕ ಸುನೀಲ್ ಡಿಸೆಂಬರ್‌ 31ರ ರಾತ್ರಿ ಹೊಸ ವರ್ಷಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ವೇದಿಕೆಯಲ್ಲಿ ಇತರ ನಾಲ್ವರ ಜೊತೆ ನೃತ್ಯ ಮಾಡುವಾಗ ಕೈಯಲ್ಲಿ ಪಿಸ್ತೂಲ್‌ ಹಿಡಿದಿದ್ದರು. ನೃತ್ಯ ಮಾಡುತ್ತ ಅವರು ಗುಂಡು ಹಾರಿಸಿದ್ದರು. ಈ ವಿಡಿಯೊ ಆನ್‌ಲೈನ್‌ನಲ್ಲಿ ಹಂಚಿಕೆಯಾಗುತ್ತಿದೆ.

ಕಳೆದ ಅಕ್ಟೋಬರ್‌ ತಿಂಗಳಲ್ಲಿ ರೇವಾಂಚಲ್ ಎಕ್ಸ್‌ಪ್ರೆಸ್‌ನಲ್ಲಿ ವಿವಾಹಿತ ಮಹಿಳೆಯೊಬ್ಬರಿಗೆ ಶಾಸಕ ಸುನೀಲ್‌ ಕಿರುಕುಳ ನೀಡಿದ್ದರು. ಈ ಘಟನೆ ವಿವಾದಕ್ಕೆ ಕಾರಣವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.